ಯಾದಗಿರಿ: ಜಿಲ್ಲಾ ಕೇಂದ್ರ ಘೋಷಣೆಯಾದ 10 ವರ್ಷಗಳ ಬಳಿಕ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಸಾಹಿತಿಗಳಲ್ಲಿ ಉತ್ಸಾಹ ಮೂಡಿಸಿದೆ. ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಹಿಂದಿ ಪ್ರಚಾರ ಸಮಿತಿ ಆವರಣದಲ್ಲಿ ನಡೆಯುತ್ತಿದ್ದ ಸಾಹಿತ್ಯ ಚಟುವಟಿಕೆಗಳು ಇನ್ನು ಮುಂದೆ ಭವ್ಯ ಭವನದಲ್ಲಿ ನಡೆಯಲಿದ್ದು, ಉದ್ಘಾಟನೆಗೆ ಮಾರ್ಚ್ 21ಕ್ಕೆ ದಿನಾಂಕ ನಿಗದಿಯಾಗಿದೆ.
2012ರ ಕ್ರಿಯಾಯೋಜನೆಯ ಪ್ರಕಾರ ಅಂದಾಜು 54 ಲಕ್ಷ ವೆಚ್ಚದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಮೂಲಸೌಕರ್ಯ ನಿಗಮಕ್ಕೆ ವಹಿಸಿದ್ದ ಕಾಮಗಾರಿ ಪೂರ್ಣಗೊಂಡಿದ್ದು, ಸಾಹಿತಿಗಳಿಗೆ ನೆಲೆಯೇ ಇಲ್ಲ ಎನ್ನುವ ವಾತಾವರಣವಿದ್ದ ಜಿಲ್ಲೆಯಲ್ಲಿ ಇದೀಗ ಸಾಹಿತಿಗಳು ಚಟುವಟಿಕೆ ಕೈಗೊಳ್ಳಲು ಶಾಶ್ವತ ನೆಲೆ ಸಿಕ್ಕಂತಾಗಿದೆ.
ಭವನ ನಿರ್ಮಾಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ 15 ಲಕ್ಷ, ಕನ್ನಡ ಸಾಹಿತ್ಯ ಪರಿಷತು 15 ಲಕ್ಷ, ಆಗಿನ ಶಾಸಕ ಡಾ| ಮಾಲಕರಡ್ಡಿ 10 ಲಕ್ಷ, ಸಂಸದ ಬಿ.ವಿ.ನಾಯಕ 5 ಲಕ್ಷ, ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ 5 ಲಕ್ಷ, ಕಸಾಪ ಅಧ್ಯಕ್ಷ ಹೊಟ್ಟಿ ಕುಟುಂಬ 3 ಲಕ್ಷ ಹಾಗೂ ದಾನಿಗಳಿಂದ 50 ಸಾವಿರ ನೀಡಲಾಗಿದ್ದು, ಭವನ ನಿರ್ಮಾಣದಲ್ಲಿ ಕಸಾಪ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿಯ ಶ್ರಮ ಮರೆಯುವಂತಿಲ್ಲ. ಈ ಮಧ್ಯೆಯೇ ಸಾಹಿತ್ಯ ಪರಿಷತ್ ಚುನಾವಣೆ ಎದುರಾಗಿದ್ದು, 2 ಅವಧಿಗೆ ಅಧ್ಯಕ್ಷರಾಗಿರುವ ಸಿದ್ದಪ್ಪ ಹೊಟ್ಟಿಗೆ ಈ ಬಾರಿ ಚುನಾವಣೆಗೆ ಭವನ ನಿರ್ಮಾಣವೇ ಶ್ರೀರಕ್ಷೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸಾಹಿತಿಗಳ ಅಭಿಪ್ರಾಯದಂತೆ ಹೊಟ್ಟಿ 3ನೇ ಬಾರಿಗೆ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸಲು ಮುಂದಾಗಿದ್ದು, ಇದಲ್ಲದೇ ಜಿಲ್ಲೆಯ ಸಾಕಷ್ಟು ಸಾಹಿತಿಗಳು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಪೈಪೋಟಿಯಲ್ಲಿ ಇರುವವರ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತಿದೆ.
ಹೊಟ್ಟಿ ಅಧ್ಯಕ್ಷರಾಗಿದ್ದ ವೇಳೆ 4 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದು, 2 ಯಾದಗಿರಿ ತಾಲೂಕು ಸಮ್ಮೇಳನ, 1 ಶಹಾಪುರ ತಾಲೂಕು ಸಮ್ಮೇಳನ ಸೇರಿದಂತೆ ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 37 ಕೃತಿಗಳನ್ನು ಸಾಹಿತ್ಯ ಪರಿಷತ ವತಿಯಿಂದ ಬಿಡುಗಡೆಗೊಳಿಸಿದ್ದಾರೆ. ಈಗಾಗಲೇ ಆಕಾಂಕ್ಷಿಗಳು ಸದಸ್ಯರ ಮನವೊಲಿಕೆ ಆರಂಭಿಸಿದ್ದು, ಸಾಹಿತ್ಯದಲ್ಲೂ ಬಣ, ಜಾತಿ ಲೆಕ್ಕಾಚಾರ ರಾಜಕೀಯ ಮೀರಿಸುವಂತಿದೆ. ತೆರೆಮರೆಯಲ್ಲಿ ಸ್ಪರ್ಧಾರ್ಥಿಗಳ ಕಸರತ್ತು ಆರಂಭವಾಗಿದೆ. ಬೆಂಬಲಿಗರೊಂದಿಗೆ ಅಧ್ಯಕ್ಷ ಗಾದಿಗೆ ಏರುವ ಮಸಲತ್ತು ಶುರುವಾಗಿದೆ. ಈ ಮಧ್ಯೆಯೇ ಸಾಹಿತ್ಯಾಸಕ್ತರಿಗೆ ಕಸಾಪ ಸದಸ್ಯತ್ವ ನೀಡಲು ಪ್ರಮಾಣಿಕ ಕಾರ್ಯವಾಗಿಲ್ಲ ಎನ್ನುವ ಅಸಮಾಧಾನವೂ ಇದೆ. ಪ್ರಸ್ತುತ ಜಿಲ್ಲೆಯಲ್ಲಿ ಕೇವಲ 4600ರಷ್ಟು ಮತದಾರರು ಇದ್ದಾರೆ.