Advertisement

ಮಾಟುಂಗದ ಸೇತುವೆ ಕನ್ನಡ ಮಾತನಾಡುತ್ತದೆ !

01:36 PM Apr 20, 2019 | mahesh |

ಎಲ್ಲಾದರೂ ಕಾರ್ಯಕ್ರಮವಿದ್ದಾಗ ಮನೆಯಿಂದ ಹೊರಡುವಾಗಲೇ ತಡವಾಯಿತೆಂದರೆ ಆವತ್ತು ರೈಲು ಬೋಗಿ ಎಷ್ಟೇ ತುಂಬಿರಲಿ, ಅದರ ಗೊಡವೆ ಇರುವುದಿಲ್ಲ. ಹೇಗಾದರೂ ತೂರಿಕೊಂಡು ಬೋಗಿಯೊಳಗಡೆ ಸೇರಿಕೊಳ್ಳುತ್ತೇನೆ. ಜಡೆಗೆ ಸಿಕ್ಕಿಸಿದ ಕ್ಲಿಪ್ಪು, ರಬ್ಬರ್‌ ಕಳಚಿ ಯಾರದೋ ಕಾಲಡಿ ಬಿದ್ದು ಚೂರುಚೂರಾಗುವುದು, ಕೂದಲು ಸಡಿಲಗೊಂಡು ಇನ್ಯಾರದೋ ಬೆವರಿಳಿದ ಮುಖಕ್ಕೆ ಅಂಟಿಕೊಳ್ಳುವುದು, ಕೆಲವೊಮ್ಮೆ ಕೂದಲು ಬ್ಯಾಗಿನ ಜಿಪ್ಪಿನ ಎಡೆಗಳಿಗೆ, ಕೊರಳಿನ ಸರಗಳಿಗೆ ಸಿಕ್ಕಿಕೊಂಡು ಅವರಿವರಿಂದ ಬೈಸಿಕೊಳ್ಳುವುದು, ಕೂದಲು ಕಟ್ಟಿಕೊಳ್ಳುವುದಕ್ಕಾಗಿ ಕೈಯನ್ನು ಮೇಲೆತ್ತಲಾಗದಂಥ ಸ್ಥಿತಿಯಲ್ಲಿ ಒದ್ದಾಡುವುದು, ಹಿಂದು ಮುಂದಿರುವವರ ತುಂಬಿದ ಬ್ಯಾಗು ಬೆನ್ನಿಗೆ -ಹೊಟ್ಟೆಗೆ ಒತ್ತಿಕೊಂಡು ಉಸಿರಾಡುವುದಕ್ಕೂ ಕಷ್ಟವಾಗುವುದು- ಹೀಗೆ ಸುಮಾರು ಒಂದು ಗಂಟೆಗೂ ಮೀರಿ ಭಗ್ನಮೂರ್ತಿಯ ಭಂಗಿಯಲ್ಲಿ ನಿಲ್ಲುವ ಪರಿಸ್ಥಿತಿ ಬಂದರೂ, ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ತಲುಪುವ ಆತುರದಿಂದ ಇವೆಲ್ಲವನ್ನೂ ಒಮ್ಮೆಗೆ ಸಹಿಸಿಕೊಳ್ಳುತ್ತೇನೆ. ಇಳಿಯುವಷ್ಟರ ಹೊತ್ತಿಗೆ ಮುಖಕ್ಕೆ ಹಚ್ಚಿಕೊಂಡ ಕ್ರೀಮ್‌-ಪೌಡರ್‌ ಕರಗಿ ಎಲ್ಲರ ಉಡುಪುಗಳಿಗೆ ಹಂಚಿ ಹೋಗಿರುತ್ತದೆ. ಮನೆಯಿಂದ ಹೊರಡುವಾಗ ಇದ್ದ ನವಿಲಿನ ಲಾಸ್ಯ, ರೈಲಿನಿಂದ ಇಳಿಯುವಾಗ ನೀರಿನಲ್ಲಿ ನೆನೆದ ಕೊಕ್ಕರೆಯ ರೂಪು ಪಡೆಯುತ್ತದೆ. ಆದರೆ, ಇದ್ಯಾವುದಕ್ಕೂ ಅಂಜಿ ನಿಂತವಳಲ್ಲ. ಆದರೆ, ಒಮ್ಮೆ ದಢೂತಿ ಹೆಂಗಸೋರ್ವಳು ದೊಡ್ಡ ಬುಟ್ಟಿ ಹಿಡಿದುಕೊಂಡು “ಮಚ್ಚಿ ಕಾ ಪಾನಿ’ ಅಂತ ಬೊಬ್ಬೆ ಹೊಡೆದಾಗ ಮಾತ್ರ ಒಮ್ಮೆಗೆ ಹಿಂದೆ ಸರಿದು ನಿಲ್ಲಬೇಕಾಯಿತು.

Advertisement

ಅಂದು ಕರ್ನಾಟಕ ಸಂಘ, ಮುಂಬಯಿ ಇದರ ಶಿಲಾನ್ಯಾಸದ ಕಾರ್ಯಕ್ರಮ. ಬೆಳಿಗ್ಗೆ 9.30ಕ್ಕೆ ಎಲ್ಲರೂ ಅಲ್ಲಿರಬೇಕಾಗಿತ್ತು. ಹಿಂದಿನ ದಿನದ ಲೆಕ್ಕಾಚಾರದ ಪ್ರಕಾರವೇ ಬೆಳಿಗ್ಗೆ ಬೇಗ ಎದ್ದು ಅಡುಗೆ ಮಾಡಲು ಶುರುಮಾಡಿದರೂ ಸಮಯಕ್ಕೆ ಸರಿಯಾಗಿ ಮನೆಗೆಲಸ ಮುಗಿಯಲಿಲ್ಲ. ರೈಲು ನಿಲ್ದಾಣಕ್ಕೆ ಬಂದರೆ ಅಂದು ಭಾನುವಾರದ ಮೆಗಾಬ್ಲಾಕ್‌ನಿಂದಾಗಿ ರೈಲು ಹತ್ತು ನಿಮಿಷ ತಡವಾಗಿಯೇ ಬಂದು ನಿಂತಿತು. ಇನ್ನೇನು, ಮಹಿಳಾ ಬೋಗಿ ಏರಬೇಕೆನುವಷ್ಟರಲ್ಲಿ ದಢೂತಿ ಹೆಂಗಸೊಬ್ಬಳು ದೊಡ್ಡ ಬುಟ್ಟಿ ಹಿಡಿದುಕೊಂಡು ಬೋಗಿಯೊಳಗಿನಿಂದಲೇ “ಮಚ್ಚಿ ಕಾ ಪಾನಿ’ ಅಂತ ಬೊಬ್ಬೆ ಹೊಡೆಯುತ್ತ ಇಳಿಯಲಾರಂಭಿಸಿದಳು. ಥಟ್ಟನೆ ಹಲವರ ಜೊತೆ ನಾನೂ ಹಿಂದೆ ಸರಿದು ನಿಂತೆ. ಮುವತ್ತು ಸೆಕೆಂಡಿನೊಳಗಡೆ ಹತ್ತಿದ ಕೆಲವರನ್ನು ಮಾತ್ರ ತುಂಬಿಸಿಕೊಂಡು ರೈಲು ಸಿ.ಎಸ್‌.ಟಿ ಕಡೆಗೆ ಹೊರಟಿತು. ಇಷ್ಟು ದೊಡª ಬುಟ್ಟಿ ಹಿಡಿದುಕೊಂಡು ಗೂಡ್ಸ್‌ ಬೋಗಿ ಹತ್ತುವುದು ಬಿಟ್ಟು, ಇಲ್ಲಿ ಯಾಕೆ ಬಂದಳು ಎಂದು ಮನಸ್ಸಿನಲ್ಲಿಯೇ ಗೊಣಗಿಕೊಂಡೆ. “ಬಹುತ್‌ ಬೂಕ್‌ ಲಗೀ ಹೈ’ ಅನ್ನುತ್ತ¤ ಅಲ್ಲೇ ಪಕ್ಕದ ಕ್ಯಾಂಟೀನಿನಿಂದ ವಡಾಪಾವ್‌ ಖರೀದಿಸಿ, ಒಂದು ಬದಿಯಲ್ಲಿ ಚಕ್ಕ ಕೂತು ತಿನ್ನಲಾರಂಭಿಸಿದಳು. ಮೀನು ತುಂಬಿದ ಬುಟ್ಟಿಯಾದರೆ, ಹೊತ್ತವರು ನಡೆದ ಹಾದಿಯಲ್ಲೆಲ್ಲ ಐಸ್‌ ನೀರು ತೊಟ್ಟಿಕ್ಕುತ್ತ ಇರುತ್ತದೆ. ಇವಳ ಪಕ್ಕದಲ್ಲಿದ್ದ ಬುಟ್ಟಿಯಿಂದ ಅಂಥ ಯಾವುದೇ ಕುರುಹು ಕಂಡು ಬರುತ್ತಿರಲಿಲ್ಲ. “ಏನಿರಬಹುದು ಬುಟ್ಟಿಯೊಳಗೆ!’ ಇಣುಕಿ ನೋಡಿದೆ. ಎಳೆ ಚಿಗುರು ಮೆಂತೆ ಸೊಪ್ಪಿನ ಸಣ್ಣ ಸಣ್ಣ ಕಟ್ಟುಗಳು ಕಾಣಿಸುತ್ತಿದ್ದವು. ಒಣಗದಿರಲೆಂದು ಒದ್ದೆ ಮಾಡಿದ ಬಟ್ಟೆಯನ್ನು ಹಾಸಿ ಗಟ್ಟಿಯಾಗಿ ಕಟ್ಟಿದ್ದಳು. “ತಾಜಾ ಹೈ ದೇಕೋನ, ಲೇಲೋ ಬಾಬಿ ದಸ್‌ ಕಾ ಪಾಂಚ್‌’ ಎಂದು ಬುಟ್ಟಿಯಿಂದ ಸೊಪ್ಪಿನ ಕಟ್ಟನ್ನು ತೆಗೆಯುವುದಕ್ಕೆ ಮುಂದಾದಳು. “ಯಾಕೆ ಸುಳ್ಳು ಹೇಳಿದೆ’ ಅಂತ ಕೇಳುವ ಮನಸ್ಸಾಯ್ತು. ಹಾಗೆ ಕೇಳಿದರೆ ಜಗಳ ಶುರು ಮಾಡುವಳ್ಳೋ ಅನ್ನುವ ಅಳುಕಿನಿಂದ ಅಲ್ಲಿಂದ ದೂರ ಸರಿದು ನಿಂತೆ. “ಮಚ್ಚಿ ಕಾ ಪಾನಿ’ ಅಂತ ಹೇಳದಿದ್ದರೆ ಅವಳಿಗೆ ಯಾರೂ ಬೋಗಿಯಿಂದ ಇಳಿಯಲು ಬಿಡುತ್ತಿರಲಿಲ್ಲ. ಎಲ್ಲಿ ಯಾವ ರೀತಿ ಮಾತನಾಡಿದರೆ ಕಾರ್ಯ ಸಿದ್ಧಿಯಾಗುತ್ತದೆ ಅನ್ನುವುದನ್ನು ಅರಿತುಕೊಂಡು ವ್ಯವಹರಿಸುವ ಜಾಣ್ಮೆಯನ್ನು ಅವಳಿಗೆ ಈ ನಗರ ಜೀವನವೇ ಕಲಿಸಿರಬಹುದು.

ಸೇತುಬಂಧ ಪ್ರಸಂಗ
ಮುಂಬಯಿ ಕರ್ನಾಟಕ ಸಂಘಕ್ಕೆ ಹೋಗಬೇಕಾದರೆ, ಸೆಂಟ್ರಲ್‌ನಲ್ಲಿ ಸಿಎಸ್‌ಟಿ ಕಡೆಗೆ ಹೋಗುವ ರೈಲು ಹತ್ತಿ, ಮಾಟುಂಗ ರೈಲು ನಿಲ್ದಾಣದಲ್ಲಿ ಇಳಿಯಬೇಕು. ಅಲ್ಲೊಂದು ಝಡ್‌ ಆಕಾರದ ಸೇತುವೆ ಇದೆ. ಆ ಸೇತುವೆ ಕನ್ನಡ ಮಾತನಾಡುತ್ತದೆ ಎಂದು ಎಲ್ಲರೂ ಹೇಳುವುದುಂಟು. ಈ ಸೇತುವೆಯ ಪೂರ್ವಭಾಗದಲ್ಲಿ ಮೈಸೂರು ಅಸೋಸಿಯೇಶನ್‌, ಪಶ್ಚಿಮ ಭಾಗದಲ್ಲಿ ಕರ್ನಾಟಕ ಸಂಘ. ದೂರದ ತಾಣಗಳಿಂದ ಬರುವ ಎಲ್ಲ ಕನ್ನಡ ಮನಸ್ಸುಗಳನ್ನು ಸೆಳೆಯುವ, ದಾಟಿಸುವ, ಒಂದೆಡೆ ಬೆಸೆಯುವ ಕೊಂಡಿ ಈ ಸೇತುವೆಯಾಗಿದೆ. ಮಾಟುಂಗ ರೈಲ್ವೆ ನಿಲ್ದಾಣದಲ್ಲಿ ಇಳಿದು ಮೆಟ್ಟಿಲೇರಿ ಬಂದಾಗ ಮೊದಲಿಗೆ ಸಿಗುವುದು ಟಿಕೆಟ್‌ ಕೌಂಟರ್‌. ಅಲ್ಲಿಂದ ಮುಂದೆ ಬಂದರೆ ಝಡ್‌ ಬ್ರಿಡ್ಜ್ ಆರಂಭವಾಗುತ್ತದೆ. ಎಡಬದಿಯಲ್ಲಿ ಓರ್ವ ಕಡ್ಲೆಕಾಯಿ ಮಾರುವವ ಕೂತಿರುತ್ತಾನೆ. ನಾಲ್ಕು ದಿಕ್ಕುಗಳಿಂದ ಬರುವವರೆಲ್ಲ ಇವನನ್ನು ದಾಟಿಕೊಂಡೇ ಮುಂದೆ ಹೋಗಬೇಕು. ವರ್ಷಪೂರ್ತಿ ಇದೇ ಸ್ಥಳದಲ್ಲಿ ವ್ಯಾಪಾರ ಮಾಡಿ ಕೊಂಡಿರುವ ಇವನು ಕಡ್ಲೆಕಾಯಿಯನ್ನು ಬಿಸಿಯೇರಿದ ಹೊಯ್ಗೆಯಲ್ಲಿ ಹುರಿದು ಕೊಡುತ್ತಾನೆ. ಆದ್ದರಿಂದಲೇ ಅವನಲ್ಲಿ ಸಿಗುವ ಕಡ್ಲೆಕಾಯಿಗೆ ವಿಶೇಷ ರುಚಿ. ಕನ್ನಡಿಗರ ಸಣ್ಣಪುಟ್ಟ ಮೀಟಿಂಗ್‌, ಚರ್ಚೆಗಳೆಲ್ಲ ಇವನ ಪಕ್ಕದಲ್ಲಿಯೇ ನಡೆಯುತ್ತದೆ. ಈ ಸ್ಥಳಕ್ಕೆ “ಓಂನಾಕ’ ಎಂದು ಹೆಸರಿಡಲು ಕಾರಣಕರ್ತರಾದ ಓಂದಾಸ್‌ ಅವರು, “”ಅವನಿಂದ ಕಡ್ಲೆಕಾಯಿ ಖರೀದಿಸಿ ತಿನ್ನುತ್ತ¤ ಜೆಡ್‌ ಸೇತುವೆಯಲ್ಲಿ ನಡೆಯಲು ಆರಂಭಿಸಿದರೆ ಸೇತುವೆಯ ಕೊನೆ ಮುಟ್ಟುವಾಗ ಮುಗಿದುಬಿಡುತ್ತದೆ” ಎಂದು ಖುಷಿಯಿಂದ ಹೇಳುತ್ತಾರೆ.

ಝಡ್‌ ಆಕೃತಿಯಲ್ಲಿ ಮಾರು ದೂರದವರೆಗೆ ಚಾಚಿಕೊಂಡಿರುವ ಈ ಸೇತುವೆಯ ಎರಡೂ ಬದಿಯಲ್ಲಿಯೂ ತಗಡಿನ ಶೀಟನ್ನು ಎತ್ತರದವರೆಗೆ ಕಟ್ಟಿದ್ದಾರೆ. ಶೀಟು ಬಿರುಕುಬಿಟ್ಟಿರುವಲ್ಲಿ ಇಣುಕಿ ನೋಡಿದರೆ ಕೆಲವು ಹಳೆಯ ರೈಲುಗಳು ನಿಂತಿರುವುದು ಕಂಡು ಬರುತ್ತವೆ. ಬ್ರಿಟಿಷರ ಕಾಲದಿಂದಲೂ ಆ ಸ್ಥಳ ರೈಲ್ವೆ ವರ್ಕ್‌ಶಾಪ್‌ಗಾಗಿಯೇ ಮೀಸಲಾಗಿದೆ. ಈ ಸೇತುವೆಯಲ್ಲಿ ಗುಹೆಯೊಳಗೆ ನಡೆದ ಹಾಗೆ ನಮ್ಮ ಹೆಜ್ಜೆಯ ದನಿ ನಮಗೇ ಪ್ರತಿಫ‌ಲಿಸುತ್ತದೆ. ಅದರಡಿಯಲ್ಲಿ “ಠಣ್‌ ಠಣ್‌’ ಎಂದು ಗುಡುಗುಡಿಸುವ ಸದ್ದು ಒಂಟಿಯಾಗಿರುವ ವೇಳೆಯಲ್ಲಿ ಮೈ ಜುಮ್ಮೆನಿಸುತ್ತದೆ. ಹಿಂದೆ ಕಳ್ಳಕಾಕರ ಹಾವಳಿಯಿಂದ ಕೆಲವೊಂದು ಅವಘಡಗಳು ಇಲ್ಲಿ ನಡೆದಿವೆ. ಝಡ್‌ ಸೇತುವೆ ದಾಟಿದಾಗ ಒಂದು ಮೇಲ್ಸೇತುವೆ ಸಿಗುತ್ತದೆ. ಮುಂಬಯಿ ಕರ್ನಾಟಕ ಸಂಘದ ಮುತುವರ್ಜಿಯಿಂದ ಈ ಸೇತುವೆಗೆ ವಿಶ್ವೇಶ್ವರಯ್ಯನವರ ಹೆಸರಿಟ್ಟದ್ದರಿಂದ ಅದರ ಮೇಲೆ ನಡೆಯುವಾಗ ನಮ್ಮದೆನುವ ಭಾವ. ಆ ಸೇತುವೆಯನ್ನು ದಾಟಿದರೆ ಮತ್ತೆ ಕರ್ನಾಟಕ ಸಂಘಕ್ಕೆ ಐದೇ ನಿಮಿಷ. ಮುಂಬೈಗೆ ಬಂದ ಆರಂಭದಲ್ಲಿ ಮೊದಲ ಬಾರಿ ನಾಟಕ ನೋಡಿದ್ದು ಈ ಸಂಘದಲ್ಲಿಯೇ. ಸುಮಾರು 85 ವರ್ಷಗಳಿಂದ ಇಲ್ಲಿ ಕನ್ನಡ ಕಾರ್ಯಕ್ರಮಗಳು, ಯಕ್ಷಗಾನ, ನಾಟಕಗಳು ನಡೆಯುತ್ತಿವೆ.

ಅನಿತಾ ಪಿ. ತಾಕೊಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next