Advertisement

ಜನವರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಡಿಸಿಎಂ ಕಾರಜೋಳ

09:51 AM Oct 18, 2019 | keerthan |

ಕಲಬುರಗಿ: ಕಲಬುರಗಿಯಲ್ಲಿ ನಡೆಯಬೇಕಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿಯಲ್ಲಿ ಆಯೋಜಿಸುವ ಬಗ್ಗೆ ಚಿಂತನೆ ಇದೆ  ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್‌ನಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ‌ಇದೆ. ಚುನಾವಣೆಗಳು ಬಂದರೆ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಹೀಗಾಗಿ ಸಮ್ಮೇಳನ ವ್ಯವಸ್ಥಿತವಾಗಿ ನಡೆಸಲು ಅಡ್ಡಿಯಾಗುವ ಸಾಧ್ಯತೆ ಇದೆ.‌ ಜನವರಿಯಲ್ಲಿ ಅದ್ದೂರಿಯಾಗಿ ನಡೆಸಬಹುದು ಎಂದರು.

ಸಮ್ಮೇಳನದ ಕುರಿತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಅವರು ನನ್ನನ್ನು ಭೇಟಿ ಮಾಡಿದ್ದಾರೆ. ಅವರಿಗೂ ವಿಷಯ ತಿಳಿಸಿದ್ದೇನೆ ಎಂದು ಸಚಿವರು ಹೇಳಿದರು.

ಉಸ್ತುವಾರಿ ಸಚಿವರಾಗಿ ತಿಂಗಳ ಬಳಿಕ ಜಿಲ್ಲೆ ಬಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ರಚನೆಯಾದ ತಕ್ಷಣ ರಾಜ್ಯದಲ್ಲಿ ಶತಮಾನದ ಕಂಡು ಅರಿಯದ ಪ್ರವಾಹ ಬಂತು.‌ ನಂತರ ಅಧಿವೇಶನ ಆರಂಭವಾಯಿತು‌. ಆದ್ದರಿಂದ ಕಲಬುರಗಿಗೆ ಭೇಟಿ ನೀಡುವುದು  ತಡವಾಗಿದೆ. ಆದರೆ, ಯಾವುದೇ ಸಭೆಯನ್ನು ಕಾಟಾಚಾರಕ್ಕೆ ಮಾಡಲ್ಲ ಎಂದು ಸಮಜಾಯಿಷಿ ಕೊಟ್ಟರು.

ಕೇಂದ್ರದಿಂದ 1,200 ಕೋಟಿ‌‌ ರೂ. ನೆರೆಗಾಗಿ ಮಧ್ಯಂತರ ಪರಿಹಾರ ನೀಡಲಾಗಿದೆ. ಕರ್ನಾಟಕ ಮತ್ತು ಬಿಹಾರಕ್ಕೆ ಮಾತ್ರ ಮಧ್ಯಂತರ ಪರಿಹಾರ ಬಿಡುಗಡೆಯಾಗಿದೆ. ಸಿಎಂ ನೇತೃತ್ವದಲ್ಲಿ ಪ್ರಧಾನಿಗಳನ್ನು ಭೇಟಿಯಾಗಿ ಹೆಚ್ಚಿನ ಹಣ ಬಿಡುಗಡೆಗೆ ಮನವಿ ಮಾಡಲಾಗಿದೆ. ಹೆಚ್ಚಿನ ಅನುದಾನ ಕೇಂದ್ರದಿಂದ ಬರುತ್ತದೆ ಎಂದರು.

Advertisement

ಮಹಾರಾಷ್ಟ್ರ ಚುನಾವಣೆಗೆ ಕೊಟ್ಟಷ್ಟು ಮಹತ್ವ ಬಿಜೆಪಿ ನೆರೆ ವಿಚಾರದಲ್ಲಿ ನೀಡಿಲ್ಲ ಅನ್ನೋ ಸಿದ್ದರಾಮಯ್ಯ ಪ್ರವಾಹದಲ್ಲೂ ರಾಜಕಾರಣ ಮಾಡುತ್ತಾರೆ. ಅವರನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಲ್ಲ ಆಶಾವಾದಿಗಳಾಗಿರಬೇಕು ಹೊರೆತು ನಿರಾಶವಾದಿಗಳಾಗಿರಬಾರದು ಎಂದು ತಿರುಗೇಟು ನೀಡಿದರು.

ರಾಜ್ಯದ ನೀರಾವರಿ ಸಮಸ್ಯೆಗಳನ್ನ ಶೀಘ್ರವೇ ಇತ್ಯರ್ಥಕ್ಕೆ ಕೂಡ ಕೇಂದ್ರದ ಬೇಡಿಕೆ ಇಡಲಾಗಿದೆ‌. ಮಹದಾಯಿ ಮತ್ತು ಕೃಷ್ಣ ವಿಚಾರವಾಗಿ ಸಹ ಸಿಎಂ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯ ಆದಷ್ಟು ಬೇಗ ಇತ್ಯರ್ಥ ಪಡಿಸುತ್ತದೆ ಎಂಬ ನಂಬಿಕೆ ಇದೆ ಎಂದರು.

ಮೊದಲು ತಮ್ಮಲ್ಲಿರುವ ನಾಯಕರು ಮತ್ತು ಕಾರ್ಯಕರ್ತರನ್ನು ವಿಪಕ್ಷದ ನಾಯಕ ಸಿದ್ದರಾಮಯ್ಯ ಉಳಿಸಿಕೊಳ್ಳುವ ಕೆಲಸ ಮಾಡಲಿ. ಆಮೇಲೆ ಬಿಜೆಪಿ ಸರ್ಕಾರ ಬಿದ್ದುಹೋಗುವ ಬಗ್ಗೆ ಮಾತಾಡಲಿ. ಸಿದ್ದರಾಮಯ್ಯಗೆ ಯಾವ ಸಮಯದಲ್ಲಿ ಏನು ಮಾತನಾಡಬೇಕು ಅನ್ನೋದು ತಿಳಿಯುವುದಿಲ್ಲ ಎಂದು ಕಾರಜೋಳ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next