Advertisement

ಬಸ್‌ಗಳಲ್ಲಿ ಕನ್ನಡ ಕಲಿಸೋ ಕಾರ್ಯಕ್ರಮ

11:22 AM Jul 19, 2017 | Team Udayavani |

ಬೆಂಗಳೂರು: ಸಾರಿಗೆ ನಿಗಮಗಳಲ್ಲಿ ಕನ್ನಡ ಅನುಷ್ಠಾನದ ಜತೆಗೆ ಇನ್ಮುಂದೆ ಬಸ್‌ಗಳಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಕಾರ್ಯಕ್ರಮವೂ ನಡೆಯಲಿದೆ. ಸಾಮಾನ್ಯವಾಗಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಬಳಸಬಹುದಾದ ವಿವಿಧ ಭಾಷೆಗಳಲ್ಲಿ ಅನುವಾದಿಸಿದ ಕನ್ನಡ ಶಬ್ದಗಳು, ನುಡಿಗಟ್ಟುಗಳ ಕೈಪಿಡಿಯನ್ನು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಒದಗಿಸಲಾಗುವುದು.

Advertisement

ಇದು ಅನ್ಯಭಾಷಿಕರು ಬಸ್‌ಗಳಲ್ಲಿ ಓಡಾಡುವಾಗ ತಕ್ಕಮಟ್ಟಿನ ಕನ್ನಡ ಬಳಕೆಗೆ ಅನುಕೂಲವಾಗಲಿದೆ. ಈ ಸಂಬಂಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು. 

ಇಲ್ಲಿನ ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಕಚೇರಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಅವರು ಭೇಟಿ ನೀಡಿ, “ರಸ್ತೆ ಸಾರಿಗೆ ನಿಗಮಗಳಲ್ಲಿ ಕನ್ನಡ ಅನುಷ್ಠಾನ’ ಕುರಿತು ಪ್ರತ್ಯೇಕ ಸಭೆಗಳನ್ನು ನಡೆಸಿದರು. ಈ ವೇಳೆ ಅಧ್ಯಕ್ಷರು ನೀಡಿದ ಈ ಸಲಹೆಯನ್ನು ಎರಡೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಒಪ್ಪಿದರು. 

ಕನ್ನಡ ಮತ್ತು ಅನ್ಯಭಾಷಿಕರ ನಡುವೆ ಸಾರಿಗೆ ನಿಗಮಗಳ ಬಸ್‌ಗಳು ರಾಯಭಾರಿ ಆಗಿವೆ. ಬಸ್‌ಗಳಲ್ಲಿ ಪ್ರಯಾಣಿಕರ ಜತೆಗೆ ಅಲ್ಲಿನ ಸಂಸ್ಕೃತಿಯೂ ಸಂಚರಿಸುತ್ತಿರುತ್ತದೆ. ಆದ್ದರಿಂದ ಸಂಚಾರದ ವೇಳೆ ಪ್ರಯಾಣಿಕರಿಗೆ ಕನ್ನಡ ತಲುಪಬೇಕು. ಆಗ ಕುತೂಹಲ ಹುಟ್ಟುತ್ತದೆ. ಇದಕ್ಕೆ ಪೂರಕವಾಗಿ ಕನ್ನಡದ ಕೈಪಿಡಿಯೂ ಕೈಗೆ ಸಿಕ್ಕರೆ, ಭಾಷೆ ಬೆಳೆಯಲು ಅನುಕೂಲ ಎಂದು ಸಲಹೆ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌, “ವಿಮಾನಗಳಲ್ಲಿ ಆಸನಗಳ ಹಿಂದೆ ಪ್ರಯಾಣಿಕರಿಗಾಗಿ ಮ್ಯಾಗಜಿನ್‌ಗಳನ್ನು ಇಡಲಾಗಿರುತ್ತದೆ. ಇದೇ ಮಾದರಿಯಲ್ಲಿ ಬಸ್‌ಗಳಲ್ಲಿ ಬಳಸಬಹುದಾದ ಕನ್ನಡ ಶಬ್ದಗಳು, ನುಡಿಗಟ್ಟುಗಳಿರುವ ಲ್ಯಾಮಿನೇಷನ್‌  ಮಾಡಿದ ಕೈಪಿಡಿಗಳನ್ನು ಪ್ರಯಾಣಿಕರಿಗೆ ಒದಗಿಸಲಾಗುವುದು. ಪ್ರಯಾಣದ ವೇಳೆ ಇದನ್ನು ಪ್ರಯಾಣಿಕರು ಓದಲು, ತಿಳಿಯಲು ಅನುಕೂಲ ಆಗುತ್ತದೆ’ ಎಂದರು. 

Advertisement

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಮಾತನಾಡಿ, “ನಗರಕ್ಕೆ ರಾಜ್ಯದ ನಾನಾ ಭಾಗಗಳಿಂದ ಜನ ಆಗಮಿಸುತ್ತಾರೆ. ಅವರಲ್ಲಿ ಬಹುತೇಕರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಇಂಗ್ಲಿಷ್‌, ಹಿಂದಿ, ತೆಲಗು, ತಮಿಳು ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರಿಸಿದ ಶಬ್ದಗಳು ಮತ್ತು ನುಡಿಗಟ್ಟುಗಳನ್ನು ಲ್ಯಾಮಿನೇಷನ್‌ ಮಾಡಿ, ಬಸ್‌ಗಳಲ್ಲಿ ಅಂಟಿಸಲಾಗುವುದು’ ಎಂದು ಹೇಳಿದರು. 

ಇದಕ್ಕೂ ಮುನ್ನ ನಡೆದ ಪರಿಶೀಲನೆ ವೇಳೆ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ವೆಬ್‌ಸೈಟ್‌ಗಳ ವೆಬ್‌ಪೇಜ್‌ಗಳು ತೆರೆದುಕೊಳ್ಳುತ್ತಿದ್ದಂತೆ ಇಂಗ್ಲಿಷ್‌ ಬರುತ್ತದೆ. ಆದರೆ ಕನ್ನಡವೇ ಪ್ರಧಾನವಾಗಿದ್ದು, ಕನ್ನಡದಲ್ಲೇ ವೆಬ್‌ಪೇಜ್‌ ತೆರೆದುಕೊಳ್ಳಬೇಕು. ಇಂಗ್ಲಿಷ್‌ ಆಯ್ಕೆಯಾಗಿರಬೇಕು. ಅಲ್ಲದೆ, ಬಿಎಂಟಿಸಿ ಮೊಬೈಲ್‌ ಆ್ಯಪ್‌ ಕೂಡ ಕನ್ನಡದಲ್ಲೇ ತೆರೆದುಕೊಳ್ಳುವಂತಾಗಬೇಕು ಎಂದು ಪ್ರೊ.ಸಿದ್ದರಾಮಯ್ಯ ಸೂಚಿಸಿದರು. 

ಬಸ್‌ಗಳಲ್ಲೂ ಅನ್ಯಭಾಷಾ ಚಿತ್ರಗಳ ಹಾವಳಿ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅನ್ಯಭಾಷೆಗಳ ಚಿತ್ರಪ್ರದರ್ಶನ ಆಗುತ್ತಿದೆ. ಕೆಲ ಪ್ರಯಾಣಿಕರು ಈ ಬಗ್ಗೆ ಪ್ರಾಧಿಕಾರಕ್ಕೂ ದೂರು ನೀಡಿದ್ದಾರೆ ಎಂದು ಅಧ್ಯಕ್ಷರು ದೂರಿನ ಪ್ರತಿ ಪ್ರದರ್ಶಿಸಿದರು. ಇನ್ಮುಂದೆ ರಾಜ್ಯದಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನು ಹಾಕಬೇಕು. ಕಡ್ಡಾಯವಾಗಿ ಕನ್ನಡದಲ್ಲೂ ಪ್ರಕಟಿಸಲು ಅವಕಾಶ ನೀಡಿದರೆ ಮಾತ್ರ ಜಾಹೀರಾತು ಪಡೆಯಬೇಕು. ಈ ಷರತ್ತನ್ನು ಜಾಹಿರಾತಿಗೆ ಸಂಬಂಧಿಸಿದ ನಿಯಮಾವಳಿಗಳಲ್ಲಿ ಸೇರಿಸಬೇಕು ಎಂದು ಸೂಚಿಸಿದರು.  

ಕನ್ನಡ ಅನುಷ್ಠಾನ ಕುರಿತ ಪರಿಶೀಲನಾ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ್‌, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ. ಚನ್ನೇಗೌಡ, ಕೆಎಸ್‌ಆರ್‌ಟಿಸಿ ನಿರ್ದೇಶಕ ಬಿ.ಎನ್‌.ಎಸ್‌. ರೆಡ್ಡಿ, ಬಿಎಂಟಿಸಿ ಉಪಾಧ್ಯಕ್ಷ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.   

ಬಿಎಂಟಿಸಿ ವಿರುದ್ಧ ಅಧ್ಯಕ್ಷರೇ ಪತ್ರ!
“ಬಿಎಂಟಿಸಿಯ ಆಡಳಿತದಲ್ಲಿ ಕೆಲ ಅಧಿಕಾರಿಗಳು ಕನ್ನಡ ಬಳಸುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕು.’ ಹೀಗೆಂದು ಸ್ವತಃ ಬಿಎಂಟಿಸಿ ಅಧ್ಯಕ್ಷ ಎಂ. ನಾಗರಾಜ (ಯಾದವ) ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಎರಡು ತಿಂಗಳ ಹಿಂದೆಯೇ ಬರೆದ ಈ ಪತ್ರನ್ನು ಬಿಎಂಟಿಸಿಯಲ್ಲಿ ಕನ್ನಡ ಅನುಷ್ಠಾನ ಕುರಿತ ಪರಿಶೀಲನೆ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಪ್ರದರ್ಶಿಸಿ ಅಚ್ಚರಿ ಮೂಡಿಸಿದರು. 

ಸ್ವತಃ ನಿಮ್ಮ ಅಧ್ಯಕ್ಷರೇ ನಿಗಮದ ಆಡಳಿತದಲ್ಲಿ ಕನ್ನಡ ಬಳಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಅವರಿಗೆ ಸೂಚಿಸಿದರು.  ಇದೇ ವೇಳೆ ಮಾತನಾಡಿದ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, ಅನ್ಯರಾಜ್ಯದ ಅಧಿಕಾರಿಗಳು ಇಲ್ಲಿಗೆ ಬಂದು ಕನ್ನಡ ಕಲಿತು, ಕನ್ನಡದಲ್ಲಿ ಪುಸ್ತಕಗಳನ್ನೂ ಬರೆದು ಕನ್ನಡಿಗರ ಪ್ರೀತಿ ಗಳಿಸಿದ ಉದಾಹರಣೆಗಳಿವೆ. ಆದರೆ, ಇನ್ನು ಕೆಲವರು ಕನ್ನಡಿಗರಾಗಿದ್ದೂ ಮೇಲಧಿಕಾರಿಗಳನ್ನು ಮೆಚ್ಚಿಸಲು ಇಂಗ್ಲಿಷ್‌ ಬಳಸುತ್ತಾರೆ. ಅಂತಹವರ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next