Advertisement
ಕನ್ನಡಿಗರಿಗೆ ಸ್ಫೂರ್ತಿಯ ಸೆಲೆಯಾಗಿ, ಸ್ವಾಭಿಮಾನದ ಪ್ರತೀಕ ವಾಗಿರುವ ಹಳದಿ-ಕೆಂಪು ಬಣ್ಣದ ಬಾವುಟ ಕಂಡಾಕ್ಷಣ ನೆನಪಾಗುವುದು ಮ. ರಾಮಮೂರ್ತಿ. ಇವರು ಕನ್ನಡಿಗರಿಗೆ ಬಾವುಟ ವೊಂದನ್ನು ನೀಡಿದರು. ಇದೊಂದೇ ಅವರ ಕೊಡುಗೆಯಲ್ಲ. ಕನ್ನಡದ ಸಮಸ್ಯೆಗಳ ಪರಿಹಾರಕ್ಕೆ ಹೊಸ ಹಾದಿ ನಿರ್ಮಿಸಿ, ಕರ್ನಾಟಕ ಸಂಯುಕ್ತ ರಂಗ ಕಟ್ಟುವ ಮೂಲಕ ಕನ್ನಡ ಹೋರಾಟಕ್ಕೆ ಹೊಸ ಆಯಾಮ ನೀಡಿದರು. ಕನ್ನಡಾಭಿಮಾನಿಗಳು ಇವರ ಧೀರೋದಾತ್ತ ಕೆಚ್ಚನ್ನು ಕಂಡು ಕನ್ನಡ ವೀರಸೇನಾನಿ ಎಂದು ಕರೆದರು. ಮ. ರಾಮಮೂರ್ತಿ ಅವರು ಹುಟ್ಟಿದ್ದು 1918ರ ಮಾರ್ಚ್ 11. ತಂದೆ ಖ್ಯಾತ ಸಾಹಿತಿ, ಪತ್ರಿಕೋದ್ಯಮಿ, ಸ್ವಾತಂತ್ರ ಹೋರಾಟಗಾರ ವೀರಕೇಸರಿ ಸೀತಾರಾಮ ಶಾಸ್ತ್ರಿ, ತಾಯಿ ಪಾರ್ವತಮ್ಮ. ದುರಂತವೆಂದರೆ 1967ರ ಡಿಸೆಂಬರ್ 25ರಂದು ತಲಘಟ್ಟಪುರದ ಜಮೀನಿನಲ್ಲಿ ತಾವೇ ತೋಡಿಸುತ್ತಿದ್ದ ಬಾವಿಯ ಮಣ್ಣು ಕುಸಿದು ಈ ಮಹಾನ್ ಕನ್ನಡ ನಾಯಕ ತನ್ನಿಬ್ಬರು ಪುತ್ರರೊಂದಿಗೆ ಮಣ್ಣಾಗಿ ಹೋದದ್ದು. ಇಂದು ಅವರ ಪತ್ನಿ ಕಮಲಮ್ಮ ಅನಾಥರಾಗಿ ಶಾರದ ಕುಟೀರದಲ್ಲಿದ್ದಾರೆ.
ಕನ್ನಡನಾಡು ರಚನೆಯಾದ ಸ್ವಲ್ಪ ಕಾಲದಲ್ಲೇ ಕನ್ನಡಿಗ “ಸ್ಥಳೀಯ ನಿರಾಶ್ರಿತ’, “ಕನ್ನಡ ಅನಾಥ’ ಅನ್ನುವ ವಾತಾವರಣ ನಿರ್ಮಾಣ ವಾಯಿತು. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲೊಡ್ಡುವ ಸನ್ನಿವೇಶಗಳು ಪ್ರತಿದಿನ ಸೃಷ್ಟಿಯಾಗುತ್ತಿದ್ದವು. ಎಷ್ಟೋ ಬಡಾವಣೆಗಳಲ್ಲಿ ಕನ್ನಡ ಅಂದರೆ ಎನ್ನಡ ಅನ್ನುವ ಪರಿಸ್ಥಿತಿ. ಇದೇ ಕಾಲಘಟ್ಟದಲ್ಲಿ ಬೆಂಗಳೂರಿಗೆ ಬಂದ ಕೋಣಂದೂರು ಲಿಂಗಪ್ಪ, ಬಂದಗದ್ದೆ ರಮೇಶ್ ಮುಂತಾದ ವಿದ್ಯಾರ್ಥಿಗಳ ಗುಂಪು “ಕನ್ನಡ ಯುವಜನ ಸಭಾ’ ಎಂಬ ಹೆಸರಿನಲ್ಲಿ ಕನ್ನಡಪರ ಚಟು ವಟಿಕೆ ಆರಂಭಿಸಿದರು. ಆದರೆ, ಕನ್ನಡ ಹೋರಾಟವು ಸಾರ್ವ ಜನಿಕರ ಗಮನ ಸೆಳೆದದ್ದು ಅ.ನ.ಕೃ. ಮತ್ತು ಮ. ರಾಮಮೂರ್ತಿ ಅವರು ಕನ್ನಡ ಚಳವಳಿ ಪ್ರವೇಶಿಸಿದ ನಂತರವೇ. 04-02-1962ರಂದು “ಬೆಂಗಳೂರು ಕನ್ನಡಿಗರ ಸಮಾವೇಶ’ ನಡೆಯಿತು. ಆ ಸಮಾವೇಶದಲ್ಲಿ ಕಾರ್ಯಕರ್ತರನ್ನು ಸಂಪರ್ಕಿ ಸಲು “ಕನ್ನಡ ಯುವಜನ’ ಎಂಬ ಪಾಕ್ಷಿಕವನ್ನು ಬಿಡುಗಡೆ ಮಾಡಲಾಯಿತು. ಈ ಸಮಾವೇಶದ ನಂತರ ನಗರದಾದ್ಯಂತ ಗೋಡೆಗಳ ಮೇಲೆ “ಕನ್ನಡ ನಾಡಿನ ಏಳಿಗೆಗಾಗಿ ದುಡಿವೆವು ನಾವು; ಮಡಿವೆವು ನಾವು ಒಂದಾಗಿ’ ಎಂಬ ಬರಹ ಕಾಣಿಸಿಕೊಂಡಿತು. ಬೀದಿ ಕನ್ನಡ ಹೋರಾಟ ಆರಂಭವಾಯಿತು
ಸಮಾವೇಶದಿಂದ ಪ್ರಚೋದಿತರಾದ ಕನ್ನಡಾಭಿಮಾನಿಗಳು ಬೆಂಗಳೂರಿನಲ್ಲಿ ನಡೆಯುವ ರಾಮನವಮಿ ಮುಂತಾದ ಸಂಗೀತ ಕಚೇರಿಗಳಲ್ಲಿ ಕನ್ನಡ ಕಲಾವಿದರಿಗೆ, ಕನ್ನಡ ಗೇಯ ಕೃತಿಗಳಿಗೆ ಅವಕಾಶವಿಲ್ಲದಿರುವುದನ್ನು ಪ್ರತಿಭಟಿಸಲು ನಿರ್ಧರಿಸಿದರು. 27- 05-1962ರಂದು ಚಾಮರಾಜಪೇಟೆ ರಾಮ ಸೇವಾ ಮಂಡಳಿಯಲ್ಲಿ ಎಂ.ಎಸ್. ಸುಬ್ಬಲಕ್ಷ್ಮೀ ಅವರ ಕಛೇರಿ ವ್ಯವಸ್ಥೆಯಾಗಿತ್ತು. ಅಂದು ಅ.ನ.ಕೃ., ಮ.ರಾಮಮೂರ್ತಿಯವರ ನಾಯಕತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆ ಕನ್ನಡಿಗರು ತಮಗಾಗುತ್ತಿರುವ ಅನ್ಯಾಯಗಳ ವಿರುದ್ಧ ನಡೆಸಿದ ಮೊದಲ ನೇರ ಹೋರಾಟವಾಗಿತ್ತು. ಈ ಹೋರಾಟದಲ್ಲಿ ಪಾಲ್ಗೊಂಡ 60ಕ್ಕೂ ಹೆಚ್ಚು ಸಂಘಟನೆಗಳು ಸೇರಿ ಕರ್ನಾಟಕ ಸಂಯುಕ್ತ ರಂಗದ ರಚನೆಯಾಯಿತು. ಅ.ನ.ಕೃ. ಅಧ್ಯಕ್ಷರಾದರೆ, ಮ. ರಾಮಮೂರ್ತಿ ಕಾರ್ಯದರ್ಶಿಯಾದರು.
Related Articles
Advertisement
ಚಿಂತನೆಗಳು ಇಂದಿಗೂ ಪ್ರಸ್ತುತಮ. ರಾಮಮೂರ್ತಿಯವರು ಕನ್ನಡದ ಸಮಸ್ಯೆಗಳನ್ನು ಎಷ್ಟು ಗಂಭೀರವಾಗಿಯೂ, ಸಮಗ್ರವಾಗಿಯೂ ನೋಡುತ್ತಿದ್ದರು ಎಂಬುದಕ್ಕೆ 1963ರ ನವೆಂಬರಿನಲ್ಲಿ ಅವರು ಕನ್ನಡಕ್ಕೆ ಏನೇನಾಗಬೇಕು ಎಂಬ ಅಂಶಗಳ ಪಟ್ಟಿ ಮಾಡಿರುವುದನ್ನು ಒಮ್ಮೆ ನೋಡಿದರೆ ಸಾಕು. 1) ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ 2) ಆಡಳಿತ ಭಾಷೆಯಾಗಿ ಎಲ್ಲ ಹಂತದಲ್ಲೂ ಕನ್ನಡದ ಅನುಷ್ಠಾನ 3) ಕನ್ನಡ ಶಿಕ್ಷಣ ಮಾಧ್ಯಮ 4) ಕನ್ನಡ ಚಲನಚಿತ್ರಗಳಿಗೆ ಸಹಾಯಧನ ಮತ್ತು ಚಿತ್ರಮಂದಿರಗಳಲ್ಲಿ ಅವುಗಳ ಕಡ್ಡಾಯ ಪ್ರದರ್ಶನ 5) ಪ್ರತ್ಯೇಕ ರೈಲ್ವೆ ವಲಯ 6) ಆಕಾಶವಾಣಿಯಲ್ಲಿ ಕನ್ನಡಕ್ಕೆ ಆದ್ಯತೆ 7) ಕನ್ನಡದ ಕಲೆ-ಸಂಸ್ಕೃತಿಗಳ ಬೆಳವಣಿಗೆಗೆ ಸಲಹಾ ಮಂಡಳಿ 8) ರಸ್ತೆ ಫಲಕಗಳಲ್ಲಿ ಕನ್ನಡವನ್ನು ತಪ್ಪಿಲ್ಲದೆ ಬರೆಸುವುದು ಮತ್ತು ಅವುಗಳಿಗೆ ಸ್ಥಳೀಯರ ಹೆಸರುಗಳನ್ನೇ ಇಡುವುದು 9) ಅಕ್ರಮವಾಸ ಮಾಡುವವರ ಬಗ್ಗೆ ಎಚ್ಚರ 10) ಗೃಹ ಮಂಡಳಿಯ ಮನೆಗಳನ್ನು ಕನ್ನಡಿಗರಿಗೇ ಹಂಚಿಕೆಯಾಗುವಂತೆ ಕಾನೂನು ರಚಿಸುವುದು. ಕನ್ನಡ ವೀರ ಸೇನಾನಿ
ಮ. ರಾಮಮೂರ್ತಿಯವರಿಗೆ “ವೀರಸೇನಾನಿ’ ಎಂದು ಹೆಸರು ಬಂದ ಘಟನೆ ಉಲ್ಲೇಖನೀಯ. ವಾಣಿವಿಲಾಸ ಸಾಗರ ಕಟ್ಟಲು ಬಂದ ತಮಿಳರು, ಚಿತ್ರದುರ್ಗದ ಹಿರಿಯೂರನ್ನು ತಮ್ಮ ವಸಾಹತು ಆಗಿಸಿಕೊಂಡಿದ್ದರು. ಪಟ್ಟಣದ ಮಧ್ಯದ ವೃತ್ತದಲ್ಲಿ ದೊಡ್ಡ ಡಿ.ಎಂ.ಕೆ. ಬಾವುಟ ಹಾರಾಡುತ್ತಿತ್ತು. ಇದನ್ನು ಕಂಡ ಅಲ್ಲಿನ ಕನ್ನಡಿಗರು ಏನೂ ಮಾಡಲಾಗದೆ ಒದ್ದಾಡುತ್ತಿದ್ದರು. ರಾಜ್ಯ ಸರಕಾರವೂ ಏನೂ ಮಾಡಲು ಸಿದ್ಧವಿರಲಿಲ್ಲ. ಆಗ ಅಲ್ಲಿಗೆ ಹೋಗಿ ಸಾರ್ವಜನಿಕ ಸಭೆ ನಡೆಸಿ, ಸಭೆ ಮುಗಿಯವುದರಲ್ಲಿ ಆ ಬಾವುಟ ಕೆಳಗಿಳಿಯದಿದ್ದರೆ ಸ್ವತಃ ತಾನೇ ಕೆಳಗಿಳಿಸುವುದಾಗಿ ರಾಮಮೂರ್ತಿ ಹೇಳಿದರು. ಸಭೆ ಮುಗಿಯಿತು. ಯಾರೂ ಬಾವುಟ ಇಳಿಸುವ ಧೈರ್ಯ ತೋರಲಿಲ್ಲ. ಪಂಚೆಯನ್ನು ಎತ್ತಿ ಕಟ್ಟಿದ ರಾಮಮೂರ್ತಿ ಕಂಬದತ್ತ ನಡೆದರು. ಆಗ ಅಲ್ಲಿದ್ದ ಯುವಕನೊಬ್ಬ, ಅವರನ್ನು ತಡೆದು ತಾನೇ ಕಂಬ ಹತ್ತಿ ಧ್ವಜ ಕೆಳಗಿಳಿಸಿದ. ನಂತರ ಎಂದೂ ಅಲ್ಲಿ ಆ ಬಾವುಟ ಹಾರಾಡಲಿಲ್ಲ. ಅಂದಿನಿಂದ ರಾಮಮೂರ್ತಿಯವರಿಗೆ “ಕನ್ನಡದ ವೀರಸೇನಾನಿ’ ಎಂದು ಹೆಸರು ಬಂದಿತು. ಸಾಹಿತ್ಯ ಸೇವೆ
ಮ. ರಾಮಮೂರ್ತಿ ಎಂದಾಕ್ಷಣ ಕನ್ನಡಾಭಿಮಾನಿಗಳ ಕಣ್ಮುಂದೆ ಹಳದಿ-ಕೆಂಪು ಬಣ್ಣದ ಕನ್ನಡ ಬಾವುಟ ಬರುತ್ತದೆ. ಅವರ ಧೀರೋದಾತ್ತ ಕನ್ನಡ ಹೋರಾಟಗಳು ನೆನಪಾಗುತ್ತವೆ. ಕನ್ನಡ ಕಾರ್ಯಕರ್ತರ ಪಾಲಿಗೆ ಮ. ರಾಮಮೂರ್ತಿ ಕನ್ನಡ ವೀರ ಸೇನಾನಿ. ಆದರೆ, ಅವರು ಕನ್ನಡ ಹೋರಾಟ ರಂಗ ಪ್ರವೇಶಿಸುವ ಮುನ್ನವೇ ನೂರಾರು ಕಾದಂಬರಿಗಳನ್ನು ಬರೆದು ಹೆಸರು ಗಳಿಸಿದ್ದರು. ಶಾಲಾ ದ್ಯಾರ್ಥಿಯಾಗಿದ್ದಾಗಲೇ ಮ.ರಾಮಮೂರ್ತಿ ರಚಿಸಿದ “ಗುರು ದಕ್ಷಿಣೆ’ ಎಂಬ ಕಥೆ ದೇವುಡು, ಅ.ನ. ಸುಬ್ಬರಾಯರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. “ಕನ್ನಡ ಯುವಜನ’ ಪತ್ರಿಕೆಯಲ್ಲದೆ, “ವಿನೋದಿನಿ’, “ಕಥಾವಾಣಿ’, “ಸುಜನ’ ಸೇರಿದಂತೆ ಹಲವು ಪತ್ರಿಕೆಗಳನ್ನು ಹುಟ್ಟು ಹಾಕಿದರು. ಅವುಗಳಲ್ಲಿ “ಕಾಮಕಲಾ’ ಎಂಬ ಲೈಂಗಿಕ ವಿಜ್ಞಾನ ಪತ್ರಿಕೆಯೂ ಸೇರಿದೆ. ಹೀಗೆ ಹಲವು ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದ ಮ.ರಾಮ ಮೂರ್ತಿ, ತಮ್ಮ ಪತ್ರಿಕೆಗಳಲ್ಲಿ ತೆಲುಗು, ತಮಿಳು, ಹಿಂದಿ ಪತ್ರಿಕೆ ಗಳಲ್ಲಿ ಹೆಸರುವಾಸಿಯಾಗಿದ್ದ ಕಥೆಗಳನ್ನು ತಾವೇ ಅನುವಾದ ಮಾಡಿ ಪ್ರಕಟಿಸುತ್ತಿದ್ದರು. ಅವರಿಗೆ ಕನ್ನಡ, ಇಂಗ್ಲಿಷ್ ಅಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಸ್ವಲ್ಪ ಮಟ್ಟಿಗೆ ಸಂಸ್ಕೃತ ಭಾಷೆಗಳ ಪ್ರವೇಶವಿತ್ತು. ಮ.ರಾಮಮೂರ್ತಿ ಬರೆದ “ರಜಾಕಾರ್ ಗುಪ್ತಚಾರ’ ಕನ್ನಡದ ಸ್ಪೈ ನಾವೆಲ್‌ಗಳಲ್ಲಿ ಮೊದಲನೆಯದೆಂದು ಕೆಲವು ವಿಮರ್ಶಕರು ಉಲ್ಲೇಖೀಸಿದ್ದಾರೆ. “ಕಾಲುವೆ ಮನೆ’ ಮ.ರಾಮಮೂರ್ತಿಯವರ ಮೊದಲ ಸ್ವತಂತ್ರ ವಿಭಿನ್ನ ಪತ್ತೇದಾರಿ ಕಾದಂಬರಿ. ಕೇವಲ 9 ಆಣೆ(75ಪೈಸೆ)ಗೆ ಮಾರಲ್ಪಡುತ್ತಿದ್ದ ಪಾಕೆಟ್ ಅಳತೆಯಲ್ಲಿ ಪ್ರಕಟವಾದ ಈ ಕಾದಂಬರಿ ಕೆಲವೇ ದಿನದಲ್ಲಿ 18,000 ಪ್ರತಿಗಳು ಖರ್ಚಾಗಿ ದಾಖಲೆ ನಿರ್ಮಿಸಿತು. ಪತ್ತೇದಾರಿ ಕಾದಂಬರಿಗಳ ಜೊತೆಗೆ ಐತಿಹಾಸಿಕ, ಸಾಮಾಜಿಕ ಕಾದಂಬರಿಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ “ರಾಜದಂಡ’ ಎಂಬ ಐತಿಹಾಸಿಕ ಕಾದಂಬರಿ ವಿಶಿಷ್ಟವಾದದ್ದು. ಇದು ಸುಪ್ರಸಿದ್ಧ ಕೆಳದಿಯ ಪಾಳೇಗಾರ ಶಿವಪ್ಪನಾಯಕನ ಕಾಲದ್ದು. ಇದರ ಕಥಾ ವಸ್ತು ರೈತ ಬಂಡಾಯ. ಈ ಬಂಡಾಯಗಾರರು ಇಂದ್ರ ಮಳೆಗರೆದರೆ ಬಸವಣ್ಣ ಉಳುತ್ತಾನೆ, ಭೂತಾಯಿ ಬೆಳೆಯುತ್ತಾಳೆ; ರಾಜದಂಡವಯ್-ರಾಜದಂಡ ಎಂದು ಕಹಳೆ ಊದುತ್ತಾ ಬಂಡೆದ್ದರು. ಇಂತಹ ಕ್ರಾಂತಿಕಾರಿ ವಿಚಾರವುಳ್ಳ ಕಾದಂಬರಿ ಬಂಗಾಳಿ ಸಾಹಿತ್ಯದ ಬಂಕಿಮಚಂದ್ರರ ಆನಂದಮಠವನ್ನು ಬಿಟ್ಟರೆ ಬೇರೊಂದಿಲ್ಲ ಎಂದು ವಿಮರ್ಶಕರು ಗುರುತಿಸಿದ್ದಾರೆ 200ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿ ಬರೆದು “ಪತ್ತೇದಾರಿ ರಾಮಮೂರ್ತಿ’ ಎಂದೇ ಕನ್ನಡ ಓದುಗ ವಲಯದಲ್ಲಿ ಪ್ರಸಿದ್ಧ ರಾದರು. “ಚಿತ್ರ ಶಾಕುಂತಲಾ’ ಎಂಬ ಗೀತ ಕಾವ್ಯವನ್ನು ರಚಿಸಿದ್ದಾರೆ. ಭಾಮಿನೀ ಷಟ³ದಿಯಲ್ಲಿ ರಚಿಸಿದ ಈ ಕಾವ್ಯವು ಮಹಾಕಾವ್ಯದ ಎಲ್ಲ ಲಕ್ಷಣಗಳನ್ನೂ ಒಳಗೊಂಡಿತ್ತು. ಚಳವಳಿಗೆ ಬರುವ ಮುನ್ನ ಮ.(ಮದ್ದೂರು) ಸಿ.(ಸೀತಾರಾಮ ಶಾಸ್ತ್ರಿ) ರಾಮಮೂರ್ತಿ ಆಗಿದ್ದವರು ಕನ್ನಡಿಗರ ಪಾಲಿಗೆ ಮ.(ಮರೆಯಬಾರದ) ರಾಮಮೂರ್ತಿ ಅದರು “ಒಂದಲ್ಲಾ ಒಂದು ದಿನ ಈ ರಾಜ್ಯದಲ್ಲಿ ಕನ್ನಡ ಬಾವುಟ ಹಾರಿಸುತ್ತೇನೆ. ಎಲ್ಲೆಡೆ ಕನ್ನಡ ಕಾಣುವಂತೆ ಮಾಡುವವರೆಗೆ ವಿರಮಿಸಲಾರೆ’ ಎನ್ನುತ್ತಿದ್ದ ವೀರಸೇನಾನಿಯ ನೆನಪು ಕನ್ನಡಿಗರಿಗೆ ಹೊಸ ಸ್ಮತಿ ನೀಡಲಿ. ರಾ.ನಂ. ಚಂದ್ರಶೇಖರ