ಪುಣೆ: ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಪುಣೆ ಹಾಗೂ ಕನ್ನಡ ಸಂಘ ಪುಣೆ ಜಂಟಿ ಆಶ್ರಯದಲ್ಲಿ ಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕಿ ರುಚಿರಾ ಕೇದಾರ್ ಇವರಿಂದ ಮೇ 31 ರಂದು ಸಂಜೆ ಡಾ| ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಭವನದಲ್ಲಿ ಸಂಗೀತ ಕಾರ್ಯಕ್ರಮ ನೆರವೇರಿತು.
ಭಾರತದ ಜನಪ್ರಿಯ ಸಂಗೀತ ವಿದುಷಿ ಪುಣೆ ಮೂಲದ ಗ್ವಾಲಿಯರ್-ಜೈಪುರ್ ಘರಾಣದ ರುಚಿರಾ ಕೇದಾರ್ ಅವರ ಸುಶ್ರಾವ್ಯ ಸಂಗೀತ ಪುಣೆಯ ಸಂಗೀತ ಪ್ರಿಯರಿಗೊಂದು ಸಂಗೀತದ ರಸದೌತಣವನ್ನಿತ್ತು ತೃಪ್ತಿ ಪಡಿಸಿತು. ಸಮಯೋಚಿತವಾದ ವರ್ಷಾಗಮನವನ್ನು ಸ್ವಾಗತಿಸುವ ರಾಗ ಮಲ್ಹಾರ್ ಹಾಗೂ ಇತರ ಜನಪ್ರಿಯ ರಾಗಗಳ ಮೂಲಕ ಶ್ರೋತೃಗಳ ಮೆಚ್ಚುಗೆ ಪಡೆದರು.
ನಿರಂತರ ಎರಡು ಗಂಟೆಗಳ ಕಾಲ ಕಿಕ್ಕಿರಿದು ತುಂಬಿದ ರಸಿಕ ಸಂಗೀತ ಪ್ರಿಯರಿಗೊಂದು ಅವಿಸ್ಮರಣೀಯ ಸಂಗೀತ ಸಂಜೆಯಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ, ಉಪಾಧ್ಯಕ್ಷೆ ಇಂದಿರಾ ಸಾಲಿಯಾನ್, ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ ಮತ್ತು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಪುಣೆ ಉಪ ನಿರ್ದೇಶಕ ಸುದರ್ಶನ್ ಶೆಟ್ಟಿ, ರುಚಿರಾ ಕೇದಾರ್ ಮತ್ತು ಅವರ ಸಹ ವಾದಕರನ್ನು ಪುಷ್ಪಗುತ್ಛ ವನ್ನಿತ್ತು ಸತ್ಕರಿಸಿದರು.
ಕನ್ನಡ ಸಂಘ ಪುಣೆ ಮತ್ತು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಪುಣೆ ಜಂಟಿಯಾಗಿ ಹಲವಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದು ಪ್ರೇಕ್ಷಕರಿಗೆ ಮನೋರಂಜನೆಯನ್ನು ನೀಡುತ್ತಿದೆ.
ಚಿತ್ರ-ವರದಿ : ಕಿರಣ್ ಬಿ ರೈ ಕರ್ನೂರು.