ಹೌದು, ಅದೊಂದು ದೈತ್ಯ ಹರಿವು ಹೊಂದಿದ ಕನ್ನಡದ ದೊಡ್ಡ ಕಣಿವೆ, ಏನಿಲ್ಲ ಅಲ್ಲಿ ? ಹಸುರು, ಚೆಲುವು, ತಂಗಾಳಿ, ಸಂಪ್ರೀತಿ, ಸೌಜನ್ಯ, ಹಾಡು, ಪಾಡು, ಗೆಳೆತನ, ಒಲವು, ನವ್ಯ, ನವೋದಯಕ್ಕೂ ಸಾಕ್ಷಿಯಾಗಿ ನಿಲ್ಲುವ ಮನೋಧರ್ಮ. ನಾಡೋಜ ಚೆನ್ನವೀರ ಕಣವಿ ಎಂಬ ಅಪ್ಪಟ ದೇಶಿ ಸಜ್ಜನಿಕೆಯ ಕವಿ ಹೃದಯದ ಕಾವ್ಯದ ಉಸಿರು ನಿಲ್ಲಿಸಲಾದೀತೆ? ಇದು ಅಸಾಧ್ಯ. ಏಕೆಂದರೆ ಅದು ಕವಿತ್ವದ ಸೆಲೆ, ಸ್ಫೂರ್ತಿಯ ಚಿಲುಮೆ. ಹೀಗಾಗಿ ಅದು ನಿತ್ಯ ನಿರಂತರ.
Advertisement
ಧಾರವಾಡವೆಂಬ ಸಾಂಸ್ಕೃತಿಕ ನಗರಿ ಹಸುರು ಸಿರಿ ಹೊದ್ದು ಮಲಗಿದ ತುಣುಕು ಅಷ್ಟೇ. ಆ ಊರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಗದಗ ಜಿಲ್ಲೆಯ ಹೊಂಬಳದಿಂದ ಯುವಕನೊಬ್ಬ ಬಂಡಿ ಏರಿ ಬಂದಾಗ ವ್ಯಂಗ್ಯದ ನಗೆ ನಕ್ಕವರಿಗೆ ಲೆಕ್ಕವಿಲ್ಲ. ಆದರೆ ಅಕ್ಷರಕ್ಕೊಂದು ಅಕ್ಷರ, ಪ್ರಾಸಕ್ಕೊಂದು ಪ್ರಾಸ, ಜನ್ಯಕ್ಕೊಂದು ಸೌಜನ್ಯವನ್ನು ಸೇರಿಸಿಕೊಂಡು ದೈತ್ಯ ಆಲದ ಮರಗಳ ಪಕ್ಕದಲ್ಲಿಯೇ ಕೋಗಿಲೆಗಳು ಕುಳಿತು ಕೂಗುವ ಸಿಹಿ ಹಣ್ಣಿನ ಮಾಮರವಾಗಿ ಬೆಳೆದು ನಿಂತವರು ಕವಿ ಚೆನ್ನವೀರ ಕಣವಿ.
Related Articles
Advertisement
ಇನ್ನೊಂದು ಬಳಗದಲ್ಲಿದ್ದ ಡಾ| ಕಾರ್ನಾಡ್, ಡಾ| ಜಿ.ಎಸ್. ಆಮೂರ, ಡಾ| ಕೀರ್ತಿನಾಥ ಕುರ್ತಕೋಟಿ, ಜಿ.ಬಿ.ಜೋಶಿ, ಡಾ|ಪಾಟೀಲ ಪುಟ್ಟಪ್ಪ, ಶಂ.ಭಾ. ಜೋಶಿ, ವಿ.ಕೃ.ಗೋಕಾಕ ಹೀಗೆ ಎಲ್ಲ ಕಡೆಗೂ ಸಲ್ಲುವ ಮನಃಸ್ಥಿತಿ. ಸ್ನೇಹ ಸಮ್ಮಿಲನಕ್ಕೆ ಕೊಂಡಿ ಯಾಗಿದ್ದ ಅವರ ಕಪಾಟುಗಳ ತುಂಬಾ ಎಲ್ಲರ ಬರಹ, ಎಲ್ಲರ ವಿಚಾರಗಳು, ಎಲ್ಲರ ಪುಸ್ತಕಗಳು ತುಂಬಿದ್ದುದು ಅವರ ಶಿಶಿರ ಸ್ನೇಹಕ್ಕೆ ಸಾಕ್ಷಿ.
ಸುಗಮ ಸಂಗೀತಕ್ಕೆ ಸಿಕ್ಕ ಚೆನ್ನ: ಕವಿ ಕಣವಿ ಅವರ ಕಾವ್ಯಗಳು ನವೋದಯ, ನವ್ಯದ ಸಾಹಿತ್ಯದ ವರ್ತುಲದಲ್ಲಿ ಮಾತ್ರ ಉಳಿಯಲಿಲ್ಲ. ವಿವಿಗಳ ವಿಚಾರ ಸಂಕಿರಣ, ಕವಿಗೋಷ್ಠಿಯಲ್ಲಿನ ಪರಾಮರ್ಶೆಗಷ್ಟೇ ಸೀಮಿತವಾಗಲಿಲ್ಲ. ಬದಲಾಗಿ ಎಲ್ಲ ವರ್ಗದ ಜನರನ್ನೂ ತಲುಪಿದವು. ಕನ್ನಡದ ಸುಗಮ ಸಂಗೀತ ಪರಂಪರೆ, ಆಕಾಶವಾಣಿ, ಕರ್ನಾಟಕ ವಿವಿ ಸಂಗೀತ ವಿಭಾಗದ ಯುವ ಮತ್ತು ಉತ್ಸಾಹಿ ಮನಸ್ಸುಗಳಿಗೆ ಕಣವಿ ಅವರ ಕಾವ್ಯ ಆಹಾರವಾಯಿತು. ಸುಗಮ ಸಂಗೀತ ಲೋಕದ ಖ್ಯಾತ ಗಾಯಕರಾದ ಸಿ.ಅಶ್ವತ್ಥ್, ಮೈಸೂರು ಅನಂತಸ್ವಾಮಿ, ಜಿ.ವಿ. ಅತ್ರಿ, ಸಂಗೀತಾ ಕಟ್ಟಿ ಮುಂತಾದವರ ಸಿರಿಕಂಠದಲ್ಲಿ ಕಣವಿಯವರ ರಚನೆಯ ಭಾವಗೀತೆಗಳು ಮೊಳಗಿದವು. ಪರಿಣಾಮ ವಿಶ್ವ ಭಾರತಿಗೆ ಕನ್ನಡದಾರತಿ, ಮುಂಜಾವದಲಿ ಸೂರ್ಯನ ಮಕಮಲ್ಲಿನಲಿ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ, ವಿಶ್ವ ವಿನೂತನ ವಿದ್ಯಾಚೇತನದಂತಹ ಹಾಡುಗಳು ಜನಮಾನಸದಲ್ಲಿ ನಲಿಯುಂತಾಯಿತು.
ಕನ್ನಡ ಉಸುರಿದ ಕಾವ್ಯಕಣಿ: ಕನ್ನಡ ನಾಡು-ನುಡಿಯ ವಿಚಾರ ಬಂದಾಗ ನಾಡ ಪ್ರೇಮ ಮೆರೆಸುವಂಥ ಕಾವ್ಯ ರಚಿಸುವ ಮೂಲಕ ಕವಿ ಕಣವಿ ಕನ್ನಡಿಗರ ಮನಗೆದ್ದರು. “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ…’ ಕಣವಿಯವರ ಅತ್ಯುತ್ತಮ ರಚನೆಗಳಲ್ಲಿ ಒಂದು. ಕವಿವಿ ಪ್ರಸಾರಾಂಗದಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯದ ಸಿರಿವಂತಿಕೆ ಹೆಚ್ಚಿಸುವಂಥ ಕೃತಿಗಳನ್ನು ರಚಿಸಿದ್ದು ಅವರ ಹೆಚ್ಚುಗಾರಿಕೆ. ಕಣವಿ ಅವರಿಗೆ ಬಲಗೈಯಂತೆ ಇದ್ದವರು ಸಂಶೋಧಕ ಡಾ| ಎಂ.ಎಂ.ಕಲಬುರ್ಗಿ. ಇಬ್ಬರದೂ ಅಕ್ಕ ಪಕ್ಕದ ಮನೆಗಳು. ಅವರೊಂದಿಗೆ ಒಡನಾಟ. ಕಾವ್ಯದ ಅನುಸಂಧಾನ, ಸಂಶೋಧನೆ ಯ ಫಲ ಒಟ್ಟೊಟ್ಟಿಗೆ ಸಂಭ್ರಮಿಸುವ ಅವರ ಸ್ನೇಹ ಕೊನೆವರೆಗೂ ಅಪ್ಪಟವಾಗಿ ತ್ತು. ಡಾ| ಕಲಬುರ್ಗಿ ಅವರ ಹತ್ಯೆ ಕಣವಿ ಅವರನ್ನು ಹಿಂಡಿ ಹಿಪ್ಪೆ ಮಾಡಿದ್ದು ಅಷ್ಟೇ ಸತ್ಯ.
ಎಲ್ಲೆಲ್ಲೂ ಸಲ್ಲುತ್ತಿದ್ದ ಕವಿ ಹೃದಯಿ: ಚೆನ್ನವೀರ ಕಣವಿ ಬರೋಬ್ಬರಿ 94 ವರ್ಷ ಬದುಕಿದವರು. ಅವರು ತಮ್ಮ 58ನೇ ವಯಸ್ಸಿನಲ್ಲಿ ನಿವೃತ್ತರಾದರೂ ಅನಂತರವೂ ಸಾಹಿತ್ಯ ಲೋಕದ ಸಾಂಗತ್ಯದಲ್ಲಿಯೇ ಕಾಲ ಕಳೆದವರು. ಸಾಹಿತ್ಯದ ಎಲ್ಲ ಬಣಗಳ ಜತೆಗೂ ಸಲ್ಲುತ್ತಿದ್ದರು. “ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ ‘ ಎಂದು ಕುಟು ಕಿದವರಿಗೆ, ನಾನು ಎಲ್ಲೆಲ್ಲೂ ಸಲ್ಲುತ್ತೇನಯ್ಯಾ ಎಂದು ಮೆಲುದನಿಯಲ್ಲೇ ಹೇಳಿದವರು ಕಣವಿ.
ಕಡೆಗೂ ದಕ್ಕದ “ರಾಷ್ಟ್ರಕವಿ’ಭಾಗ್ಯಕವಿ ಕಣವಿ ಅವರು ಡಾ|ಜಿ.ಎಸ್.ಶಿವರುದ್ರಪ್ಪ ಅವರ ಅನಂತರ ರಾಷ್ಟ್ರಕವಿ ಸಮ್ಮಾನ ಪಡೆಯುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರು. ಈ ಬಗ್ಗೆ ಹಲವು ಬಾರಿ ಸರಕಾರದ ಮಟ್ಟದಲ್ಲಿ ಚರ್ಚೆಯೂ ನಡೆದು, ಇನ್ನೇನು ಕವಿ ಕಣವಿ ಅವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಗುತ್ತದೆ ಎಂಬೆಲ್ಲ ಸುದ್ದಿಗಳು ದಟ್ಟವಾಗಿದ್ದವು. ಆದರೆ ಸರಕಾರದಿಂದ ನೇಮಕವಾಗಿದ್ದ ಹಿರಿಯ ವಕೀಲರಾದ ಕೋ.ಚೆನ್ನಬಸಪ್ಪ ನೇತೃತ್ವದ ಸಮಿತಿ, ರಾಷ್ಟ್ರಕವಿ ಎಂಬ ಬಿರುದು ಕೊಡುವುದೇ ಸರಿಯಾದ ಪದ್ಧತಿ ಅಲ್ಲ ಎಂದು ಅಭಿಪ್ರಾಯ ಪಟ್ಟು, ವರದಿ ನೀಡಿದ್ದರಿಂದ ಕವಿ ಕಣವಿ ಅವರು ರಾಷ್ಟ್ರಕವಿ ಆಗುವುದು ತಪ್ಪಿತು ಎನ್ನುವ ಮಾತು ಸಾಹಿತ್ಯ ಲೋಕದಲ್ಲಿ ಪ್ರಸ್ತಾವವಾಗುತ್ತಲೇ ಇದೆ. -ಬಸವರಾಜ ಹೊಂಗಲ್