ದ್ವಾರಕೀಶ್ ಬ್ಯಾನರ್‌ನಲ್ಲಿ ನಿರ್ಮಾಣಗೊಂಡ “ಚೌಕ’ಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರತಂಡ ಕೂಡ ಹ್ಯಾಪಿಯಾಗಿದೆ. ಆದರೆ, ಹಿರಿಯ ನಿರ್ದೇಶಕ, ನಿರ್ಮಾಪಕ ಕಮ್ ನಟ ದ್ವಾರಕೀಶ್ ಅವರಿಗೆ ಮಾತ್ರ, ಸಿನಿಮಾ ಅವಧಿ ಜಾಸ್ತಿಯಾಯ್ತು ಎಂಬ ಸಣ್ಣ ಬೇಸರ ಇದೆ. ಅದಕ್ಕೆ ಸರಿಯಾಗಿ, ಚಿತ್ರ ಬಿಡುಗಡೆಗೂ ಮುನ್ನವೇ ಸಿನಿಮಾದ ಅವಧಿ ಜಾಸ್ತಿಯಾಗಿದೆ, ಅಷ್ಟೊಂದು ತಾಳ್ಮೆಯಿಂದ ಕುಳಿತು ಜನ ಸಿನಿಮಾ ನೋಡೋದು ಕಷ್ಟ.
ಅಂತ ಹೇಳಿದ್ದರಂತೆ. ಆದರೆ, ಅವರ ಪುತ್ರ ಯೋಗೀಶ್ ಬಾಲಿವುಡ್‌ನ ಕೆಲವು ಸಿನಿಮಾಗಳ ಅವಧಿ ಬಗ್ಗೆ ಹೇಳಿ ವಾದ ಮಾಡಿದ್ದರಂತೆ. “ಸಿನಿಮಾವೇನೋ ಚೆನ್ನಾಗಿದೆ. ಆದರೆ, ಅವಧಿಯನ್ನು ಇನ್ನಷ್ಟು ಮಿತಗೊಳಿಸಬೇಕು ಅಂತ ಮೊದಲೇ ಹೇಳಿದ್ದೆ. ಅದು ಬಿಡುಗಡೆ ನಂತರ ಚಿತ್ರತಂಡಕ್ಕೆ ಗೊತ್ತಾಗಿದೆ. ನಾನು ಕೆಲ ತಪ್ಪುಗಳನ್ನು ಮಾಡಿ ಅದೆಷ್ಟೋ ವರ್ಷಗಳ ಕಾಲ ಸಮಸ್ಯೆ ಎದುರಿಸಬೇಕಾಗಿ ಬಂತು. ಆದರೆ, ಅಂತಹ ತಪ್ಪುಗಳನ್ನು ಮಕ್ಕಳು ಮಾಡಬಾರದು.
ಆ ಕಾಲದಲ್ಲಿ ನಾನು ಅತಿ ವೇಗವಾಗಿ ಸಿನಿಮಾಗಳನ್ನು ಮಾಡುತ್ತಿದ್ದವನು. ಅಂತಹವನಿಗೇ, ಕೆಲ ತಪ್ಪುಗಳಿಂದಾಗಿ ಸಿನಿಮಾ ಮಾಡಲಾಗದೆ ನನ್ನ ಕೈಕಾಲುಗಳು ಕಟ್ಟಿದಂತಾಗಿದ್ದವು. ಮುಂದಿನ ದಿನಗಳಲ್ಲಿ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿ ಸಿನಿಮಾ ನಿರ್ಮಾಣ ಮಾಡಬೇಕು’ ಎಂಬುದು ದ್ವಾರಕೀಶ್ ಅವರ ಮನವಿ. “ಆ ಕಾಲದಲ್ಲೇ ಒಂದರ ಹಿಂದೆ ಒಂದರಂತೆ ಸಿನಿಮಾ ಮಾಡುತ್ತಿದ್ದವನು ನಾನು. ಸಿನಿಮಾ ಮುಹೂರ್ತ ದಿನದಂದೇ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಅನೌನ್ಸ್ ಮಾಡುತ್ತಿದ್ದೆ.
ಮದ್ರಾಸ್‌ನಲ್ಲಿ ಅನೇಕ ನಿರ್ಮಾಪಕರು ನನಗಾಗಿಯೇ ಕಾಯುತ್ತಿದ್ದ ದಿನಗಳಿದ್ದವು. ಕಾರಣ, ಆ ದಿನಗಳಲ್ಲೇ ನಾನು ರಜನಿಕಾಂತ್ ಅವರ ಸಿನಿಮಾ ಮಾಡುತ್ತಿದ್ದವನು. ಸ್ಟಾರ್‌ಗಳ ಸಿನಿಮಾ ಕೈಯಲ್ಲಿರುತ್ತಿದ್ದವು. ಬೇಕಾದಷ್ಟು ಹಣವೂ ಹರಿದು ಬರುತ್ತಿತ್ತು. ಬಹುಶಃ ಅದೇ ಕಾರಣಕ್ಕೆ ಒಂದಷ್ಟು ಅಹಂಕಾರವೂ ಬಂದಿತ್ತೇನೋ, ಆ ನಂತರದ ದಿನಗಳಲ್ಲಿ ನನಗೆ ದೊಡ್ಡ ಪೆಟ್ಟು ಬಿದ್ದಿದ್ದು ನಿಜ. ಸುಮಾರು 18 ವರ್ಷ ಆ ಹೊಡೆತದಿಂದ ಹೊರಬರಲಾಗಲೇ ಇಲ್ಲ’ ಎನ್ನುತ್ತಲೇ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ ದ್ವಾರಕೀಶ್.
“ಆಗ ರಜನಿಕಾಂತ್‌ಗೆ ಹಿಂದಿ ಸಿನಿಮಾ ಮಾಡಲು ಹೊರಟಿದ್ದೆ. ವಿಷ್ಣುವರ್ಧನ್‌ಗೆ ಇಮೇಜ್ ಇಲ್ಲದಂತಹ ಪಾತ್ರ ಕೊಟ್ಟು ಮಾಡಿದ “ಇಂದಿನ ರಾಮಾಯಣ’ ದೊಡ್ಡ ಲಾಭ ತಂದುಕೊಟ್ಟಿತ್ತು. ನಿರ್ದೇಶಿಸಿದ “ನೀ ಬರೆದ ಕಾದಂಬರಿ’ ಚಿತ್ರ ಕೂಡ ಡಬ್ಬಲ್ ಲಾಭ ಮಾಡಿಕೊಟ್ಟಿತು. ಆಗ ನಾನು ಅತಿಯಾದ ಖುಷಿಯಿಂದ ತೇಲದಿದ್ದರೆ, ಇಂದಿಗೆ ನೂರು ಸಿನಿಮಾಗಳನ್ನು ಮಾಡುತ್ತಿದ್ದೆನೇನೋ? ಆದರೆ, ಅದು ಸಾಧ್ಯವಾಗಲಿಲ್ಲವಲ್ಲ ಎಂಬ ಸಣ್ಣ ನೋವು ನನ್ನೊಳಗಿದೆ’ ಎನ್ನುತ್ತಲೇ ಹಾಗೊಂದು ನಗೆ ಕೊಡುತ್ತಾರೆ ದ್ವಾರಕೀಶ್.
ದ್ವಾರಕೀಶ್ ಇಷ್ಟೆಲ್ಲಾ ಮಾತಾಡಿದ್ದು, “ಚೌಕ’ ಚಿತ್ರದ ಸಕ್ಸಸ್ ಮೀಟ್‌ನಲ್ಲಿ. ಪ್ರತಿ ಶುಕ್ರವಾರವೂ, ಒಬ್ಬ ಹೀರೋನ ಉದಯವಾಗುತ್ತೆ. ಅವನ ಜತೆ ಜಗಳ ಶುರುವಾದಾಗ, ಇನ್ನೊಬ್ಬ ಹೀರೋ ಹೊರಬರುತ್ತಿದ್ದ. ಅವನೊಂದಿಗೂ ಗಲಾಟೆಯಾದಾಗ, ಮಗದೊಬ್ಬ ಹೀರೋ ಬರುತ್ತಿದ್ದ. ಈಗ ಮಕ್ಕಳು ನನ್ನಂತೆ ಆ ತಪ್ಪುಗಳನ್ನು ಮಾಡಬಾರದು’ ಎಂಬ ಸಣ್ಣ ಕಿವಿಮಾತನ್ನೂ ಹೇಳಿದರು ದ್ವಾರಕೀಶ್. ಈ ಸಂದರ್ಭದಲ್ಲಿ ತರುಣ್ ಸುಧೀರ್, ಯೋಗೀಶ್ ದ್ವಾರಕೀಶ್, ಪ್ರೇಮ್, ಪ್ರಜ್ವಲ್ ಸೇರಿದಂತೆ ಹಲವರು ಇದ್ದರು.