Advertisement

ಕನ್ನಡ ಸಾಹಿತ್ಯ ಪರಿಷತ್ತಿನ ನಡಿಗೆ ಕಾಲೇಜುಗಳ ಕಡೆಗೆ

12:06 PM Oct 24, 2022 | Team Udayavani |

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನತ್ತ ಸೆಳೆಯುವ ಸದುದ್ದೇಶದಿಂದ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಹೆಜ್ಜೆಯಿರಿಸಿದ್ದು, “ಕನ್ನಡ ಸಾಹಿತ್ಯ ಪರಿಷತ್ತಿನ ನಡಿಗೆ ಕಾಲೇಜುಗಳ ಕಡೆಗೆ’,ಎಂಬ ಹೊಸ ಕಾರ್ಯಕ್ರಮ ರೂಪಿಸಿದೆ.

Advertisement

ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವುದು, ಕನ್ನಡ ಸಾಹಿತ್ಯ, ಕಾದಂಬರಿ ಓದುವ ಗೀಳು ಬೆಳೆಸುವುದು ಸೇರಿದಂತೆ ಅನೇಕ ಉದ್ದೇಶಗಳು ಈ ಕಾರ್ಯಕ್ರಮದ ಹಿಂದಿದೆ. ನಗರದಲ್ಲಿರುವ ಹಲವು ಕಾಲೇಜುಗಳಿಗೆ ತೆರೆಳಿ ಕನ್ನಡ ಕುರಿತ ಕಾರ್ಯಕ್ರಮ ಆಯೋಜಿಸುವುದು ಕೂಡ ಇದರಲ್ಲಿ ಸೇರಿದೆ. ರಾಜಧಾನಿಯಲ್ಲಿ 400ಕ್ಕೂ ಅಧಿಕ ಕಾಲೇಜುಗಳು ಇವೆ. ಈ ಎಲ್ಲ ಕಾಲೇಜುಗಳಲ್ಲಿ “ಕಸಾಪ ನಡಿಗೆ ಕಾಲೇಜುಗಳ ಕಡೆಗೆ’, ಕಾರ್ಯಕ್ರಮ ಹಮ್ಮಿಕೊಳ್ಳುವ ಗುರಿ ಯನ್ನು ಬೆಂಗಳೂರು ನಗರ ಜಿಲ್ಲಾ ಕಸಾಪ ಹೊಂದಿದೆ. ಆಸಕ್ತ ಕಾಲೇಜು ಮಕ್ಕಳಲ್ಲಿ ಕನ್ನಡ ಭಾಷೆ ಬಗ್ಗೆ ಅಭಿರುಚಿ ಬೆಳೆಸಿ ಆಯಾ ಕಾಲೇಜುಗಳಲ್ಲಿ ರಾಷ್ಟ್ರಕವಿ ಕುವೆಂಪು, ಜಿ.ಎಸ್‌.ಶಿವರುದ್ರಪ್ಪ, ದ.ರಾಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಸೇರಿದಂತೆ ಕನ್ನಡದ ಮೇರು ಸಾಹಿತಿಗಳ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳುವ ಉದ್ದೇಶವೂ ಇದೆ ಎಂದು ಬೆಂಗಳೂರು ನಗರ ಜಿಲ್ಲಾ ಕಸಾಪದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಲೇಜುಗಳಲ್ಲಿ ಕಾರ್ಯಕ್ರಮ ರೂಪಿಸುವ ಬಗ್ಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಹಲವು ಆಸಕ್ತ ಸರ್ಕಾರಿ ಮತ್ತು ಅನುದಾನಿತ ಪಿಯು ಮತ್ತು ಪದವಿ ಕಾಲೇಜುಗಳು ಮುಂದೆ ಬಂದಿವೆ. ಶೀಘ್ರದಲ್ಲೇ” ಕಸಾಪ ನಡಿಗೆ ಕಾಲೇಜುಗಳ ಕಡೆಗೆ’ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಕಾಲೇಜುಗಳಲ್ಲಿ ಪರಿಷತ್ತಿನ ಘಟಕ ಸ್ಥಾಪನೆ: ಭವಿಷ್ಯತ್ತಿನ ದೃಷ್ಟಿಯಿಂದ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳನ್ನು ಕಸಾಪ ದತ್ತ ಆಕರ್ಷಿಸಬೇಕಾಗಿದೆ. ಆ ನಿಟ್ಟಿನಲ್ಲೆ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಕಾರ್ಯಕ್ರಮಗಳನ್ನು ರೂಪಿಸಿಸುತ್ತಿದೆ ಎಂದು ಬೆಂ.ನಗರ ಜಿಲ್ಲಾ ಕಸಾಪ ಅಧ್ಯಕ್ಷ ಪ್ರಕಾಶಮೂರ್ತಿ ಹೇಳುತ್ತಾರೆ. ಕಸಾಪದಲ್ಲಿ ಹಲವು ಕಾಲೇಜುಗಳ ಉನ್ಯಾಸಕರು ಮತ್ತು ಪ್ರಾಂಶುಪಾಲರು ಕೂಡ ಸದಸ್ಯತ್ವ ಹೊಂದಿದ್ದಾರೆ. ಅವರೆಲ್ಲರ ಸಹಕಾರ, ಸಲಹೆ ಪಡೆದು ಮುಂದುವರಿಯುವುದಾಗಿ ತಿಳಿಸುತ್ತಾರೆ. ಪದವಿ ಮತ್ತು ಪಿಯು ಕಾಲೇಜುಗಳಲ್ಲಿ ಕನ್ನಡ ಆಸಕ್ತ ಮನಸುಗಳ ಜತೆಗೂಡಿ ಬೆಂಗಳೂರು ನಗರ ಜಿಲ್ಲಾ ಕಸಾಪ ಘಟಕ ಸ್ಥಾಪನೆ ಮಾಡುವ ಆಲೋಚನೆ ಇದೆ. ಇದರ ಜತೆಗೆ ಕಾಲೇಜು ವಿದ್ಯಾರ್ಥಿಗಳನ್ನು ಪರಿಷತ್ತಿನ ಸದಸ್ವತ್ವ ಪಡೆಯುವತ್ತ ಮನವಿ ಮಾಡಲಾಗುವುದು. ಆ ಮೂಲಕ ಕಾಲೇಜುಗಳಲ್ಲಿ ಕನ್ನಡದ ವಾತಾವರಣ ಮೂಡಿಸಲಾಗುವುದು ಎಂದು ಹೇಳಿದ್ದಾರೆ.

ಶೀಘ್ರದಲ್ಲಿ ರಾಜಧಾನಿ ಕಾಲೇಜುಗಳಲ್ಲಿ ಕಾರ್ಯಕ್ರಮ?: ನಗರದ ಹಲವು ಕಾಲೇಜು ಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಡಿಗೆ ಕಾಲೇಜು ಗಳ ಕಡೆಗೆ ಆಯೋಜಿಸಲಾಗುವುದು. ಶೀಘ್ರದಲ್ಲಿ ವರ್ತೂರಿನಲ್ಲಿ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆಯಲಿದೆ. ಆ ನಂತರ ವಿಜಯನಗರ ಸಮೀಪದ ಅತ್ತಿಗುಪ್ಪೆಯ ಸರ್ಕಾರ ಪಿಯು ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕಸಾಪ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಧಾನಿಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆ ಜತೆಗೂಡಿ ಹೊಸ ಕಾರ್ಯಕ್ರಮಗಳನ್ನು ಕಸಾಪ ರೂಪಿಸಲಿದೆ ಎಂದು ತಿಳಿಸಿದ್ದಾರೆ.

Advertisement

ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಕುರಿತು ಮತ್ತಷ್ಟು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಕಸಾಪ “ಕನ್ನಡ ಸಾಹಿತ್ಯ ಪರಿಷತ್ತಿನ ನಡಿಗೆ ಕಾಲೇಜುಗಳ ಕಡೆಗೆ’,ಎಂಬ ಹೊಸ ಕಾರ್ಯಕ್ರಮ ರೂಪಿಸಿದೆ. ಕನ್ನಡ ಸಾಹಿತ್ಯ ಮತ್ತು ಪರಂಪರೆಯನ್ನು ಯುವ ಸಮೂಹಕ್ಕೆ ಪರಿಚಯಿಸುವುದು ಕೂಡ ಇದರ ಮೂಲ ಉದ್ದೇಶವಾಗಿದೆ. -ಪ್ರಕಾಶಮೂರ್ತಿ, ನಗರ ಕಸಾಪ ಅಧ್ಯಕ್ಷ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next