Advertisement

ಎರಡು ವರ್ಷಗಳಿಂದ ತೆರೆಯದ ಭೂತಕಲ್ಲು ಸರಕಾರಿ ಕನ್ನಡ ಶಾಲೆ

06:00 AM May 24, 2018 | Karthik A |

ಸುಳ್ಯ: ಇಲ್ಲಿ ಪಾಠ ಕೇಳಲು ಕೊಠಡಿ ಇದೆ. ಪಾಠ ಹೇಳಲು ಶಿಕ್ಷಕರೂ ಇದ್ದರು. ವಿದ್ಯಾರ್ಥಿಗಳಿಗೆ ಬೇಕಿರುವ ಮೂಲ ಸೌಕರ್ಯ ಇದೆ. ಆದರೆ ಎರಡು ವರ್ಷಗಳಿಂದ ಶೂನ್ಯ ದಾಖಲಾತಿ ಕಾರಣದಿಂದ ಶಾಲೆಗೆ ಬೀಗ ಜಡಿದಿದೆ! ನಗದಿಂದ 12 ಕಿ.ಮೀ. ದೂರದಲ್ಲಿರುವ ಅರಣ್ಯದೊಳಗಿನ ಭೂತಕಲ್ಲು ಸರಕಾರಿ ಕನ್ನಡ ಶಾಲೆಯ ಕಥೆ-ವ್ಯಥೆಯಿದು. ಈ ಬಾರಿ ಪುನಾರಂಭಗೊಳ್ಳಬಹುದೇ ಅಥವಾ ಶೂನ್ಯ ದಾಖಲಾತಿ ಮೂರನೇ ವರ್ಷವೂ ಮುಂದುವರಿಯಲಿದೆಯೇ ಎನ್ನುವ ಕುತೂಹಲಕ್ಕೆ ತೆರೆ ಬೀಳಲು ಇನ್ನು ಒಂದು ವಾರ ಉಳಿದಿದೆ.

Advertisement

ಅರಣ್ಯ ಭಾಗದ ಶಾಲೆ
ಕಾಡಿನೊಳಗಿನ 5 ಕಿ.ಮೀ. ಕಚ್ಚಾ ರಸ್ತೆ ಹೊರತುಪಡಿಸಿ, ಮಿಕ್ಕ ವ್ಯವಸ್ಥೆಗಳಿಗೆ ಇಲ್ಲಿ ತೊಂದರೆ ಇಲ್ಲ. ಆಲೆಟ್ಟಿ ಗ್ರಾಮದ ಭೂತಕಲ್ಲಿನ ಅರಣ್ಯ ಭಾಗದಲ್ಲಿರುವ ಈ ಶಾಲೆ ಸುಳ್ಯದಿಂದ 12 ಕಿ.ಮೀ. ಅಂತರವಿದೆ. 65 ವರ್ಷದ ಹಿಂದೆ ಮುಳಿ ಮಾಡಿನ ಕಟ್ಟಡದಲ್ಲಿ ಕಿ.ಪ್ರಾ. ಶಾಲೆಯಾಗಿ ಆರಂಭಗೊಂಡು, ಅನಂತರ ಮೂಲ ಸೌಕರ್ಯದೊಂದಿಗೆ ಹಿ.ಪ್ರಾ. ಶಾಲೆ ಆಗಿ ಮೇಲ್ದರ್ಜೆಗೆ ಏರಿ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಹಿರಿಮೆ ಹೊಂದಿದೆ.

ಮುಚ್ಚಿದ ಶಾಲೆ
ಶಿಕ್ಷಣ ಇಲಾಖೆಯ ನಿಯಮ ಪ್ರಕಾರ ಈ ಶಾಲೆ ಮುಚ್ಚಿಲ್ಲ. ಶೂನ್ಯ ದಾಖಲಾತಿ ಕಾರಣದಿಂದ ತರಗತಿ ನಡೆಸಲು ಮಕ್ಕಳಿಲ್ಲ ವಷ್ಟೆ. ಈ ವರ್ಷ ದಾಖಲಾತಿ ಆದಲ್ಲಿ ಮತ್ತೆ ಪುನಾರಂಭಿಸಲು ಅವಕಾಶ ಇದೆ ಎನ್ನುತ್ತದೆ ಕ್ಷೇತ್ರ ಶಿಕ್ಷಣ ಇಲಾಖೆ. ಆದರೆ ಊರವರ ಪಾಲಿಗೆ ಇದು ಮುಚ್ಚಲ್ಪಟ್ಟ ಶಾಲೆ. ಎರಡು ವರ್ಷದಿಂದ ಇಲ್ಲಿ ಯಾವುದೇ ಶೈಕ್ಷಣಿಕ ಚಟು ವಟಿಕೆಗಳು ನಡೆದಿಲ್ಲ. ಅದಕ್ಕೆ ಕಾರಣ ಇಲ್ಲಿ ದಾಖಲಾತಿಗೆ ಮಕ್ಕಳು ಬಾರದಿರುವುದು.

ಅಂಕಿ – ಅಂಶದ ಕಥೆ
ನಾಲ್ಕು ವರ್ಷಗಳಿಂದ 1ನೇ ತರಗತಿಗೆ ಮಕ್ಕಳು ದಾಖಲಾತಿ ಆಗಿಲ್ಲ. 2015-16ರಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದು, ಅವರ ಶೈಕ್ಷಣಿಕ ಅವಧಿ ಮುಕ್ತಾಯದ ಬಳಿಕ ಹೊಸ ಸೇರ್ಪಡೆಯಾಗಿಲ್ಲ. ಹಾಗಾಗಿ ಊರವರ ವಿರೋಧದ ನಡುವೆಯೂ ಇಲ್ಲಿನ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾಯಿಸಿ, ಶೈಕ್ಷಣಿಕ ಚಟುವಟಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

2010-11ನೇ ವರ್ಷದಲ್ಲಿ 1ರಿಂದ 5ನೇ ತರಗತಿಯ ತನಕ ಇದ್ದ ಒಟ್ಟು ಮಕ್ಕಳು ಸಂಖ್ಯೆ- ಒಂಭತ್ತು, 2014-15ರಲ್ಲಿ ಸಂಖ್ಯೆ- ಆರು, 2015-16ರಲ್ಲಿ ನಾಲ್ಕು, 2016-17ರಲ್ಲಿ ಇಬ್ಬರು ವಿದ್ಯಾರ್ಥಿಗಳು ಇದ್ದರು. 2014ರಿಂದ 2018ರ ತನಕ ಇಲ್ಲಿ ಒಂದನೇ ತರಗತಿಗೆ ದಾಖಲಾತಿಯೇ ಆಗಿಲ್ಲ. ಮೂರು ವರ್ಷದ ಹಿಂದೆಯೇ ಇಬ್ಬರು ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗೆ ಸೇರಿಸಿ, ಶೈಕ್ಷಣಿಕ ಚಟುವಟಿಕೆ ಕೊನೆಗೊಳಿಸುವ ಪ್ರಯತ್ನ ನಡೆದಿದ್ದರೂ ಅದಕ್ಕೆ ಆಕ್ಷೇಪ ವ್ಯಕ್ತವಾಗಿ, ಒಂದು ವರ್ಷ ಮತ್ತೆ ತರಗತಿಗಳು ನಡೆದವು. ಎರಡು ವರ್ಷಗಳಲ್ಲಿ ಆ ವಿದ್ಯಾರ್ಥಿಗಳು ಉತೀರ್ಣಗೊಂಡ ಅನಂತರ, ಇಲ್ಲಿ ವಿದ್ಯಾರ್ಥಿಗಳು ಇಲ್ಲದೆ ಶಾಲಾ ಚಟುವಟಿಕೆ ಕೊನೆ ಆಗಿತ್ತು.

Advertisement

ದಾಖಲಾತಿ ಮುಖ್ಯ
ಶಾಲಾ ವ್ಯಾಪ್ತಿಯ ಪರಿಸರದಲ್ಲಿ ಮನೆ-ಮನೆ ಭೇಟಿ ಮಾಡಿ ಮಕ್ಕಳ ಸೇರ್ಪಡೆಗೊಳಿಸುವ ಪ್ರಕ್ರಿಯೆ ಅಗತ್ಯವಿದೆ. ಕಳೆದ ಬಾರಿ 1ನೇ ತರಗತಿಗೆ ದಾಖಲಾತಿ ಪಡೆಯುವ ವಯಸ್ಕ ಮಕ್ಕಳು ಇರಲಿಲ್ಲ ಅನ್ನುತ್ತಿದೆ ಶಿಕ್ಷಣ ಇಲಾಖೆ. ಈ ಬಾರಿ, ಶಾಲೆಗೆ ಹತ್ತಿರವಿರುವ ಪ್ರದೇಶಗಳಲ್ಲಿ ಶಾಲಾ ದಾಖಲಾತಿ ಆಂದೋಲನ ಹಮ್ಮಿಕೊಳ್ಳಬೇಕು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ಶಾಲಾ ಖರ್ಚು
ಸುಳ್ಯ ತಾಲೂಕಿನ 66 ಕಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ 5 ಸಾವಿರ ರೂ.ನಂತೆ 3.30 ಲಕ್ಷ ರೂ., ಹಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ 5,200 ರೂ.ನಂತೆ 73 ಶಾಲೆಗಳಿಗೆ 3.79 ಲಕ್ಷ ರೂ., ಪ್ರೌಢಶಾಲೆಗಳಿಗೆ ತಲಾ 5,500 ರೂ.ನಂತೆ 16 ಶಾಲೆಗಳಿಗೆ 8.8 ಲಕ್ಷ ರೂ. ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಕಳುಹಿಸಲಾಗಿದೆ.

ಮೂಲ ಸೌಕರ್ಯ ಇದೆ
ಭೂತಕಲ್ಲು, ಕುಂಚಡ್ಕ, ಕೊಚ್ಚಿಮೂಲೆ, ಕಟ್ಟೆಕಳ, ಮೂಕಮಲೆ ಮೊದಲಾದ ಪ್ರದೇಶಗಳಿಂದ ವಿದ್ಯಾರ್ಥಿಗಳು ಕಲಿಕೆಗೆ ಬರುತ್ತಿದ್ದರು. ಸುಸಜ್ಜಿತ ಕೊಠಡಿ, 2005-06ರಲ್ಲಿ ಸರ್ವಶಿಕ್ಷಣ ಅಭಿಯಾನದಡಿ 1.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕೊಠಡಿ, 2012-13ರಲ್ಲಿ 50 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿದ ವಿಶೇಷ ಶೌಚಾಲಯ ಇಲ್ಲಿದೆ. ಹಾಗಾಗಿ ಇಲ್ಲಿ ಕಚ್ಚಾ ರಸ್ತೆ ಬಿಟ್ಟರೆ ಮಿಕ್ಕ ಸಮಸ್ಯೆ ಇಲ್ಲ. ಮಕ್ಕಳ ಆಟೋಟಕ್ಕೆ ಕಿರಿದಾದ ಮೈದಾನ, ಶಾಲಾ ಕಟ್ಟಡಕ್ಕೆ ವಿದ್ಯುತ್‌, ಅಕ್ಷರ ದಾಸೋಹಕ್ಕೆ ವ್ಯವಸ್ಥೆಗಳಿವೆ.

ಪುನಾರಂಭ
ಶಾಲಾ ದಾಖಲಾತಿಗೆ ಇನ್ನಷ್ಟು ಸಮಯವಿದೆ. ಒಂದನೇ ತರಗತಿಗೆ ಮಕ್ಕಳು ಸೇರ್ಪಡೆಗೊಂಡಲ್ಲಿ ಶಾಲಾ ಪುನಾರಂಭಗೊಳ್ಳಲಿದೆ. ಶೂನ್ಯ ದಾಖಲಾತಿ ಕಾರಣದಿಂದ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ನಡೆದಿಲ್ಲ. ಇದನ್ನು ಶಾಶ್ವತವಾಗಿ ಮುಚ್ಚಿಲ್ಲ. ಮತ್ತೆ ಆರಂಭಕ್ಕೆ ಅವಕಾಶವಿದೆ.
– ರಾಧಾಕೃಷ್ಣ, ಸಿಆರ್‌ಪಿ

— ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next