ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದ್ದು ಈ ನಿಟ್ಟಿನಲ್ಲಿ ಕೈಗೊಳ್ಳಲಾದ ನಿಬಂಧನೆಗಳ ತಿದ್ದುಪಡಿಯನ್ನು ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಅಂಗೀಕರಿಸಿದ್ದಾರೆ.
ಕನ್ನಡ ಓದು-ಬರಹ ಬಲ್ಲ ವ್ಯಕ್ತಿಗಳಿಗೆ ಸದಸ್ಯತ್ವ ನೀಡುವ ಸಂಬಂಧ ಪ್ರಾಥಮಿಕ ಶಿಕ್ಷಣ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದರೂ, ಸಾಮಾನ್ಯ ವ್ಯಕ್ತಿಗಳು ಯಾವುದೇ ಅಡಚಣೆ ಇಲ್ಲದೇ ಸದಸ್ಯರಾಗಲು ನಿಯಮಗಳನ್ನು ರೂಪಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.
ಕನ್ನಡ ನಾಡು, ನುಡಿ, ನೆಲ, ಜಲ ಸೇರಿದಂತೆ ಇವುಗಳ ರಕ್ಷಣೆಗಾಗಿ ಶ್ರಮಿಸಿದ ಓದು, ಬರಹ ಬಾರದ ಕನ್ನಡಿಗರು, ಪರಿಷತ್ತಿನ ಸದಸ್ಯತ್ವವನ್ನು ಬಯಸಿ ಅರ್ಜಿ ಸಲ್ಲಿಸಿದಲ್ಲಿ ಕನಿಷ್ಠ ವಿದ್ಯಾರ್ಹತೆಯಿಂದ ವಿನಾಯಿತಿಯನ್ನು ನೀಡಲಾಗಿದೆ. ಜೊತೆಗೆ ಕನ್ನಡ ಓದಲು ಬರೆಯಲು ಬಾರದವರಿಗೆ ಪರಿಷತ್ತು ಸರಳ ಕನ್ನಡವನ್ನು ಕಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಶಾಲೆಗಳ ಪುನಃಶ್ಚೇತನವನ್ನು ಪರಿಷತ್ತಿನ ಘಟಕಗಳ ಮೂಲಕ ಗುರುತಿಸಿ ಸರ್ಕಾರ, ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳುವುದು. ಈಗಿರುವ ಒಂದು ಸಾವಿರ ರೂ.250 ರೂಗಳ ಇಳಿಕೆ ಮಾಡುವುದು ಕೂಡ ತಿದ್ದಪಡಿಯಲ್ಲಿ ಸೇರಿದೆ ಎಂದು ತಿಳಿಸಿದ್ದಾರೆ.
ಆಧುನಿಕ ಗುರುತಿನ ಚೀಟಿಯಾಗಿ ಸ್ಮಾರ್ಟ್‌ಕಾರ್ಡ್ ವಿತರಿಸುವುದು. ಭಾರತೀಯ ಸೇನೆ, ಅರೆಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಲ್ಲವೆ ನಿವೃತ್ತರಾಗಿರುವ ಕನ್ನಡ ಸೈನಿಕರಿಗೆ ಹಾಗೂ ದಿವ್ಯಾಂಗಚೇತನರಿಗೆ ಆಜೀವ ಸದಸ್ಯತ್ವ ಮತ್ತು ಸ್ಮಾರ್ಟ್‌ಕಾರ್ಡ್ ಉಚಿತವಾಗಿ ನೀಡುವುದು ಕೂಡ ತಿದ್ದುಪಡಿಯಲ್ಲಿದೆ. ಜತೆಗೆ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಲು ಅತ್ಯಾಧುನಿಕ ಆ್ಯಪ್ ಅನ್ನು ಅಳವಡಿಸಿಕೊಳ್ಳುವುದು ಕೂಡ ಪರಿಷತ್ತಿನ ತಿದ್ದುಪಡಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಪರಿಷತ್ತಿನ ಏಳ್ಗೆಗಾಗಿ ಸುಮಾರು 18 ತಿದ್ದುಪಡಿಗಳನ್ನು ತರಲಾಗಿದ್ದು ಅವುಗಳನ್ನು ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಅಂಗೀಕರಿಸಿದ್ದಾರೆ. ಜತೆಗೆ Þವುದೇ ಸದಸ್ಯನ ವರ್ತನೆ ಪರಿಷತ್ತಿನ ಘನತೆ, ಗೌರವ ಹಾಗೂ ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿದೆ ಎಂದು ಕಂಡುಬಂದಾಗ ಅಂತಹ ಸದಸ್ಯತ್ವವನ್ನು ನಿಯಮಾನುಸಾರ ಅಮಾನತ್ತುಗೊಳಿಸುವ ಅಧಿಕಾರವನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ನೀಡಲಾಗಿದೆ ಎಂದು ಸ್ಪಷ್ಪಪಡಿಸಿದ್ದಾರೆ.