Advertisement

ಕನ್ನಡ ವಿ.ವಿ. ಬೇಡವಾದರೆ ಬೀಗ ಹಾಕಿ:ಸಾಹಿತಿಗಳು, ಕನ್ನಡಪರ ಹೋರಾಟಗಾರರ ಆಕ್ರೋಶ

11:31 PM Nov 30, 2024 | Team Udayavani |

ಬೆಂಗಳೂರು: ಅನುದಾನವಿಲ್ಲದೆ ತನ್ನ ಮೂಲ ಅಸ್ಮಿತೆಯನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಿ ಆಸರೆ ಆಗಬೇಕು ಎಂದು ಕನ್ನಡಪರ ಹೋರಾಟಗಾರರು ಮತ್ತು ಸಾಹಿತಿಗಳು ಆಗ್ರಹಿದ್ದಾರೆ. ಕನ್ನಡ ವಿ.ವಿ.ಗಳು ಉಳಿಯಬೇಕು ಎಂದಾದರೆ ಅನುದಾನ ನೀಡಿ, ಇಲ್ಲದಿದ್ದರೆ ಬೀಗ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತೇರು ಎಳೆದು ಸಂಭ್ರಮಿಸುವ ಸಂದರ್ಭದಲ್ಲಿದ್ದೇವೆ. ಮೈಸೂರು ರಾಜ್ಯ ಕರ್ನಾಟಕ ಎಂದು

ನಾಮಕರಣಗೊಂಡ 50 ವರ್ಷದ ಸಂಭ್ರಮದ ಹೊಸ್ತಿನಲ್ಲಿದ್ದೇವೆ. ಇಂತಹ ಸುಸಂದರ್ಭದಲ್ಲಿ ಕನ್ನಡ ಕೆಲಸಕ್ಕಾಗಿ ತಾನೇ ಹುಟ್ಟುಹಾಕಿದ ಹಂಪಿ ಕನ್ನಡ ವಿ.ವಿ.ಗೆ ಸರಕಾರ ಅನುದಾನ ನೀಡದೆ ಇರುವುದು ಎಷ್ಟು ಸರಿ? ಸರಕಾರದ ನಿರ್ಲಕ್ಷ್ಯದಿಂದಾಗಿ ಕನ್ನಡ ವಿವಿ ಮುಚ್ಚುವ ಸ್ಥಿತಿಗೆ ಬಂದಿರುವುದು ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸೇರಿದಂತೆ ಯಾವುದೇ ಸರಕಾರ ಕನ್ನಡ ವಿ.ವಿ.ಗೆ ಹಣ ಬಿಡುಗಡೆ ಮಾಡಿಯೇ ಇಲ್ಲ. ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಹಕ್ಕೊತ್ತಾಯದಿಂದಾಗಿ ಹಂಪಿ ಕನ್ನಡ ವಿ.ವಿ. ರೂಪತಾಳಿತು. ತಮಿಳು ವಿ.ವಿ.ಯ ಮಾದರಿಯಲ್ಲೇ ಕಾರ್ಯನಿರ್ವಹಿಸಬೇಕು ಎಂಬ ಸದುದ್ದೇಶ ಕೂಡ ಇತ್ತು. ಈಗ ಆ ವಿ.ವಿ.ಯಿಂದ ಕನ್ನಡ ಕೆಲಸ ಮಾಡಿಸಿಕೊಳ್ಳುವುದನ್ನು ಬಿಟ್ಟು ಅದಕ್ಕೆ ಹಣಕಾಸು ನೀಡದೆ ಮತ್ತಷ್ಟು ದುರ್ಬಲಗೊಳಿಸುತ್ತಿರುವುದು ಒಳ್ಳೆಯದಲ್ಲ ಎಂದು ಲೇಖಕ ಮತ್ತು ಕನ್ನಡಪರ ಹೋರಾಟಗಾರ ರಾ.ನಂ. ಚಂದ್ರಶೇಖರ ಹೇಳಿದ್ದಾರೆ.

22 ಸಂಶೋಧನ ವಿಭಾಗ

Advertisement

1990ರಲ್ಲಿ 700 ಎಕರೆಯಲ್ಲಿ ಮೂಲಸೌಕರ್ಯ, ಹಾಸ್ಟೆಲ್‌ಗ‌ಳು, 22 ಸಂಶೋಧನ ವಿಭಾಗಗಳು ಮತ್ತು 32 ಕಟ್ಟಡಗಳೊಂದಿಗೆ ವಿ.ವಿ. ಸ್ಥಾಪಿಸಲಾಗಿತ್ತು. ಭಾಷೆಯ ಬೆಳವಣಿಗೆಗೆ ಸಹಾಯ, ಸಂಶೋಧನೆ ಮತ್ತು ಇತರ ಅಧ್ಯಯನಗಳನ್ನು ಕೈಗೊಳ್ಳಲು ಮತ್ತು ಸಮಾಜ ಅಂಚಿನಲ್ಲಿರುವ ಗುಂಪುಗಳಿಗೆ ಅವಕಾಶ ಒದಗಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ದುಡಿಯುವ ಆಶಯ ಇದರಲ್ಲಿತ್ತು. ಆದರೆ ಈಗ ಅನುದಾನ ಕೊರತೆಯಿಂದ ಸಿಬಂದಿ ಸಂಬಳ ಹಾಗೂ ನಿತ್ಯ ಖರ್ಚುಗಳಿಗೂ ಹಣವಿಲ್ಲದಂತಾಗಿದೆ. ಸುಮಾರು 1,200 ವಿದ್ಯಾರ್ಥಿಗಳ ಬದುಕು ಅನಿಶ್ಚಿತತೆಯಿಂದ ಕೂಡಿದೆ. ಹಲವು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ಒಂದು ವರ್ಷದಿಂದ ಹೊರಗುತ್ತಿಗೆ ನೌಕರರ ವೇತನವನ್ನೂ ಪಾವತಿಸಿಲ್ಲ.

ಹಂಪಿ ಕನ್ನಡ ವಿ.ವಿ.ಯನ್ನು ಒಳ್ಳೆಯ ಉದ್ದೇಶಕ್ಕಾಗಿ ಆರಂಭಿಸಲಾಗಿತ್ತು. ಆದರೆ ಸರಕಾರಗಳ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೈದರಾಬಾದ್‌-ಕರ್ನಾಟಕ ಅನುದಾನದಿಂದ ಸರಕಾರ ವಿ.ವಿ.ಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವೆಂದಾದರೆ ಮುಚ್ಚಿಬಿಡಿ.

– ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next