Advertisement
ಪ್ರತೀ ವರ್ಷ ಸಮ್ಮೇಳನದ ಬಗೆಗೆ ಅಪಸ್ವರ, ಟೀಕೆ-ಟಿಪ್ಪಣಿ ಇದ್ದದ್ದೇ. ವರ್ಷಾವಧಿ ಜಾತ್ರೆಯ ಮಾದರಿಯಲ್ಲಿ ನಡೆಯುವ ಈ ಸಮ್ಮೇಳನದ ಅಗತ್ಯವಾದರೂ ಏನು? ಕನ್ನಡದ ಹೆಸರಿನಲ್ಲಿ ನಡೆಯುವ ದುಂದುವೆಚ್ಚವಲ್ಲವೇ? ಇತ್ಯಾದಿ ಪ್ರಶ್ನೆಗಳು ಪುನರುಕ್ತಿಯಾಗುತ್ತಲೇ ಇರುತ್ತವೆ. ಇವೆಲ್ಲವುಗಳ ಮಧ್ಯೆಯೂ ಸಾಹಿತ್ಯ ಸಮ್ಮೇಳನ ಎಂದಾಕ್ಷಣ ಮನಸ್ಸು ಪುಳಕಗೊಳ್ಳದೇ ಇರದು. ಅದಕ್ಕೆ ನಾಡು, ನುಡಿಯ ಮೇಲಿನ ಪ್ರೇಮ, ಅಸ್ಮಿತೆಯ ಪ್ರಶ್ನೆ ಏನಾದರೂ ಅನ್ನಿ. ಸಾಹಿತ್ಯ ಸಮ್ಮೇಳನದಂಥ ಪರಿಕಲ್ಪನೆ ಮೂಡಿದ್ದು ಜಾಗೃತಿಗಷ್ಟೇ ಅಲ್ಲ, ಸಂಭ್ರಮಕ್ಕೂ ಸಹ. ಕನ್ನಡ ಕಸ್ತೂರಿಯ ಕಂಪನ್ನು ಪಸರಿಸುತ್ತಾ, ಪಸರಿಸದ ಜಾಗಕ್ಕೂ ತಲುಪಿಸಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಾ, ಕನ್ನಡ-ಕರ್ನಾಟಕ-ಕನ್ನಡಿ ಗರ ಬದುಕು, ಬವಣೆಗೂ ಧ್ವನಿಯಾಗಬೇಕು. ಆಗ ಸಮ್ಮೇಳನ ನಾಡು-ನುಡಿಯ ಹಬ್ಬವಾಗುತ್ತದೆಂಬುದು ಮೂಲ ಉದ್ದೇಶ. ಅದಕ್ಕಾಗಿ ಆಯೋಜಕರು ಟೀಕೆ ಬಂದಾಗಲೆಲ್ಲ ಮೂಗು ಮುರಿದು ಉಪೇಕ್ಷಿಸದೇ ಮೂಲ ಉದ್ದೇಶದತ್ತ ಸಾಗಲು ಸಹೃದಯರು ತೋರಿದ ದಿಕ್ಸೂಚಿ ಎಂದು ಅನುಸರಿಸಬೇಕು.
ಸಮ್ಮೇಳನದಲ್ಲಿ ಮೊದಲನೆಯದು ಗೋಷ್ಠಿಗಳು. ಎರಡನೆಯದು ಬಹಿರಂಗ ಅಧಿವೇಶನದ ನಿರ್ಣಯಗಳು. ಈ ಬಾರಿಯ ಗೋಷ್ಠಿಗಳಲ್ಲಿ ನಾಡು, ನುಡಿ ಎದುರಿಸುತ್ತಿರುವ ಸವಾಲುಗಳು, ಪ್ರಚಲಿತ ವಿದ್ಯಮಾನಗಳು, ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮೆಲ್ಲರ ಪಾತ್ರ, ಜನಪ್ರತಿನಿಧಿಗಳು ಮತ್ತು ಸರಕಾರದ ಜವಾಬ್ದಾರಿಗಳು, ಕನ್ನಡ ಪರಿಚಾರಕರ ಹೊಣೆಗಾರಿಕೆ ಎಂಬಿತ್ಯಾದಿ ಸಂಗತಿಗಳ ಬಗ್ಗೆ ಬೆಳಕು ಬೀರೀತು ಎಂಬುದು ಎಲ್ಲರ ನಿರೀಕ್ಷೆ. ಅದರೊಂದಿಗೆ ಬಹಿರಂಗ ಅಧಿವೇಶನದಲ್ಲಿ ಕನ್ನಡ ನೆಲ, ಜಲದ ರಕ್ಷಣೆ ಕನ್ನಡಿಗರೆಲ್ಲರ ಹೊಣೆ ಎಂಬ ದೃಢ ಸಂಕಲ್ಪವನ್ನು ಕೈಗೊಳ್ಳಲೇಬೇಕಿದೆ. ನಮ್ಮ ನೆಲ, ಜಲದ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸುವ ಎಲ್ಲರಿಗೂ ಸಮರ್ಥ ಸಂದೇಶ ಸಾರಲು ಇದು ಸಮರ್ಥ ವೇದಿಕೆ. ಹಾಗೆಯೇ ಅಂಥವರಿಗೆ ದಿಟ್ಟ ಉತ್ತರ ನೀಡಬೇಕೆಂದು ಸರಕಾರವನ್ನು ಆಗ್ರಹಿಸುವುದಕ್ಕೂ ಇದು ಸೂಕ್ತ ಸಂದರ್ಭ. ಬೆಳಗಾವಿ ಗಡಿ ವಿವಾದದ ಜತೆಯಲ್ಲಿ ಕಾಸರಗೋಡು ಮತ್ತು ಅಲ್ಲಿನ ಕನ್ನಡಿಗರ ಹಿತವನ್ನು ಕಾಯಲು ಗಮನಹರಿಸಬೇಕಿದೆ. ಕನ್ನಡ ಶಾಲೆಗಳ ಬಗ್ಗೆ ಕೊಡಬೇಕಾದ ಗಮನ, ಗಡಿ ಅಭಿವೃದ್ಧಿ ಪ್ರಾಧಿಕಾರದಂಥ ವ್ಯವಸ್ಥೆಯ ಸುಧಾರಣೆ, ನಾಡು-ನುಡಿಯ ಉಳಿವು-ಬೆಳವಣಿಗೆಗೆ ಇರುವ ಪ್ರಾಧಿಕಾರ, ಅಕಾಡೆಮಿಗಳ ಆರೋಗ್ಯ ಕಾಪಾಡುವುದು, ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣದ ಅಗತ್ಯ, ರಾಜ್ಯದಲ್ಲಿ ಸ್ಥಾಪನೆಯಾಗುವ ಸರಕಾರಿ ಅಥವಾ ಖಾಸಗಿ ಸಂಸ್ಥೆ/ಕಂಪೆನಿಗಳಲ್ಲಿ ಕನ್ನಡಿಗರಿಗೆ ಆದ್ಯತೆಯ ಮೇಲೆ ಉದ್ಯೋಗ ಮತ್ತಿತರ ವಿಷಯಗಳ ಕುರಿತೂ ಹಕ್ಕೊತ್ತಾಯ ಮಂಡಿಸಬೇಕು.
Related Articles
Advertisement