Advertisement

ಕಸಾಪ ಬೈಲಾಗೆ ತಿದ್ದುಪಡಿ ವಿರುದ್ಧ “ಪತ್ರಚಳುವಳಿ’

06:00 AM Jul 16, 2018 | |

ಬೆಂಗಳೂರು: ಕನ್ನಡ ಸಾಹಿತ್ಯಪರಿಷತ್ತಿನ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿಯನ್ನು 3ರಿಂದ 5 ವರ್ಷಕ್ಕೆ ವಿಸ್ತರಣೆ ಮಾಡುವ ಸಂಬಂಧ ಕೇಂದ್ರ ಕಸಾಪ ಬೈಲಾಗೆ ತಿದ್ದುಪಡಿ ತಂದಿರುವ ಹಾಲಿ ಅಧ್ಯಕ್ಷರ ನಡೆಗೆ ಸಾಹಿತ್ಯ ವಲಯದಿಂದ ವಿರೋಧ ವ್ಯಕ್ತವಾಗಿದೆ.

Advertisement

ಅಲ್ಲದೆ, ಇದರ ವಿರುದ್ಧ “ಪತ್ರ ಚಳವಳಿ’ ನಡೆಸಲು ಭಾನುವಾರ ಉದಯಭಾನು ಕಲಾ ಸಂಘದಲ್ಲಿ ಹಿರಿಯ ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ “ದುಂಡು ಮೇಜಿನ’ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಮಹಿಳಾ ಮೀಸಲಾತಿ ಹೆಸರಿನಲ್ಲಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವಕು ಸಾಹಿತ್ಯವಲಯದಲ್ಲಿ ಪರಸ್ಪರ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ನಾವು ಯಾರ ವಿರೋಧಿಗಳೂ ಅಲ್ಲ. ಆದರೆ, ಆರ್ಥಿಕ ದಾಹಿಗಳೇ ಕಸಾಪದಲ್ಲೀಗ ತುಂಬಿ ಹೋಗಿದ್ದು, ಯಾವುದೇ ಕಾರಣಕ್ಕೂ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ವಿಸ್ತರಣೆ ಆಗಲು ಬಿಡುವುದಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ರೂಪಿಸುವ ಕುರಿತೂ ಚಿಂತನೆ ನಡೆಯಿತು.

ಬದಲಾವಣೆ ವಿರೋಧಿ ಅಲ್ಲ:
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್‌ ಮಾತನಾಡಿ, ನಾನು ಬದಲಾವಣೆಯ ವಿರೋಧಿಯಲ್ಲ. ಆದರೆ, ಬದಲಾವಣೆ ತರುವ ಉದ್ದೇಶ ಸಾರ್ವಜನಿಕವಾಗಿ ಚರ್ಚೆಗೆ ಒಳಪಡಬೇಕು. ಸರಿ-ತಪ್ಪುಗಳ ಬಗ್ಗೆ ವಿಚಾರ ವಿನಿಮಯ ನಡೆಯಬೇಕು. ಹೀಗೆ ನಡೆದು ಬೈಲಾಗೆ ತಿದ್ದುಪಡಿ ಮಾಡಿದ್ದರೆ ಸಂತೋಷವಾಗುತ್ತಿತ್ತು. ಆದರೆ, ಸಾರ್ವಜನಿಕವಾಗಿ ಚರ್ಚೆಯಾಗದೆ ಕಸಾಪ ಬೈಲಾಗೆ ತಿದ್ದುಪಡಿ ತಂದಿರುವ ಕ್ರಮ ಸರಿಯಲ್ಲ. ಪ್ರಮಾಣಿಕತೆಯಿಂದ ಕನ್ನಡ ಕಟ್ಟುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿ ಎಂದು ಆಶಿಸಿದರು.

ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಮಾತನಾಡಿ, ಈ ಹಿಂದೆ ಅಧಿಕಾರ ನಡೆಸಿದ ಹಿರಿಯರು ತಮಗೆ ನೀಡಿದ ಅಧಿಕಾರದ ಅವಧಿಯಲ್ಲೇ ನಾಡು ಮೆಚ್ಚುವಂತಹ ಕೆಲಸವನ್ನು ಮಾಡಿ ಸಾಹಿತ್ಯ ಲೋಕದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಆದರೆ, ಈಗಿನ ಅಧ್ಯಕ್ಷರಿಗೆ ಅಧಿಕಾರದ ಹುಚ್ಚು ಹಿಡಿದಿದೆ. ಇದು, ನಾಚಿಕೆಗೇಡಿನ ಸಂಗತಿ. ಕನ್ನಡ ಸಾಂಸ್ಕೃತಿ ಲೋಕಕ್ಕೆ ಕಳಂಕ ತರುವಂತಹ ಕೆಲಸ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

Advertisement

ಪರಿಷತ್ತು ಮುಳುಗಿ ಹೋಗಲಿದೆ
ಹಿರಿಯ ಸಾಹಿತಿ ಡಾ.ವಿಜಯಾ ಸುಬ್ಬರಾಜ್‌ ಮಾತನಾಡಿ, ಈಗಿನ ಕಾರ್ಯಕಾರಿ ಸಮಿತಿಯ ಅಧಿಕಾರ ಅವಧಿ ವಿಸ್ತರಿಸುವ ಕ್ರಮ ಸರಿಯಲ್ಲ. ಒಂದು ವೇಳೆ ಅಧಿಕಾರಾವಧಿ ವಿಸ್ತರಣೆ ಆಗುವುದಾದರೆ ಮುಂದಿನ ಅವಧಿಗಳಿಂದ ಆರಂಭವಾಗಲಿ.  ಹಿತಾಸಕ್ತರ ಗುಂಪು ಕಟ್ಟಿಕೊಂಡಿರುವ ಹಾಲಿ ಅಧ್ಯಕ್ಷರು ಕೇಂದ್ರ ಕಸಾಪ ಬೈಲಾಗೆ ತಿದ್ದುಪಡಿ ತಂದಿದ್ದಾರೆ. ಈಗಿರುವ ಅವಧಿಯಲ್ಲೇ ಹೇಳಿದ ಕೆಲಸವನ್ನು ಪೂರ್ಣಗೊಳಿಸದವರಿಗೆ, ಐದು ವರ್ಷಗಳಕಾಲ ಅಧಿಕಾರ ಕೊಟ್ಟರೆ ಸಾಹಿತ್ಯ ಪರಿಷತ್ತು ಮಳುಗಿ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಡಾ.ಲೀಲಾವತಿ ದೇವದಾಸ್‌, ಕರ್ನಾಟಕ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಈ. ಬಸವರಾಜು, ಕಸಾಪ ಸಕ್ರಿಯ ಸದಸ್ಯ ಲಕ್ಷ್ಮಣ್‌, ಶಾಂತಲಾ ಸುರೇಶ್‌ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಆಮೀಷ ಆರೋಪ
ಸ್ವಾರ್ಥ ಸಾಧನೆಗೆ ಮುಂದಾಗಿರುವ ಕಸಾಪ ಹಾಲಿ ಅಧ್ಯಕ್ಷರು ತಮ್ಮ ವಿರೋಧಿಗಳಿಗೆ ಕರೆ ಮಾಡಿ “ದುಂಡು ಮೇಜಿ’ನ ಸಭೆಗೆ ಹೋಗಬೇಡಿ ಎಂದು ಮನವಿ ಮಾಡಿ, ಆಮೀಷ ಒಡುತ್ತಿದ್ದಾರೆ. ನನಗೂ ಕೂಡ ಈ ಹಿಂದೆ 25 ಸಾವಿರ ರೂ. ಮೊತ್ತದ ಪ್ರಶಸ್ತಿ ನೀಡುವುದಾಗಿ ಹೇಳಿದ್ದರು. ಆದರೆ ,ನಾನು ಅದನ್ನು ನಿರಾಕರಿಸಿದೆ ಎಂದು ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ ದೂರಿದರು.

ಕೇಂದ್ರ ಕಸಾಪ ಬೈಲಾಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಪತ್ರಚಳವಳಿ ಹಮ್ಮಿಕೊಳ್ಳಲಾಗಿದೆ. ತಿದ್ದುಪಡಿ ಬಗ್ಗೆ ವಿರೋಧ ವ್ಯಕ್ತಪಡಿಸುವವರು ಪತ್ರ ಮುಖೇನ ಬೆಂಬಲ ಸೂಚಿಸಬಹುದಾಗಿದೆ.
– ಡಾ.ಕೋ.ವೆಂ.ರಾಮಕಷ್ಣೇಗೌಡ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ

ಕಸಾಪ ಅಧ್ಯಕ್ಷನಾಗಿ ನನ್ನ ಖ್ಯಾತಿಯನ್ನು ಸಹಿಸಿಕೊಳ್ಳದವರು ಟೀಕೆ ಮಾಡುತ್ತಿದ್ದಾರೆ. ಆದರೆ, ಬಹುಜನರ ಬೆಂಬಲ ನಮಗಿದೆ, ವಿರೋಧಿಗಳ ಪತ್ರಚಳವಳಿ “ವ್ಯರ್ಥ ಚಳವಳಿ’ಆಗಲಿದೆ.
– ಡಾ.ಮನು ಬಳಿಗಾರ್‌, ಕಸಾಪ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next