Advertisement

ಸಾಹಿತ್ಯ ಇದ್ದಾಗಲೇ ಬದುಕು ಸುಂದರ: ಡಾ|ಎಸ್‌. ಕೆ. ಭವಾನಿ

11:30 AM Feb 17, 2021 | Team Udayavani |

ಮುಂಬಯಿ: ಸಾಹಿತ್ಯ ಎನ್ನುವುದು ಮಹಾಸಾಗರವಿದ್ದಂತೆ. ಮನುಷ್ಯನಿಗೆ ಸಾಹಿತ್ಯ ಇಲ್ಲದೆ ಗತಿಯಿಲ್ಲ. ಅದು ಇದ್ದಾಗಲೇ ಬದುಕು ಸುಂದರವಾಗುವುದು. ಅದೇ ರೀತಿ ಸಾಹಿತ್ಯಕ್ಕೆ ಎಲ್ಲ ಅಂಗಗಳೂ ಬೇಕು. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗ ಬಹಳ ಆಸಕ್ತಿಯಿಂದ ಕೆಲಸ ಮಾಡುತ್ತಿದೆ. ಯೋಜಕ ಸತ್ರ ದುರ್ಲಭ ಎನ್ನುವ ಮಾತಿದೆ ಎಂದು ಹಿರಿಯ ವಿದ್ವಾಂಸರಾದ ಡಾ| ಎಸ್‌. ಕೆ. ಭವಾನಿ ಅವರು ಹರ್ಷ ವ್ಯಕ್ತಪಡಿಸಿದರು.

Advertisement

ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ವಿಭಾಗದ ಆಂತರಿಕ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅನುಭವಿಗಳು ಮತ್ತು ಅನುಭಾವಿಗಳಾದ ವಿದ್ಯಾರ್ಥಿಗಳು ಇಲ್ಲಿ ಇದ್ದಾರೆ. ಇಲ್ಲಿನ ವಿದ್ಯಾರ್ಥಿಗಳ ಸಾಧನೆಯನ್ನು ಕಣ್ಣಾರೆ ನೋಡಿ ಸಂತಸವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಡಾ| ಜಿ.ಎನ್‌. ಉಪಾಧ್ಯ ಅವರು ಕನ್ನಡ ವಿಭಾಗದ ಹಾಗೂ ವಿದ್ಯಾರ್ಥಿಗಳ ಪ್ರಗತಿಯ ಕುರಿತು ಮಾತನಾಡಿ, ವಿಭಾಗದ ವಿದ್ಯಾರ್ಥಿಗಳು ಲೇಖಕರಾಗಿ ಬೆಳೆಯುತ್ತಿದ್ದಾರೆ. ಎಂ.ಎ. ಅಧ್ಯಯನದ ಸಂದರ್ಭದಲ್ಲಿಯೇ ಅವರು ಸಂಪ್ರಬಂಧವನ್ನು ಬರೆದು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸುತ್ತಿದ್ದಾರೆ. ಅವುಗಳಲ್ಲಿ ಹೆಚ್ಚಿನವುಗಳು ಪ್ರಕಟವಾಗುತ್ತಿರುವುದು ವಿದ್ಯಾರ್ಥಿಗಳ ಆಸಕ್ತಿ ಹಾಗೂ ಶ್ರಮದ ಫಲ. ವಿಭಾಗದ ಏಳಿಗೆಯಲ್ಲಿ ವಿದ್ಯಾರ್ಥಿಗಳ ಕೊಡುಗೆ ಮಹತ್ತರವಾದುದು ಎಂದರು.

ವಿಭಾಗದ ಅತಿಥಿ ಉಪನ್ಯಾಸಕರಾದ ಡಾ| ವಿಶ್ವನಾಥ ಕಾರ್ನಾಡ್‌ ಮಾತನಾಡಿ, ಸಾಹಿತ್ಯಕ್ಕೂ ಮನುಷ್ಯನಿಗೂ ತುಂಬಾ ಸಾಮೀಪ್ಯವಿದೆ. ಮನುಷ್ಯನ ಭಾವನೆಗಳು, ಸಂವೇದನೆಯನ್ನು ವ್ಯಕ್ತಪಡಿಸುವುದೇ ಸಾಹಿತ್ಯ. ಕನ್ನಡ ವಿಭಾಗದ ವಿದ್ಯಾರ್ಥಿಗಳು ಪದವಿ ಪಡೆಯುವುದಕ್ಕಾಗಿ ಬರುತ್ತಿಲ್ಲ. ಅವರೆಲ್ಲ ಭಿನ್ನ ಕ್ಷೇತ್ರದಲ್ಲಿ ಆಸಕ್ತಿ ಇರುವವರು. ಸಾಹಿತ್ಯದ ಆಸಕ್ತಿಯೇ ಅವರನ್ನು ಉನ್ನತ ಅಧ್ಯಯನಕ್ಕೆ ಪ್ರೇರೇಪಿಸಿರುವುದು ಎಂದು ಅಭಿಪ್ರಾಯಪಟ್ಟರು. ಮುಂಬಯಿಯ ರಂಗತಜ್ಞರಾದ ಡಾ| ಭರತ್‌ ಕುಮಾರ್‌ ಪೊಲಿಪು ಅವರು ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಎಂ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ ಕಲಾ ಭಾಗವತ್‌ ಅವರ ಎಂ.ಎ. ಶೋಧ ಸಂಪ್ರಬಂಧ ವೈದ್ಯ ಭೂಷಣ ಡಾ| ಬಿ. ಎಂ. ಹೆಗ್ಡೆ ಕೃತಿ ರೂಪದಲ್ಲಿ ಪ್ರಕಟಿಸಿ ವಿಭಾಗಕ್ಕೆ ಸಲ್ಲಿಸಿದರು. ಅದೇ ರೀತಿ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪದವಿ ಪ್ರದಾನ ಮಾಡಲಾಯಿತು. ಪೇತ್ರಿ ವಿಶ್ವನಾಥ ಶೆಟ್ಟಿ, ಸುಧಾ ಶೆಟ್ಟಿ, ಕೃತಿ ಚಡಗ, ಸುಪ್ರಿಯಾ ಉಡುಪ ಇವರು ತಮ್ಮ ಅಧ್ಯಯನದ ಅನುಭವವನ್ನು ಹಂಚಿಕೊಂಡರು.

Advertisement

ದುರ್ಗಪ್ಪ ಕೋಟಿಯವರ್‌ ಅವರು ತಮ್ಮ ಪಿಎಚ್‌.ಡಿ. ಮಹಾಪ್ರಬಂಧವನ್ನು, ಸುಶೀಲಾ ದೇವಾಡಿಗ ಅವರು ಎಂ.ಫಿಲ್‌ ಸಂಪ್ರಬಂಧವನ್ನು ವಿಭಾಗಕ್ಕೆ ಸಲ್ಲಿಸಿದರು. ಎಂ. ಎ. ವಿದ್ಯಾರ್ಥಿಗಳಾದ ಶುಭಲಕ್ಷಿ$¾à ಶೆಟ್ಟಿ, ಕಲಾ ಭಾಗವತ್‌, ಶಶಿಕಲಾ ಹೆಗಡೆ, ಶಾಂತಲಾ ಹೆಗಡೆ, ಪ್ರಭಾಕರ ದೇವಾಡಿಗ ಅವರು ಎಂ.ಎ. ಶೋಧ ಸಂಪ್ರಬಂಧವನ್ನು ಪ್ರಸ್ತುತಪಡಿಸಿದರು. ಕಲಾವಿದರಾದ ಮೋಹನ್‌ ಮಾರ್ನಾಡ್‌, ಸುರೇಖಾ ದೇವಾಡಿಗ, ಶೈಲಜಾ ಹೆಗಡೆ, ಶ್ರೀನಿವಾಸ ಪತಕಿ ಮೊದಲಾದವರು ಉಪಸ್ಥಿತರಿದ್ದರು. ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಶೆಟ್ಟಿ ಅವರು ಕಾರ್ಯಕ್ರಮ ಸಂಯೋಜಿಸಿ, ವಂದಿಸಿದರು.

ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳ ಜತೆಯಲ್ಲಿ ಕನ್ನಡ ವಿಭಾಗ ಸಂಶೋಧನೆಗೆ ಹೆಚ್ಚು ಒತ್ತು ಕೊಡುತ್ತಿದೆ. ಇಂದು ವಿದ್ಯಾರ್ಥಿಗಳು ಸ್ನಾತಕೋತ್ತರ ಅಧ್ಯಯನದ ಸಂದರ್ಭದಲ್ಲಿಯೇ ಸಂಪ್ರಬಂಧಗಳನ್ನು ರಚಿಸುತ್ತಿದ್ದಾರೆ. ಅವರೆಲ್ಲರ ಶೋಧ ಸಂಪ್ರಬಂಧ, ಮಹಾಪ್ರಬಂಧಗಳನ್ನು ನೋಡಿ ಬೆರಗಾದೆ. ಅಧ್ಯಯನ, ಸಂಶೋಧನೆಯನ್ನು ನಡೆಸುವಾಗ ಬೇರೆ ಬೇರೆ ನೆಲೆಯಲ್ಲಿ ಯೋಚಿಸಬೇಕು. ಚರಿತ್ರೆಯನ್ನು ಕಟ್ಟಿಕೊಡುವಾಗ ಮತ್ತೆ ಮತ್ತೆ ಶೋಧನೆಗೆ ಒಳಪಡಿಸಬೇಕು. ಸಾಹಿತ್ಯದ ನೆಲೆಯನ್ನು ಭಿನ್ನ ರೀತಿಯಲ್ಲಿ ಪರಿಕಲ್ಪಿಸಬೇಕು. ಇದಕ್ಕೆ ಪೂರಕವಾದ ವಾತಾವರಣ ಇಲ್ಲಿದೆ. ಡಾ| ಉಪಾಧ್ಯ ಅವರಂತಹ ಮಾರ್ಗದರ್ಶಕರು ಕನ್ನಡ ವಿಭಾಗದಲ್ಲಿ ಇರುವುದರಿಂದ ಇದು ಸಾಧ್ಯವಾಗಿದೆ. ನಿಜವಾದ ಅರ್ಥದಲ್ಲಿ ಇದೊಂದು ನಿರಂತರವಾಗಿ ಒಂದಲ್ಲ ಒಂದು ಚಟುವಟಿಕೆಯಿಂದ ನಿರತವಾಗಿರುವ ಜೀವಂತ ವಿಭಾಗ ಎನ್ನುವುದರಲ್ಲಿ ಅನುಮಾನವಿಲ್ಲ. ಮುಂಬಯಿ ಕನ್ನಡಿಗರ ಅಸ್ಮಿತೆಯಾಗಿ ವಿಭಾಗದಲ್ಲಿ ಕೆಲಸಗಳು ನಡೆಯುತ್ತಿರುವುದು ಅಭಿಮಾನದ ಸಂಗತಿ. -ಡಾ| ಭರತ್‌ ಕುಮಾರ್‌ ಪೊಲಿಪು ರಂಗತಜ್ಞರು, ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next