Advertisement

ವಿವಿಧೆಡೆ ಕನ್ನಡ ಶಾಲೆಗಳು ಆರಂಭ

11:58 AM Apr 22, 2021 | Team Udayavani |

ದಕ್ಷಿಣ ಕ್ಯಾಲಿಫೋರ್ನಿಯಾ ನಗರಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯ ಕನ್ನಡಿಗರ ಮಕ್ಕಳಿಗೆ ಕನ್ನಡವನ್ನು ಕಲಿಸುವ ಸಲುವಾಗಿ ಬೆಳಕು ಕನ್ನಡ ಶಾಲೆಯನ್ನು ಎ. 3ರಂದು ಕನ್ನಡ ಅಕಾಡೆಮಿಯ ಅಧ್ಯಕ್ಷ ಶಿವ ಗೌಡರ್‌ ಹಾಗೂ ಫೌಂಡೇಶನ್‌ ಫಾರ್‌ ದಿ ಪ್ರಿಸರ್ವೇಶನ್‌ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ| ಪಿ.ಆರ್‌. ಮುಕುಂದ್‌ ಉದ್ಘಾಟಿಸಿದರು.

Advertisement

ಈ ಶಾಲೆಯು ಆರ್ಟೀಶಿಯ, ಬೆಲ್ಫ್ಲವರ್‌, ಬ್ಯುನಾಪಾರ್ಕ್‌, ಸೈಪ್ರಸ್‌Õ, ಸೆರಿಟೋಸ್‌, ಫ‌ುಲ್ಲರ್ಟನ್‌, ಲೇಕುಡ್‌, ಲಾಪಾಲ್ಮ, ಲಾಂಗ್‌ಬೀಚ್‌, ನಾವಾರ್ಕ್‌, ಪ್ಲಾಸೆಂಟಿಯಾಸ ಹಂಟಿಂಗ್ಟನ್‌ ಬೀಚ್‌ ನಗರಗಳಲ್ಲಿ ವಾಸಿಸುವ ಮಕ್ಕಳಿಗೆ ಕನ್ನಡ ಕಲಿಸಲಿದೆ.

ಕವಿ, ನಾಟಕಕಾರ, ನಿರ್ದೇಶಕ ಡಾ| ಚಂದ್ರಶೇಖರ ಕಂಬಾರ, ಕನ್ನಡ ಕಾರ್ಯಕರ್ತ ಸಾ.ರಾ. ಗೋವಿಂದು, ಜಾನಪದ ಗಾಯಕ-ಸಂಯೋಜಕ ಮತ್ತು ಸಂಗೀತ ನಿರ್ದೇಶಕ ರಘು ದೀಕ್ಷಿತ್‌, ಇನ್ಸ್‌ಟಾಗ್ರಾಮ್‌ನಲ್ಲಿ ಖ್ಯಾತಿಗಳಿಸಿದ ಆಕರ್ಷಾ ಕಮಲಾ ಅವರು ವರ್ಚುವಲ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಸ್ತುತ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಲಾಗುತ್ತಿದ್ದು, ಮುಂದೆ ಕ್ಲಾಸ್‌ ರೂಮ್‌ಗಳಲ್ಲಿ ತರಗತಿಗಳನ್ನು ನಡೆಸಲಾಗುವುದು. ಈ ಬಗ್ಗೆ ಇನ್ನೂ ಸ್ಥಳ, ದಿನಾಂಕವನ್ನು ಅಂತಿಮಗೊಳಿಸಿಲ್ಲ.

ಕನ್ನಡ ಅಕಾಡೆಮಿಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಬೆಳಕು ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ  ಕನ್ನಡ ಅಕಾಡೆಮಿಯ ಪಠ್ಯಕ್ರಮವನ್ನೇ ಅನುಸರಿಸಲಾಗುತ್ತದೆ.

Advertisement

ಹೈಸ್ಕೂಲ್‌ ವಿಭಾಗದಲ್ಲಿ ಕನ್ನಡ ಕಲಿಕೆ

ಹೂಸ್ಟನ್‌ನ ಫೋರ್ಟ್‌ ಬೆಂಡ್‌ ಐಎಸ್‌ಡಿ, ಸೈಪ್ರಸ್ಸ್ ಫೈರ್‌ಬ್ಯಾಂಕ್ಸ್‌ ಐಎಸ್‌ಡಿ, ಸ್ಪ್ರಿಂಗ್‌ ಬ್ರ್ಯಾಂಚ್‌ ಐಎಸ್‌ಡಿ ಹೈಸ್ಕೂಲ್‌ಗಳಲ್ಲಿ ಕನ್ನಡ ಕಲಿಸಲು ಮಾನ್ಯತೆ ದೊರೆತಿದೆ. ಕನ್ನಡ ಕಲಿಯಿಂದ 7ನೇ ಗ್ರೇಡ್‌ ಪಡೆದ ವಿದ್ಯಾರ್ಥಿಗಳು ಇಲ್ಲಿ ಹೈಸ್ಕೂಲ್‌ ವಿಭಾಗದಲ್ಲಿ ಕನ್ನಡ ಕಲಿಕೆಯನ್ನು ಮುಂದುವರಿಸಲು ಅನುಮತಿ ದೊರೆತಿದೆ.

ಯೂಟ ಕನ್ನಡ ಕಲಿ

ಯೂಟ ಕನ್ನಡ ಕೂಟದ ವತಿಯಿಂದ ಕನ್ನಡ ಅಕಾಡೆಮಿಯ ಸಹಯೋಗದೊಂದಿಗೆ ಕನ್ನಡ ಕಲಿ ಕಾರ್ಯಕ್ರಮವನ್ನು ಎ. 3ರಿಂದ ಪ್ರಾರಂಭಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಒಪ್ಪಿಗೆ ಮೇರೆಗೆ 8 ಹಂತಗಳಲ್ಲಿ ಕನ್ನಡ ಕಲಿಕೆಯನ್ನು ವರ್ಚುವಲ್‌ ಮೂಲಕ ಆರಂಭಿಸಲಾಗಿದ್ದು, 4 ತರಗತಿಗಳಿಗೆ 24 ವಿದ್ಯಾರ್ಥಿಗಳು  ನೋಂದಣಿಯಾಗಿದ್ದಾರೆ.

ಬಿಲಿಟರಸಿ ಮುದ್ರೆ

ಅಟ್ಲಾಂಟದ ಜಾರ್ಜಿಯ ರಾಜ್ಯದ ಜಾರ್ಜಿಯಾ ಶಿಕ್ಷಣ ಇಲಾಖೆಯು ಕನ್ನಡ ಭಾಷೆಗೆ ಮಾನ್ಯತೆ ನೀಡಿದ್ದು, ಕನ್ನಡವನ್ನು ವಿದೇಶಿ ಭಾಷೆಯಾಗಿ ತರಬೇತಿ ಪಡೆದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯುಎಸ್‌ನ ಜಾರ್ಜಿಯಾ ಶಿಕ್ಷಣ ಇಲಾಖೆ ವತಿಯಿಂದ ಬಿಲಿಟರಸಿ ಮುದ್ರೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ. ಕನ್ನಡ ಅಕಾಡೆಮಿಯ ಸಹಯೋಗ ದೊಂದಿಗೆ ಕಮ್ಮಿಂಗ್‌ ಕಸ್ತೂರಿ ಕನ್ನಡ ಶಾಲೆ ಇಲ್ಲಿ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಲಿಸುತ್ತಿದ್ದು, ಪ್ರೌಢಶಾಲೆ ವಿದ್ಯಾರ್ಥಿಗಳು ಅವಂತ್‌ ಮೌಲ್ಯಮಾಪನ ಪರೀಕ್ಷೆ ಬರೆಯಲು ಕೆಕೆಎಸ್‌ನೊಂದಿಗೆ ಕಾರ್ಯ ನಿರ್ವಹಿಸಬಹುದು.

ಉತ್ತರ ಕ್ಯಾಲಿಫೋರ್ನಿಯಾ, ಮಿಷಿಗನ್‌, ಟೆಕ್ಸಸ್‌, ಜಾರ್ಜಿಯಾ, ವರ್ಜೀನಿಯಾ ರಾಜ್ಯಗಳಲ್ಲೂ  ಕನ್ನಡ ಭಾಷೆಯನ್ನು ಗುರುತಿಸಲಾಗಿದ್ದು, ಇಲ್ಲಿನ ಕೆಲವು ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಮಾನ್ಯತೆ ದೊರೆತಿದೆ.

ಬಾಸ್ಟನ್‌ನಲ್ಲಿ  ಕನ್ನಡ ಕಲಿ ಪ್ರಾರಂಭ

ಬಾಸ್ಟನ್‌ ಕನ್ನಡ ಶಾಲೆಯು ಯುಎಸ್‌ಎಯಲ್ಲಿರುವ ಮಸ್ಸಾಚುಸ್ಸೆಟ್ಸ್‌ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ. ಮಸ್ಸಾಚುಸ್ಸೆಟ್ಸ್ ರಾಜ್ಯದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಮಕ್ಕಳಿಗೆ ಕನ್ನಡವನ್ನು ಕಲಿಸಬೇಕೆಂಬ ಉದ್ದೇಶದಿಂದ ಸ್ವಯಂ ಸೇವಕರಾದ ಚಂದ್ರ ಕೆಂಗಟ್ಟೆ, ನಿರ್ಮಲ ದೊಡ್ಡಣ್ಣರ, ವಿದ್ಯಾ ಅರುಣ್‌ ಹಲಕಟ್ಟಿ ಮತ್ತು ಶ್ವೇತಾ ಭದ್ರಾವತಿ ಪಾಟೀಲ್‌ ಪ್ರಾರಂಭಿಸಿರುವ ಈ ಶಾಲೆಯಲ್ಲಿ  ಈವರೆಗೆ 25 ಮಕ್ಕಳು ಆನ್‌ಲೈನ್‌ ತರಗತಿಗಳಲ್ಲಿ ಕನ್ನಡ ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕನ್ನಡವನ್ನು ಕಲಿಯಲು ಸೇರಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಶಾಲೆಯ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರ ಕೆಂಗಟ್ಟೆ, ಈ ಶಾಲೆಯು ಕನ್ನಡ ಅಕಾಡೆಮಿಯ ಒಂದು ಭಾಗವಾಗಿದ್ದು, ಅವರ ಪಠ್ಯಕ್ರಮವನ್ನು ಅನುಸರಿಸಿ ಮತ್ತು ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಶಾಲೆಗೆ ಬೇಕಾದ ಎಲ್ಲ ಸಲಹೆ ಮತ್ತು ಸಹಕಾರ ಕನ್ನಡ ಅಕಾಡೆಮಿ ವತಿಯಿಂದ ದೊರೆಯುತ್ತಿದೆ ಎಂದು ತಿಳಿಸಿದರು.

ಕನ್ನಡ ಕಲಿಕೆಗೆ ನೋಂದಾಯಿಸಿಕೊಳ್ಳಿ

ಸಿಂಗಾಪುರ ಕನ್ನಡ ಸಂಘದಿಂದ ಮನೆಯಲ್ಲೇ ಕನ್ನಡ ಕಲಿ ವಾರಾಂತ್ಯದ ತರಗತಿಗಳು ಮೇ 2ರಿಂದ ಆರಂಭಗೊಳ್ಳಲಿವೆ. ಕನ್ನಡ ಸಂಘ ಸಿಂಗಾಪುರದ ಸದಸ್ಯರ ಮಕ್ಕಳಿಗೆ ಮಾತ್ರ ನೋಂದಣಿಗೆ ಅವಕಾಶ. ವಿಭಾಗ 1ರಲ್ಲಿ 6- 8 ವರ್ಷದ ಮಕ್ಕಳು ಮತ್ತು ವಿಭಾಗ 2ರಲ್ಲಿ 9- 15 ವರ್ಷದ ಮಕ್ಕಳು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ ಕೊನೆಯ ದಿನಾಂಕ ಎಪ್ರಿಲ್‌ 20.

Advertisement

Udayavani is now on Telegram. Click here to join our channel and stay updated with the latest news.

Next