ಪುಣೆ: ಕನ್ನಡ ಸಂಘ ಪುಣೆ -ಕಾವೇರಿ ವಿದ್ಯಾ ಸಮೂಹದಲ್ಲಿ ದಿ| ಡಾ ಶಾಮರಾವ್ ಕಲ್ಮಾಡಿ ಸ್ಮರಣಾರ್ಥವಾಗಿ ರಾಜ್ಯಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಈ ವರ್ಷ ನಲ್ವತ್ತಕ್ಕೂ ಮಿಕ್ಕಿ ಸ್ಪರ್ಧಿಗಳು ಮಹಾರಾಷ್ಟ್ರದ ವಿವಿಧ ವಿದ್ಯಾ ಸಂಸ್ಥೆಗಳಿಂದ ಆಗಮಿಸಿ ಉತ್ಸಾಹದಿಂದ ಪಾಲ್ಗೊಂಡರು.
ದಿ| ಡಾ| ಶಾಮರಾವ್ ಕಲ್ಮಾಡಿಯವರ ಜನ್ಮಶತಾಬ್ದಿ ವರ್ಷದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪ್ಲಾಸ್ಟಿಕ್ ಮತ್ತು ಪರ್ಯಾವರಣ, ಜೆಆರ್‌ಡಿ ಟಾಟಾ, ಭಾರತದ ಔದ್ಯೋಗಿಕ ಕ್ರಾಂತಿಕಾರ, ಬದಲಾಗುತ್ತಿರುವ ಭಾರತೀಯ ವಿದ್ಯಾ ಕ್ಷೇತ್ರ ಮತ್ತು ಯುವ ಪೀಳಿಗೆ, ಭಾರತೀಯ ಆಧ್ಯಾತ್ಮ ಹಾಗೂ ಕ್ರೀಡೆ, ಕ್ರೀಡಾಪಟು ಮತ್ತು ಕ್ರೀಡಾ ಮನೋಭಾವ ಮುಂತಾದ ಜ್ವಲಂತ ವಿಷಯಗಳನ್ನು ಆರಿಸಲಾಗಿತ್ತು.
ಸ್ಪರ್ಧೆಯನ್ನು ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾ ಕ್ಷೇತ್ರದಲ್ಲಿ ವಿದ್ಯೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಭಾಷಣ, ಸಾಮಾಜಿಕ ಕಾಳಜಿ ಮತ್ತು ಆರೋಗ್ಯದ ಬಗ್ಗೆ ವಿಶೇಷ ಆಸಕ್ತಿಯ ಆವಶ್ಯಕತೆ ಮುಖ್ಯವಾಗಿದೆ. ಈ ಎÇÉಾ ವಿಷಯಗಳ ಬಗ್ಗೆ ಸಂಸ್ಥೆ ಕಾಳಜಿ ವಹಿಸುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಬಹುಮಾನ ಗಳಿಸುವುದು ಮುಖ್ಯವಲ್ಲ. ಶ್ರದ್ಧೆ, ಪರಿಶ್ರಮದಿಂದ ಸ್ಪರ್ಧೆಗಳನ್ನು ಎದುರಿಸಲು ಸಾಧ್ಯವಿದೆ. ಮಕ್ಕಳು ಸ್ಪರ್ಧಾತ್ಮಕ ಗುಣಗಳನ್ನು ಎಳವೆಯಿಂದಲೇ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿದೆ ಎಂದು ತಮ್ಮ ಮನೋಗತವನ್ನು ವ್ಯಕ್ತಪಡಿಸಿ ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಕಾವೇರಿ ಕಾಲೇಜಿನ ಪ್ರಾಧ್ಯಾಪಕ ಡಾ| ಅಶೋಕ್ ಅಗರವಾಲ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿವಿಧ ವಿದ್ಯಾ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಬರುತ್ತಿರುವ ಬೇರೆ ಬೇರೆ ವಿದ್ಯಾಲಯಗಳ ಸ್ಪರ್ಧಿಗಳಿಗೆ ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ವ್ಯವಸ್ಥೆಯನ್ನು ಮಾಡಲಾಗುವುದೆಂದು ತಿಳಿಸಿದರು. ಸ್ಪರ್ಧೆಯಲ್ಲಿ ಪುಣೆ ಇಂಜಿನಿಯರಿಂಗ್ ಕಾಲೇಜಿನ ಹೃಷಿಕೇಶ್ ದೇಶಪಾಂಡೆ ಅವರು ಪ್ರಥಮ ಸ್ಥಾನ ಗಳಿಸಿದರು.
ಪರ್ಗುಸನ್ ಕಾಲೇಜಿನ ಕು| ಅಬೋಲಿ ಧವಡೆ ದ್ವಿತೀಯ ಸ್ಥಾನಿಯಾದರು. ಅಬಾಸಹೇಬ್ ಗರ್ವಾರೆ ಕಾಲೇಜಿನ ಕೃಷ್ಣ ತಾವಲೆ ತೃತೀಯ ಸ್ಥಾನ ಪಡೆದರು. ಸ್ವತಂತ್ರ ವಿಷಯಗಳ ಆಯ್ಕೆ ವಿಭಾಗದಲ್ಲಿ ಕೃಷ್ಣ ತಾವಲೆ ಪ್ರಥಮ ಯಶವಂತ ಖಾಡೆ ದ್ವಿತೀಯ ಹಾಗೂ ಇಮದ್ ಉಲ್ ಹಸನ್ ಅವರು ತೃತೀಯ ಸ್ಥಾನ ಗಳಿಸಿದರು. ಡಾ| ಸುಪ್ರಿಯಾ ಸಹಸ್ರಬುದ್ಧೆ, ಡಾ| ಬಾಲಚಂದ್ರ ಕಪೆìಕರ್, ಪ್ರೊ| ವೈಶಾಲಿ ದೇವಧರ್ ಪರೀಕ್ಷಕರಾಗಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲಿಯಾನ್, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ವಿಶ್ವಸ್ಥೆ ರಾಧಿಕಾ ಶರ್ಮ, ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ ಮತ್ತು ಕಾವೇರಿ ವಿದ್ಯಾಲಯದ ಡಾ| ಮುಕ್ತ ಕರ್ಮಾಕರ್, ಶ್ವೇತಾ ಬಾಪಟ…, ಡಾ| ರಾಜೇಂದ್ರ ಕುಂಭಾರ್ ಉಪಸ್ಥಿತರಿದ್ದರು. ಪ್ರೊ| ಭಕ್ತಿ ದಾಂಡೇಕರ್ ಕಾರ್ಯ ಕ್ರಮ ನಿರೂಪಿಸಿದರು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿದರು.
ವರದಿ : ಕಿರಣ್ ಬಿ. ರೈ ಕರ್ನೂರು