Advertisement

ಜಿಲ್ಲಾ ಕ‌ಸಾಪ ಅಧ್ಯಕ್ಷ ಸ್ಥಾನಕ್ಕೆ ಹ‌ನುಮಂತು ಅಭ್ಯರ್ಥಿ?

02:24 PM Feb 22, 2021 | Team Udayavani |

ಮಂಡ್ಯ: ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಎರಡನೇ ಬಾರಿಗೆ ಚುನಾವಣೆಗೆ ಹಾಲಿ ಜಿಲ್ಲಾಧ್ಯಕ್ಷರಾಗಿರುವವರು ನಿಲ್ಲಬಾರದು ಎಂಬ ಅಲಿಖಿತ ನಿಯಮ ಪಾಲನೆ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿಗಳು, ಮಾಜಿ ಅಧ್ಯಕ್ಷರು ಒಮ್ಮತದ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸುತ್ತಿದ್ದಾರೆ.

Advertisement

ಹಾಲಿ ಅಧ್ಯಕ್ಷರಾಗಿರುವ ಸಿ.ಕೆ.ರವಿಕುಮಾರ ಚಾಮಲಾಪುರ ಅವರು 2ನೇ ಬಾರಿಗೆ ಸ್ಪರ್ಧಿಸಬಾರದು.ಕನ್ನಡ ಕೆಲಸ ಮಾಡುವ ಮನಸ್ಸುಗಳು ಸಾಕಷ್ಟು ಮಂದಿ ಇದ್ದು, ಎಲ್ಲರಿಗೂ ಅವಕಾಶ ನೀಡಬೇಕು. ಆದ್ದರಿಂದ ಬೇರೆಯವರಿಗೆ ಅವಕಾಶ ನೀಡಬೇಕು ಎಂದುಹಿರಿಯರು ವಾದಿಸುತ್ತಿದ್ದಾರೆ. ಇದರ ಬಗ್ಗೆ ಈಗಾಗಲೇ ಸಮಾಲೋಚನೆ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಹಾಲಿ ಅಧ್ಯಕ್ಷ ರವಿಕುಮಾರ ಚಾಮಲಾಪುರ, ನಾನು ಈಗಲೇ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಸಮ್ಮೇಳನದ ನಂತರ ಸದಸ್ಯರು, ಪದಾಧಿಕಾರಿಗಳು, ಸ್ನೇಹಿತರು, ಹಿತೈಷಿಗಳ ಸಭೆ ಕರೆದು ತೀರ್ಮಾನ ಕೈಗೊಂಡು ತಿಳಿಸುತ್ತೇನೆ ಎಂದು ಹೇಳಿದ್ದರು.

ಇನ್ನೆರಡು ದಿನಗಳಲ್ಲಿ ಒಮ್ಮತ ಅಭ್ಯರ್ಥಿ: ಆದರೆ ಹಿರಿಯರು, ಚುನಾವಣೆಗೆ ಒಂದು ತಿಂಗಳು ಮಾತ್ರ ಬಾಕಿ ಇರುವುದರಿಂದ ನಿರ್ಧಾರಕ್ಕಾಗಿ ಕಾಯುವುದು ಸಾಧ್ಯವಿಲ್ಲ. ಚುನಾವಣೆಗೆ ಸಿದ್ಧತೆ ನಡೆಸಬೇಕಾಗಿರುವುದರಿಂದ ಕೂಡಲೇ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ಮುಂದಾಗಿದ್ದಾರೆ. ಅದರಂತೆ ಶನಿವಾರ ಸಂಜೆ ಕರ್ನಾಟಕ ಸಂಘದಲ್ಲಿ ಪ್ರೊ.ಜಯ ಪ್ರಕಾಶ್‌ಗೌಡ, ಎಂ.ಡಿ.ಜಯರಾಂ, ಎಚ್‌.ಎಸ್‌.ಮುದ್ದೇಗೌಡ, ಡಿ.ಪಿ.ಸ್ವಾಮಿ, ಪಾಲಳ್ಳಿ ಲಿಂಗಣ್ಣ ಅವರು ಸೇರಿದಂತೆ ಆಕಾಂಕ್ಷಿತರು ಭಾಗವಹಿಸಿದ್ದು, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ಆಕಾಂಕ್ಷಿಗಳಿಂದ ಒಪ್ಪಿಗೆ: ಸುಮಾರು 5 ಮಂದಿ ಆಕಾಂಕ್ಷಿತರು ಸಭೆಯಲ್ಲಿ ಭಾಗವಹಿಸಿ ಹಿರಿಯರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಒಮ್ಮತದ ಅಭ್ಯರ್ಥಿ ಪರವಾಗಿ ದುಡಿಯಲು ಕೈಜೋಡಿಸಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಸಾಹಿತಿ ಎಸ್‌.ಕೃಷ್ಣ ಸ್ವರ್ಣಸಂದ್ರ, ಚಂದಗಾಲು ಲೋಕೇಶ್‌, ಪಿ.ಡಿ.ತಿಮ್ಮಪ್ಪ, ಕೀಲಾರ ಕೃಷ್ಣೇಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಇದರಲ್ಲಿ ಕೀಲಾರ ಕೃಷ್ಣೇಗೌಡ ನಾನು ಆಕಾಂಕ್ಷಿಯಾಗಿದ್ದು, ಸ್ಪರ್ಧಿಸುತ್ತೇನೆ ಎಂದು ಹೇಳಿ ಹೊರ ನಡೆದರೆ, ಉಳಿದವರು ಹಿರಿಯರ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಲಯನ್‌ ಕೆ.ಟಿ. ಹನುಮಂತು ಅಭ್ಯರ್ಥಿ? :

Advertisement

ಲಯನ್ಸ್‌ ಸಂಸ್ಥೆಯ ಪೋಷಕರಾಗಿರುವ ಕೆ.ಟಿ.ಹನುಮಂತು ಅವರು ಸಂಘಟಕರಾಗಿದ್ದಾರೆ. ಕಲೆ, ಸಾಂಸ್ಕೃತಿಕವಾಗಿ ತೊಡಗಿಸಿ ಕೊಂಡಿದ್ದಾರೆ. ವಿಧಾನ ಪರಿಷತ್‌ಸದಸ್ಯರಾಗಿರುವ ಕೆ.ಟಿ.ಶ್ರೀಕಂಠೇಗೌಡರ ಸಹೋದರರಾಗಿರುವ ಇವರು. ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದ್ದಾರೆ. ಸಮಾಜ ಸೇವೆ, ಪರಿಸರ ಸಂರಕ್ಷಣೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಇವರನ್ನು ಕಸಾಪ ಚುನಾವಣೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಮಾಡಲು ಕಸಾಪ ಮಾಜಿ ಅಧ್ಯಕ್ಷರು, ಹಿರಿಯರು ಮುಂದಾಗಿದ್ದಾರೆ.

ಎರಡನೇ ಬಾರಿ ನಿಂತು ಗೆದ್ದ ಇತಿಹಾಸವಿಲ್ಲ  :

ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದುವರೆಗೂ ಎರಡನೇ ಬಾರಿ ನಿಂತು ಗೆದ್ದ ಇತಿಹಾಸವಿಲ್ಲ. ಈಗಾಗಲೇ ಸಾಹಿತಿ ತೈಲೂರು ವೆಂಕಟಕೃಷ್ಣ, ಎಚ್‌.ಎಸ್‌.ಮುದ್ದೇಗೌಡ ಸೇರಿದಂತೆ ಇತರರು ಎರಡನೇ ಬಾರಿ ಗೆಲ್ಲುವ ಹುಮ್ಮಸ್ಸಿನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಒಂದು ಬಾರಿಜಿಲ್ಲಾಧ್ಯಕ್ಷರಾಗಿದ್ದವರು ಬೇರೆಯವರಿಗೂ ಅವಕಾಶ ಮಾಡಿಕೊಟ್ಟು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಕೈಜೋಡಿಸಬೇಕು ಎಂಬುದು ಹಿರಿಯ ಮಾಜಿ ಅಧ್ಯಕ್ಷರ ಅಲಿಖೀತ ನಿಯಮವಾಗಿದೆ. ಇದು ಪ್ರತಿ ಚುನಾವಣೆಯಲ್ಲೂ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.

ಸ್ಪರ್ಧೆಯಿಂದ ಹಿಂದೆ ಸರಿದರೆ ಮುಕ್ತ ಅವಕಾಶ ಒಂದು ವೇಳೆ ಹಾಲಿ ಅಧ್ಯಕ್ಷ ರವಿಕುಮಾರ ಚಾಮಲಾಪುರ ಚುನಾವಣೆಯಲ್ಲಿ ಸ್ಪರ್ಧಿಸದೆ ಬೇರೆಯವರಿಗೆ ಅವಕಾಶ ಮಾಡಿಕೊಟ್ಟರೆ, ಒಮ್ಮತದ ಅಭ್ಯರ್ಥಿ ಆಯ್ಕೆ ಕೈಬಿಟ್ಟು, ಸ್ಪರ್ಧಿಸುವ ಎಲ್ಲ ಆಕಾಂಕ್ಷಿತರರಿಗೂ ಚುನಾವಣೆಯಲ್ಲಿ ಸ್ಪರ್ಧಿಸಿ ಸಾಮರ್ಥ್ಯವಿರುವವರು ಕಸಾಪ ಅಧ್ಯಕ್ಷರಾಗಬಹುದಾಗಿದೆ. ಆದರೆ, ಒಂದು ಬಾರಿ ಜಿಲ್ಲಾಧ್ಯಕ್ಷರಾಗಿರುವವರು ಮತ್ತೂಂದು ಬಾರಿ ನಿಲ್ಲುವ ಅವಕಾಶವಿಲ್ಲ ಎಂಬ ಅಲಿಖೀತ ನಿಯಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ಎಲ್ಲ ಹಿರಿಯರು, ಸಾಹಿತಿಗಳು, ಕಸಾಪದ ಸದಸ್ಯರು ಬೆಂಬಲಿಸುವ ವಿಶ್ವಾಸವಿದೆ. ಈಗಾಗಲೇ ಅಭ್ಯರ್ಥಿಯಾಗುವಂತೆಹಿರಿಯರು ಸೂಚಿಸಿರುವುದರಿಂದ ಸ್ಪರ್ಧೆ ಮಾಡಲು ಮುಂದಾಗಿದ್ದೇನೆ. ಕೆ.ಟಿ.ಹನುಮಂತು, ಲಯನ್ಸ್‌ ಸಂಸ್ಥೆ ಪೋಷಕ

 

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next