Advertisement
ಏಳು ಶಿಶು ಸಾಹಿತ್ಯ ಕೃತಿಗಳು, ಮೂರು ಕಥಾ ಸಂಕಲನ, ಏಳು ವಿಮರ್ಶಾ ಸಂಕಲನ, ಮೂರು ನಾಟಕಗಳು, ವ್ಯಕ್ತಿ ಚಿತ್ರ, ಒಂಬತ್ತು ಅನುವಾದಿತ ಕೃತಿಗಳು, ಹಲವು ಸಂಪಾದಿತ ಕೃತಿಗಳು ಹೀಗೆ ಸುಮಾರು 70 ಕ್ಕಿಂತ ಹೆಚ್ಚು ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅವರು ಕನ್ನಡ ಜನಮಾನಸದಲ್ಲಿ ಸಿªರವಾಗಿರುತ್ತಾರೆ.
Related Articles
Advertisement
ಸಂಘಟನೆಯಲ್ಲಿ ಸನದಿಯವರು ಎತ್ತಿದ ಕೈ. ಮುಂಬಯಿ ಕನ್ನಡಿಗರ ಮಾತೃಸಂಸ್ಥೆಯಾದ ಕರ್ನಾಟಕ ಸಂಘದಲ್ಲಿ ಹಲವಾರು ವರ್ಷ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಬಳಿಕ ಆ ಜವಾಬ್ದಾರಿಯನ್ನು ನನ್ನ ಹೆಗಲಿಗೇರಿಸಿದರು. ಅಧ್ಯಕ್ಷರಾದ ಸದಾನಂದ ಶೆಟ್ಟಿ ಹಾಗೂ ಸಾಹಿತಿ ವ್ಯಾಸರಾಯ ಬಲ್ಲಾಳರ ಜೊತೆಗೂಡಿ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದ ಸನದಿಯವರು ಆಗಾಗ ಬಹುಭಾಷಾ ಕವಿಗೋಷ್ಠಿಯನ್ನೂ ಯಶಸ್ವಿಯಾಗಿ ಆಯೋಜಿಸುತ್ತಿದ್ದರು.
1993ರಲ್ಲಿ ಮುಂಬಯಿಯಲ್ಲಿ ನಡೆದ ರಕ್ತಪಾತದಿಂದ ಮನ ನೊಂದ ಸದಾನಂದ ಶೆಟ್ಟಿಯವರು ಕರ್ನಾಟಕ ಸಂಘ, ಮುರಿದ ಮನಸ್ಸುಗಳನ್ನು ಹೇಗೆ ಬೆಸೆಯಲು ಸಾಧ್ಯ ಎಂದಾಗ ಸನದಿಯವರು “ಸಂಗೀತ ಹಾಗೂ ಲಲಿತ ಕಲೆಗಳಿಂದ’ ಎಂದರು. ಹೀಗೆ ಹುಟ್ಟಿಕೊಂಡ ಕರ್ನಾಟಕ ಸಂಘದ ಕಲಾ ವಿಭಾಗವೇ ಕಲಾಭಾರತಿ, ಚಿದಾನಂದ ಶೆಟ್ಟರು, ವ್ಯಾಸರಾಯ ಬಲ್ಲಾಳರು, ಬಿ. ಎ. ಸನದಿಯವರು ಹಾಗೂ ನಾನು ಹುಟ್ಟು ಹಾಕಿದ ಕಲಾಭಾರತಿ. ಪ್ರತಿ ಭಾನುವಾರ 10ರಿಂದ 12ರವರೆಗೆ ಖ್ಯಾತ ಕಲಾವಿದರಿಂದ ಸಂಗೀತ ಕಛೇರಿ, ನೃತ್ಯ, ನಾಟಕ ಏರ್ಪಡಿಸುತ್ತ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಕಲಾವಿದರು ಕಲಾಭಾರತಿಯಲ್ಲಿ ಕಾರ್ಯಕ್ರಮ ನೀಡುವುದು ಒಂದು ಪ್ರತಿಷ್ಠೆಯ ವಿಷಯ ಎಂದು ಭಾವಿಸಿದ್ದಾರೆ. ಕರ್ನಾಟಕ ಸಂಘದ ಈ ವಿಭಾಗಕ್ಕೆ ಕಲಾಭಾರತಿ ಎನ್ನುವ ನಾಮಕರಣ ಮಾಡಿದವರೂ ಸನದಿಯವರೇ. ದೇಶದ ಖ್ಯಾತ ಸಂಗೀತ ಸಂಗೀತ ವಿಮರ್ಶಕ ಪಿ. ಜಿ. ಬುರ್ಡೆಯವರು ಕಲಾಭಾರತಿ ತಂಡವನ್ನು ಸೇರಿಕೊಂಡ ಬಳಿಕ, ಇದು ಇನ್ನಷ್ಟು ವಿಸ್ತೃತಗೊಂಡಿತು.
ಸನದಿಯವರು ಉರ್ದು ಮಾತೃಭಾಷೆಯಾದರೂ ಅವರ ಕನ್ನಡ ಸ್ಪುಟ ಹಾಗೂ ಕಳಂಕರಹಿತ. ಕನ್ನಡ, ಸಂಸ್ಕೃತಗಳಲ್ಲಿ ಎಂಎ ಮಾಡಿದ ಅವರು ಬೇಂದ್ರೆಯವರ ಕವಿತೆಯನ್ನು ವರ್ಣಿಸುವಷ್ಟೇ ಸುಲಭವಾಗಿ ಕಾಳಿದಾಸನ ಶಾಕುಂತಲವನ್ನೂ ವರ್ಣಿಸಬಲ್ಲರು. ಎಂದೂ ಕೋಮಿನ ಬಗ್ಗೆ ಮಾತಾಡದ ಅವರ ಸಮನ್ವಯ ದೃಷ್ಟಿಕೋನ ಇತರರಿಗೆ ಆದರ್ಶಪ್ರಾಯವೆನ್ನಬೇಕು. ವಚನ ಸಾಹಿತ್ಯದ ಕುರಿತು ಅಧಿಕೃತವಾಗಿ ಮಾತಾಡಬಲ್ಲ ಅವರು ನಾಗಲಾಂಬಿಕೆ ಎನ್ನುವ ನಾಟಕವನ್ನು ಬರೆದಿದ್ದು ಅದು ಹಲವು ಪ್ರದರ್ಶನಗಳನ್ನು ಕಂಡಿದೆ.
ಸನದಿಯವರ ಕವಿತೆಗಳಲ್ಲಿರುವ ಮಾನವತೆಯ ಸೊಬಗನ್ನು ಕಂಡ ಗೌರೀಶ ಕಾಯ್ಕಿಣಿಯವರು ಅವರನ್ನು ಮಾನವ್ಯ ಕವಿ ಎಂದು ಕೊಂಡಾಡಿದ್ದಾರೆ. ಅಂದಮಾತ್ರಕ್ಕೆ ಸನದಿಯವರ ಕೊಡುಗೆ ಕಾವ್ಯಕ್ಕಷ್ಟೆ ಸೀಮಿತವಾಗಿಲ್ಲ. ವಿಚಾರಸಾಹಿತ್ಯ, ವಿಮರ್ಶೆ, ಪ್ರಬಂಧ, ಸಣ್ಣಕತೆ ಇತ್ಯಾದಿ ಕ್ಷೇತ್ರಗಳಲ್ಲೂ ಅವರು ಕೈಯಾಡಿಸಿದ್ದಾರೆ. ಅವರ ಕಥಾಸಂಕಲನಕ್ಕೆ ನಾನು ಮುನ್ನುಡಿ ಬರೆದಿದ್ದೆ.
ಸನದಿಯವರು ತನ್ನ ಪತ್ನಿಯನ್ನು ನಯನಾ ಎಂದು ಹೆಸರಿಸಿದರೆ, ಕುಮಟಾದ ತನ್ನ ಮನೆಯನ್ನು “ಮಿಲನ’ ಎಂದು ಕರೆದಿದ್ದಾರೆ.
ತಮ್ಮ ಸಾಧನೆಗಾಗಿ ಸನದಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಹಾಗೂ ಪ್ರತಿಷ್ಠಿತ ಪಂಪ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಯಶವಂತ ಚಿತ್ತಾಲರ ಬಳಿಕ ಮುಂಬಯಿಯ ಕನ್ನಡಿಗನಿಗೆ ಈ ಪ್ರಶಸ್ತಿ ದೊರೆತಿದ್ದು ಮುಂಬಯಿ ಕನ್ನಡಿಗರ ಸಂಭ್ರಮಕ್ಕೆ ಕಾರಣವಾಗಿತ್ತು.
ವ್ಯಾಸರಾವ್ ನಿಂಜೂರು