Advertisement

ಹಾಳೆಯ ಮೇಲಷ್ಟೇ ಸಮ್ಮೇಳನದ ನಿರ್ಣಯಗಳು ಉಳಿಯದಿರಲಿ

11:50 PM Jan 08, 2023 | Team Udayavani |

ಏಲಕ್ಕಿ ನಾಡು ಹಾವೇರಿಯಲ್ಲಿ ಮೂರು ದಿನಗಳ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿದೆ. ಯಾವುದೇ ಗೊಂದಲಗಳು ಇಲ್ಲದೆ, ಅವ್ಯವಸ್ಥೆಗೆ ಆಸ್ಪದವಿಲ್ಲದೆ ಸಮ್ಮೇಳನ ನಡೆದಿದ್ದು ಉತ್ತಮ ಬೆಳವಣಿಗೆ. ಕೊರೊನಾದಿಂದಾಗಿ ಎರಡು ವರ್ಷಗಳ ಬಳಿಕ ಸಮ್ಮೇಳನ ನಡೆದಿದ್ದರಿಂದ ಭಾರೀ ಜನಸ್ತೋಮವೇ ಹರಿದು ಬಂದು, ಕನ್ನಡದ ಸಾಹಿತಿಗಳನ್ನು ಕಣ್ತುಂಬಿಕೊಂಡರು.

Advertisement

ಕನ್ನಡ, ಕನ್ನಡಿಗನ ವಿಚಾರದಲ್ಲಿಯೇ ಈ ಮೂರೂ ದಿನಗಳು ಚರ್ಚೆ ನಡೆದಿದ್ದು, ಪ್ರಸ್ತುತದಲ್ಲಿ ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಗೋಷ್ಠಿಗಳು ಬೆಳಕು ಚೆಲ್ಲಿವೆ. ಅದರಲ್ಲೂ ಎರಡನೇ ದಿನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಜತೆಗಿನ ಸಂವಾದದಲ್ಲಿ ಕೆಲವೊಂದು ಉತ್ತಮ ಅನಿಸಿಕೆಗಳೂ ವ್ಯಕ್ತವಾದವು. ಹಾಗೆಯೇ ಸರ್ವಾಧ್ಯಕ್ಷರಾದ ಡಾ| ದೊಡ್ಡರಂಗೇಗೌಡರೇ, ಈಗ ಕನ್ನಡದ ಉಳಿವಿಗೆ ಗೋಕಾಕ್‌ ಚಳವಳಿಗಿಂತಲೂ ಕ್ರಾಂತಿಕಾರಕ ಚಳವಳಿಯ ಅಗತ್ಯವಿದೆ ಎಂದು ಹೇಳಿದ್ದು ತುಸು ಗಂಭೀರವಾದ ವಿಚಾರ. ಈ ಮೂಲಕ ಅವರು, ಕನ್ನಡ ಅಸ್ಮಿತೆಯ ರಕ್ಷಣೆಯ ಕುರಿತಂತೆ ಮನದೊಳಗಿನ ಸಂಕಟ, ತಳಮಳವನ್ನು ಹೊರಹಾಕಿದರು. ಹಾಗೆಯೇ ವ್ಯವಸ್ಥೆಯೊಳಗಿನ ಹುಳುಕನ್ನು ಹೊರಹಾಕಿ, ಶಾಸನಸಭೆಯೊಳಗೆ ಬಳಸುತ್ತಿರುವ ಭಾಷೆಯ ಬಗ್ಗೆಯೂ ಸಿಟ್ಟು ತೋರ್ಪಡಿಸಿದರು. ವ್ಯವಸ್ಥೆಯ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದನ್ನು ಅಬುìದ ರೋಗವೆಂದು ಕರೆದ ಅವರು, ಇದರಿಂದ ವ್ಯಕ್ತಿತ್ವದ ವಿಕಸನವೇ ಪತನವಾಗುತ್ತಿದೆ ಎಂಬ ಬೇಸರವನ್ನೂ ತೋರಿದರು.

ಪ್ರತೀ ಬಾರಿಯ ಸಮ್ಮೇಳನದಂತೆ ಈ ಬಾರಿಯೂ ಕಡೆಯ ದಿನ ಆರು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ಮಸೂದೆಯನ್ನು ಈ ಕೂಡಲೇ ಅಧ್ಯಾದೇಶ ಮೂಲಕ ಜಾರಿಗೆ ತಂದು, ಶಿಕ್ಷಣ, ನ್ಯಾಯಾಂಗ, ಆಡಳಿತದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು, ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿನ ಮಾರ್ಗದರ್ಶನದಂತೆ ವಿಳಂಬವಿಲ್ಲದೆ ಕ್ರಮ ತೆಗೆದುಕೊಳ್ಳಬೇಕು, ಕನ್ನಡ ಚಳವಳಿಗಾರರ ಮೇಲಿರುವ ಮೊಕದ್ದಮೆಗಳನ್ನು ವಾಪಸ್‌ ಪಡೆಯುವುದು, ಹಿಂದಿ ಅಥವಾ ಇನ್ನಾವುದೇ ಭಾಷೆಯನ್ನು ಕನ್ನಡದ ಮೇಲೆ ಹೇರಲು ಬಿಡಬಾರದು, ವಿಶ್ವಕನ್ನಡ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಹಾಗೂ 86ನೇ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಸ್ಥಳೀಯ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಪ್ರತೀ ಬಾರಿಯ ಸಮ್ಮೇಳನದಲ್ಲಿಯೂ ಕನ್ನಡಕ್ಕಾಗಿ ಇಂಥ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಜಾರಿಯಾಗುತ್ತಿರುವ ಉದಾಹರಣೆಗಳು ತೀರಾ ಕಡಿಮೆ ಇವೆ. ಹೀಗಾಗಿ ಈ ಬಾರಿಯ ಸಮ್ಮೇಳನದಲ್ಲಿ

ತೆಗೆದುಕೊಂಡಿರುವ ನಿರ್ಣಯಗಳನ್ನು ಜಾರಿ ಮಾಡುವ ಸಲುವಾಗಿ ಕಾಲಮಿತಿ ನಿಗದಿ ಪಡಿಸಬೇಕು ಮತ್ತು ಜಾರಿಗಾಗಿಯೇ ಒಂದು ಸಮಿತಿಯನ್ನು ನೇಮಕ ಮಾಡಿ ಮೇಲುಸ್ತುವಾರಿ ಮಾಡುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ. ಏಕೆಂದರೆ ಕನ್ನಡ ಸಾಹಿತ್ಯ ಸಮ್ಮೇಳನದಂಥ ಬೃಹತ್‌ ಕಾರ್ಯಕ್ರಮಗಳ ನಿರ್ಣಯಗಳು ಜಾರಿಯಾಗಲಿಲ್ಲ ಎಂಬ ಅವಮಾನ ಸರಕಾರಕ್ಕಾಗಲಿ ಅಥವಾ ನಿರ್ಣಯ ತೆಗೆದುಕೊಂಡವರಿಗಾಗಲಿ ಆಗಬಾರದು. ಈ ನಿಟ್ಟಿನಲ್ಲಿ ಸರಕಾರ ಯೋಚಿಸಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next