ಹುಣಸೂರು: ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹುಣಸೂರಿನ ಜಗಜೀವನ್ ರಾಂ ಭವನದಲ್ಲಿ ಆಯೋಜಿಸಿದ್ದ ಕನ್ನಡಕ್ಕಾಗಿ ನಾವು ಕಾರ್ಯಕ್ರಮದಲ್ಲಿ ಅರ್ಚನಾ ಮತ್ತು ತಂಡದವರು ಅನೇಕ ಕನ್ನಡದ ಗೀತೆಗಳನ್ನು ಹಾಡಿ ರಂಜಿಸಿದರು.
ಜೋಗದ ಸಿರಿ ಬೆಳಕಿನಲ್ಲಿ…ಬಾರಿಸು ಕನ್ನಡ ಡಿಂಡಿಮವ…ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..ಹಾಗೂ ಕರುನಾಡ ತಾಯಿ ಸದಾ ಚಿನ್ಮಯಿ.. ಹಾಡುಗಳಿಗೆ ಫಿದಾ ಆದ ಕಾಲೇಜು ವಿದ್ಯಾರ್ಥಿನಿಯರು, ಅತಿಥಿಗಳು ಕನ್ನಡಮ್ಮನ ಗಾಯನದಲ್ಲಿ ಮಿಂದೆದ್ದರು..
ಕನ್ನಡದ ಹಾಡುಗಳಿಗೆ ಸರಕಾರಿ ಮಹಿಳಾ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ನಿಂತು ಹಾಡುಗಳಿಗೆ ಚಪ್ಪಾಳೆ ತಟ್ಟುತ್ತಾ, ಕೆಲವರು ಕುಣಿಯುತ್ತಾ ಸಂಭ್ರಮಿಸಿದರು.
ಕನ್ನಡಮ್ಮನ ಹಾಡುಗಳೇ ರೋಮಾಂಚನ;
ಕಾರ್ಯಕ್ರಮ ಉಧ್ಘಾಟಿಸಿದ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಕನ್ನಡಮ್ಮನಿಗೆ ಸಂಬಂಧಿಸಿದ ಹಾಡುಗಳೇ ಒಂದು ರೋಮಾಂಚನ, ಆದರೆ ಕೋವಿಡ್, ಮಳೆ ಸಂಕಷ್ಟ, ಬೆಲೆ ಏರಿಕೆಯ ನಡುವೆ ಇಂತಹ ಕಾರ್ಯಕ್ರಮ ಅವಶ್ಯವಿತ್ತೆ ಎಂದು ಪ್ರಶ್ನಿಸಿದರೇ ನನ್ನನ್ನು ಕನ್ನಡ ವಿರೋದಿ ಎಂದು ಬಿಂಬಿಸುತ್ತಾರೆ. ಕನ್ನಡ ಮೇಳೈಸುವ ಅನೇಕ ಹಾಡುಗಳು ಸಾಕಷ್ಟಿದ್ದರೂ ಕೇವಲ ಮೂರು ಹಾಡುಗಳನ್ನು ಮಾತ್ರ ಆಯ್ಕೆ ಮಾಡಿರುವುದು ಸರಿಯಲ್ಲವೆಂದು ಹೇಳಿ ರವಿಚಂದ್ರನ್ ಚಿತ್ರದ ಕರುನಾಡ ತಾಯಿ ಸದಾ ಚಿನ್ಮಯಿ ಹಾಡನ್ನು ಹಾಡಿಸಿದರು. ಕೋವಿಡ್‌ನ ಮೂರನೇ ಅಲೆ ಇರುತ್ತದೆ. ಮೈಮರೆಯದೇ ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ, ಆರೋಗ್ಯ, ಶಿಕ್ಷಣದ ಕಡೆ ಗಮನನೀಡಿರೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅನೇಕ ಕನ್ನಡ ಹಾಡುಗಳನ್ನು ಹಾಡಿದರು. ನೃತ್ಯ ಮಾಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸೌರಭ ಸಿದ್ದರಾಜು, ಉಪಾಧ್ಯಕ್ಷ ದೇವನಾಯ್ಕ, ಪ್ರಾಚಾರ್ಯರಾದ ಜ್ಞಾನಪ್ರಕಾಶ್, ರಾಮೇಗೌಡ, ವೆಂಕಟೇಶಯ್ಯ, ಸಹಾಯಕ ಪ್ರಾದ್ಯಾಪಕರಾದ ಪುಟ್ಟಶೆಟ್ಟಿ, ಬಿಎಂ.ನಾಗರಾಜ್, ಪುರಸಭೆ ಮಾಜಿ ಸದಸ್ಯ ಜಯರಾಮ್ ಮತ್ತಿತರಿದ್ದರು.