ಹೊಸಪೇಟೆ: ಪ್ರಾಚೀನ ಕಾಲದಿಂದಲೂ ಕನ್ನಡ-ತಮಿಳು ಭಾಷೆಗಳು ಪರಸ್ಪರ ಆಪ್ತ ಸಂಬಂಧವನ್ನು ಹೊಂದಿವೆ ಎಂದು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ| ಜಯಲಲಿತಾ ಅವರು ಅಭಿಪ್ರಾಯ ಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ವೈ. ಕೆ. ರಾಮಯ್ಯ ದತ್ತಿ ನಿಧಿ ಮತ್ತು ವಿಜಯನಗರ ಮಹಾವಿದ್ಯಾಲಯದ ಕರ್ನಾಟಕ ಸಂಘ ಜಂಟಿಯಾಗಿ ಶುಕ್ರವಾರ ಆಯೋಜಿಸಿದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ “ಕನ್ನಡ-ತಮಿಳು ಸಾಹಿತ್ಯ ಸಂಬಂಧ’ ಎಂಬ ವಿಷಯ ಕುರಿತು ಮಾತನಾಡಿದರು.
ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಸಂಸ್ಕೃತದ ಪ್ರಭಾವವಿರುವಂತೆ ಸ್ಥಳೀಯವಾದ ದ್ರಾವಿಡ ಮೂಲದ ಅನೇಕ ಶಾಸ್ತ್ರ ವಿಚಾರಗಳು ಪ್ರಯೋಗಗೊಂಡಿರುವುದನ್ನು ಕಾಣಬಹುದು. ಕನ್ನಡ ಕಾವ್ಯಗಳಲ್ಲಿ ಪ್ರಯೋಗಗೊಂಡ ಅಲಂಕಾರ, ಪ್ರಾಸ, ಛಂದಸ್ಸು ಇತ್ಯಾದಿ ಶಾಸ್ತ್ರ ವಿಚಾರಗಳ ಕುರಿತು ವಿಶ್ಲೇಷಿಸಿದರು.
ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಮೋಹನ ಕುಂಟಾರ್ ಮಾತನಾಡಿ, ಕನ್ನಡ-ತಮಿಳು ಬಾಂಧವ್ಯವು ಕೇವಲ ಸಾಹಿತ್ಯಕಷ್ಟೇ ಸೀಮಿತವಾಗಿ ಉಳಿದಿಲ್ಲ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಸಂಬಂಧವನ್ನು ಬೆಳೆಸಿದೆ. ಇವುಗಳನ್ನು ತೌಲನಿಕ ಅಧ್ಯಯನಗಳ ಮೂಲಕ ಆಸಕ್ತರು ಇನ್ನಷ್ಟು ನಿಖರವಾಗಿ ಗುರುತಿಸಬೇಕಾಗಿದೆ ಎಂದು ಹೇಳಿದರು.
ಡಾ| ಪ್ರಭುಗೌಡ ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಉಪಾಧ್ಯಕ್ಷ ಡಾ. ಮೃತ್ಯುಂಜಯ ರುಮಾಲೆ ಸ್ವಾಗತಿಸಿದರು. ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರ ಡಾ| ವಿಠಲರಾವ್ ಟಿ. ಗಾಯಕ್ವಾಡ್ ವಂದಿಸಿದರು. ಬಸವರಾಜ ಮೇಟಿ ನಿರೂಪಿಸಿದರು