Advertisement

ಕಾಡಂಬಳ: ಕನ್ನಡ ಶಾಲೆಗೆ ಬೇಕಿದೆ ಶಿಕ್ಷಕರ ಬಲ!

03:19 PM Jun 16, 2023 | Team Udayavani |

ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ನಾರು ಗ್ರಾ.ಪಂ. ವ್ಯಾಪ್ತಿಯ ದುರ್ಗ ಗ್ರಾಮದ ಕಾಡಂಬಳ ಸ.ಹಿ. ಪ್ರಾ. ಶಾಲೆಯನ್ನು ಅವಗಣಿಸಲಾಗುತ್ತಿದೆ ಎನ್ನುವ ಅಸಮಾಧಾನ ಸ್ಥಳೀಯರಿಂದ ವ್ಯಕ್ತವಾಗಿದೆ. ಈ ಸರಕಾರಿ ಶಾಲೆ ಪರಿಸರದ ಅದೆಷ್ಟೋ ಮಕ್ಕಳಿಗೆ ವಿದ್ಯೆ ನೀಡಿದೆ. ಈ ಶಾಲೆಯ ಪರಿಸ್ಥಿತಿ ಕಳೆದ ಎಂಟು ವರ್ಷಗಳಿಂದ ಈಚೆಗೆ ಶೋಚನೀಯ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ಈ ಶಾಲೆಗೆ ಖಾಯಂ ಶಿಕ್ಷಕರನ್ನು ದೀರ್ಘಾವಧಿ ವರೆಗೂ ನೇಮಕ ಮಾಡದೆ ಇರುವುದು.

Advertisement

ಈ ಶಾಲೆಯಲ್ಲಿ ಇತ್ತೀಚಿನ ವರ್ಷದ ವರೆಗೂ ಉತ್ತಮ ಮಕ್ಕಳ ಹಾಜರಾತಿ ಇತ್ತು. ಕಳೆದ ವರ್ಷ 18 ಮಂದಿ ಮಕ್ಕಳಿದ್ದರು. ಇಬ್ಬರು ಮಕ್ಕಳು ಉತ್ತೀರ್ಣಗೊಂಡು ತೆರಳಿದ್ದಾರೆ. ಇನ್ನು ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ. ಕಳೆದ ವರ್ಷ ಇಬ್ಬರು ಅತಿಥಿ ಶಿಕ್ಷಕರಿದ್ದರು. ಈಗ ಓರ್ವ ಗೌರವ ಅತಿಥಿ ಶಿಕ್ಷಕಿಯಷ್ಟೆ ಕರ್ತವ್ಯದಲ್ಲಿದ್ದಾರೆ. ಖಾಯಂ ಶಿಕ್ಷಕರನ್ನು ಕೊಟ್ಟಿಲ್ಲ ಎಂದು 6 ಮಂದಿ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಬೇರೆಡೆ ಸೇರಿಸಿದ್ದಾರೆ. ಈಗ 8 ಮಕ್ಕಳು ಮಾತ್ರವೇ ಶಾಲೆಯಲ್ಲಿ ಉಳಿದುಕೊಂಡಿದ್ದಾರೆ.

ಶಾಲೆಯಲ್ಲಿ 1ನೇ ತರಗತಿಯಲ್ಲಿ ಶೂನ್ಯ, 2ನೇ ತರಗತಿಯಲ್ಲಿ 2 ಮಂದಿ, 3ನೇ ಮತ್ತು 4ನೇ ತರಗತಿಯಲ್ಲಿ ತಲಾ ಒಬ್ಬರು, 5ನೇ ತರಗತಿಯಲ್ಲಿ ಓರ್ವ, 6ನೇ ತರಗತಿಯಲ್ಲಿ 2 ಮಂದಿ, 7ನೇ ತರಗತಿಯಲ್ಲಿ ಓರ್ವ ವಿದ್ಯಾರ್ಥಿ ಇದ್ದು ಖಾಯಂ ಶಿಕ್ಷಕರನ್ನು ನೀಡದೆ ಇದ್ದಲ್ಲಿ ಮಕ್ಕಳ ಕೊರತೆಯಿಂದ ಮುಂದಿನ ವರ್ಷದಲ್ಲಿ ಶಾಲೆ ಮುಚ್ಚುವ ಭೀತಿ ಸ್ಥಳೀಯರನ್ನು ಕಾಡಿದೆ.

ಸರ್ವ ಸೌಕರ್ಯ ಇಲ್ಲಿದೆ
ದಟ್ಟ ಕಾಡಿನೊಳಗಿನ ಈ ಶಾಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ತರಗತಿ ನಡೆಸಲು ಸಾಧ್ಯವಾಗುವಷ್ಟು ಕೊಠಡಿಗಳಿವೆ. ಶಾಲಾ ಕಟ್ಟಡ, ನಲಿಕಲಿ, ಬಿಸಿಯೂಟ, ಆಟದ ಮೈದಾನ, ಸುಸಜ್ಜಿತ ಶಾಲಾ ಆವರಣ ಗೋಡೆ ಹೀಗೇ ಸರ್ವವಿಧದ ಸೌಕರ್ಯ ಶಾಲೆಯಲ್ಲಿದೆ. ಪರಿಸರದಲ್ಲಿ ಪರಿಶಿಷ್ಟ-ಜಾತಿ ಪಂಗಡದ ಮನೆಗಳು ಅಧಿಕವಿದೆ. ಉಳಿದಂತೆ ಇತರ ಸಮುದಾಯದವರಿದ್ದಾರೆ. ಇಲ್ಲಿನ ಶಾಲೆ ಭವಿಷ್ಯದ ದಿನಗಳಲ್ಲಿ ಮುಚ್ಚಿದರೆ ಪರಿಸರದ ಮಕ್ಕಳಿಗೆ ಶಾಲೆಗಳು ದೂರವಾಗಿ ತೊಂದರೆ ಯಾಗಲಿದೆ.

ದೂರದ ಊರಿನ ಮಕ್ಕಳಿಗೆ ಸಮಸ್ಯೆ
ಕಾಡಂಬಳ ಪರಿಸರದಲ್ಲಿ ವಾಹನ ಸಂಚಾರ ಕಮ್ಮಿ ಇರುವುದರಿಂದ ಇತರೆಡೆಯ ಶಾಲೆಗೆ ಇಲ್ಲಿಯ ಮಕ್ಕಳಿಗೆ ಹೋಗಿಬರಲು ತೊಂದರೆ ಎದುರಾಗಿದೆ. ಖಾಯಂ ಶಿಕ್ಷಕರನ್ನು ಇಲ್ಲಿ ನೀಡಿದಲ್ಲಿ ಸ್ಥಳೀಯ ಮಕ್ಕಳಿಗೆ ಕಾಲು ಬುಡದಲ್ಲೆ ಶಿಕ್ಷಣ ದೊರೆಯುತ್ತದೆ. ಈ ಶಾಲೆಯ ಉಳಿವು ಇಲ್ಲಿನವರಿಗೆ ಮುಖ್ಯವೆನಿಸಿದ್ದು ಶಿಕ್ಷಣ ಇಲಾಖೆ ಮೇಲೆ ಖಾಯಂ ಶಿಕ್ಷಕರಿಗಾಗಿ ಒತ್ತಡ ಹೇರುತ್ತಿದ್ದಾರೆ.

Advertisement

ಶಾಲೆಯ ಉಳಿವಿಗೆ ಹರಸಾಹಸ
ಖಾಯಂ ಶಿಕ್ಷಕರನ್ನು ಕಳೆದ ಎಂಟು ವರ್ಷಗಳಿಂದಲೂ ಶಾಲೆಗೆ ನೀಡಿಲ್ಲ ಎಂದು ಬೇಸತ್ತ ಹೆತ್ತವರು ಇಲ್ಲಿ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಅನ್ಯ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇನ್ನು ಇದ್ದ ಮಕ್ಕಳನ್ನು ಶಾಲೆಯಲ್ಲೆ ಉಳಿಸಿಕೊಳ್ಳಲು ಪಣತೊಟ್ಟ ಊರಿನವರು ಶಾಲೆಗೆ ಶಿಕ್ಷಕರನ್ನು ಕೊಡಿ ಎಂದು ಮೊರೆಯಿಟ್ಟಿದ್ದಾರೆ. ಪೋಷಕರು ಶಾಲೆಯ ಸಮಸ್ಯೆಯನ್ನು ಶಿಕ್ಷಣ ಇಲಾಖೆ ಅಧಿಕಾರಿ ಗಮನಕ್ಕೆ ತರುವ ಪ್ರಯತ್ನ ನಡೆಸಿದ್ದು, ಶಾಲೆಯ ಉಳಿವಿಗೆ ಹರಸಾಹಸಪಡುತ್ತಿದ್ದಾರೆ.

ವಾರದೊಳಗೆ
ನೇಮಕಕ್ಕೆ ಕ್ರಮ
ಶಾಲೆಗಳ ದಾಖಲಾತಿ, ಮಕ್ಕಳ ಸಂಖ್ಯೆ, ಶಿಕ್ಷಕರ ಲಭ್ಯತೆ ಆಧಾರಿಸಿ ಹೊಂದಾಣಿಕೆ ಮಾಡಿ ಶಿಕ್ಷಕರನ್ನು ಹಂಚಿಕೆ ಮಾಡುತ್ತಿ ದ್ದೇವೆ. ಅಲ್ಲಿ ಈಗ ಅತಿಥಿ ಶಿಕ್ಷಕ ರೊಬ್ಬರಿದ್ದಾರೆ. ಮುಂದಿನ ಒಂದೆರಡು ದಿನದಲ್ಲಿ ಅಲ್ಲಿಗೆ ಡೆಪ್ಯುಟೇಶನ್‌ ಶಿಕ್ಷಕರನ್ನು ನಿಯೋಜಿಸಲಾಗುವುದು.
-ಚಂದ್ರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ

ಶಿಕ್ಷಕರ ನೇಮಕಾತಿಯ ಭರವಸೆಯಲ್ಲಿ ಇದ್ದೇವೆ
ಖಾಯಂ ಶಿಕ್ಷಕರನ್ನು ನೀಡುವಂತೆ ಇಲಾಖೆಗೆ ಒತ್ತಾಯಿಸುತ್ತಲೇ ಬಂದಿ ದ್ದೇವೆ. ಇದುವರೆಗೂ ಪ್ರಯೋಜನ ಆಗಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ. ಶಿಕ್ಷಕರ ನೇಮಕಾತಿ ಕುರಿತು ಭರವಸೆಯಲ್ಲಿ ಇದ್ದೇವೆ. ಈಡೇರದಿದ್ದಲ್ಲಿ ಮುಂದೆ ನಾವು ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಇಳಿಯುತ್ತೇವೆ.
-ಅಣ್ಣು , ಎಸ್‌ಡಿಎಂಸಿ ಅಧ್ಯಕ್ಷರು.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next