ಬಹುಶಃ ಇದು ಇಡೀ ಜಗತ್ತನ್ನೇ ಒಗ್ಗೂಡಿಸಿದ ಕತೆ. ಈ ಕತೆಯೊಳಗೆ ಹೊಕ್ಕವರಿಗೆ ನೈರೋಬಿಯೆಂದರೆ ಕೀನ್ಯಾದ ಬಡತನವಲ್ಲ, ಬರ್ಲಿನ್ ಎಂದರೆ ನಾಝಿ ನೆನಪುಗಳಲ್ಲ, ಟೋಕಿಯೊ ಎಂದರೆ ಜಪಾನಿಗಳ ಪರಿಶ್ರಮವಲ್ಲ, ಸ್ಟಾಕ್‌ಹೋಮ್ ಎಂದರೆ ಟ್ರೇಡ್ ಎಕ್ಸ್‌ಚೇಂಜಲ್ಲ, ಕೊನೆಗೆ ಪ್ರೊಫೆಸರ್ ಎಂದರೆ ಮೇಷ್ಟ್ರೂ ಅಲ್ಲ..! ಇದೊಂದು ಕಳ್ಳ-ಖದೀಮರ ಕೂಟ. ದರೋಡೆಕೋರರು ಚಾಣಾಕ್ಷತೆಯಿಂದ ದೋಚುವುದನ್ನು ಎಳೆಎಳೆಯಾಗಿ ಬಿಚ್ಚಿಡುವ ಅಪರಾಧ ವಿಜೃಂಭಣೆಯ ಕತೆ. ಹೆಸರು “ಮನಿ ಹೈಸ್ಟ್”.
ಒಟಿಟಿ ಮಾಧ್ಯಮಗಳು ಜಗತ್ಪ್ರಸಿದ್ಧಿಯಾದ ಮೇಲೆ ಸಾಲು ಸಾಲಾಗಿ ಬಂದ ವೆಬ್ ಸೀರೀಸ್‌ಗಳಲ್ಲಿ ಈ ಸ್ಪ್ಯಾನಿಷ್ ಭಾಷೆಯ ‘ಮನಿ ಹೈಸ್ಟ್’ಗೊಂದು ಬೇರೆಯೇ ಜಾಗವಿದೆ. ಸರಣಿಯ ಮೂಲ ಹೆಸರು ‘ಲಾ ಕಾಸಾ ಡೆ ಪಾಪೆಲ್’ ಹೇಳುವಂತೆ ಸ್ಪೇನ್ ದೇಶದ ರಾಯಲ್ ಮಿಂಟ್‌ಗೆ ದಾಳಿ ಮಾಡಿ ಯಥೇಚ್ಛ ದುಡ್ಡು ಮುದ್ರಿಸಿ ಅದನ್ನು ದೋಚುವ ಕತೆ ಇದು. 2017ರಲ್ಲಿ ಹೊರಬಂದ ಇದರ ಮೊದಲ ಸೀಸನ್ ಇಡೀ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿಬಿಟ್ಟಿತು. ನೋಡಿದ ಜನರೆಲ್ಲಾ ಅಕ್ಷರಶಃ ಹುಚ್ಚರಾಗಿಬಿಟ್ಟರು. ಎರಡು ಪಾರ್ಟುಗಳಲ್ಲಿ ಬಂದ ಮೊದಲ ಸೀಸನ್ ಮುಗಿದಾಗ ಇಡೀ ಜಗತ್ತು ಈ ಖದೀಮರ ಕೂಟಕ್ಕೆ ಫಿದಾ ಆಗಿಬಿಟ್ಟಿತ್ತು.
ದರೋಡೆ ಮುಗಿದು ಎಲ್ಲರೂ ಸೆಟ್ಲ್ ಆಗಿಬಿಟ್ಟರು ಎನ್ನುವಷ್ಟರಲ್ಲಿ ಮತ್ತೆ 2019ರಲ್ಲಿ ಎರಡನೇ ಸೀಸನ್ ಬಂತು. ಈ ಬಾರಿ ಇವರು ಬ್ಯಾಂಕ್ ಆಫ್ ಸ್ಪೇನ್‌ಗೆ ಧಾಂಗುಡಿಯಿಟ್ಟರು. ಬಂಗಾರವನ್ನೇ ಕರಗಿಸಿ ದೋಚುವ ಇದರ ಎರಡೂ ಪಾರ್ಟುಗಳು ಜನಪ್ರಿಯವಾಗಿ ಕೊನೆಯ ಪಾರ್ಟ್‌ಗಾಗಿ ಜನ ಚಾತಕ ಪಕ್ಷಿಯಂತೆ ಕಾಯುವಂತಾಯಿತು. ಕಳೆದ ವಾರ ಐದನೇ ಪಾರ್ಟಿನ ಮೊದಲ ಸಂಪುಟ ಹೊರಬಿದ್ದಿದ್ದು ಜಗತ್ತು ಮತ್ತೆ ಎದ್ದು ಕೂತಿದೆ. ಒಂದೇ ದಿನದಲ್ಲಿ ಕಣ್ರೆಪ್ಪೆ ಮುಚ್ಚದೆ ನೋಡಿದವರೆಲ್ಲಾ ಥ್ರಿಲ್ ಆಗಿ, ಡಿಸೆಂಬರ್ 3ಕ್ಕೆ ಬರುವ ಕೊನೆಯ ಸಂಪುಟಕ್ಕೆ ಕಾಯುವಂತಾಗಿದೆ.
ಇದನ್ನೂ ಓದಿ:ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್
ಯಾಕೆ ಈ ವೆಬ್ ಸೀರೀಸ್ ಇಷ್ಟು ಜನಪ್ರಿಯವಾಯಿತೆನ್ನಲು ಹಲವು ಕಾರಣಗಳಿವೆ. ಒಂದು ಕತೆ- ಒಂದು ಝೋನರ್ ಜಗತ್ತಿಗೆಲ್ಲಾ ಇಷ್ಟವಾಗಬೇಕೆಂದಿಲ್ಲ. ಒಂದು ದೇಶಕ್ಕೆ, ಒಂದು ವ್ಯಕ್ತಿಗೆ, ಒಂದು ಸಂಸ್ಕೃತಿಗೆ ಹಿತವಾದದ್ದು ಇನ್ನೊಂದಕ್ಕೆ ಅಪಥ್ಯವಾಗಬಹುದು. ಆದರೆ ‘ಮನಿ ಹೈಸ್ಟ್’ ಈ ಎಲ್ಲಾ ಬೌಂಡರಿಗಳನ್ನು ಮೀರಿ ನಿಂತಿದೆ. ಬಹುಶಃ ಇದರ ಬಿಗಿ ಕಥನ ಕ್ರಮವೇ ಮೊದಲ ಪ್ಲಸ್ ಪಾಯಿಂಟ್. ಒಂಚೂರೂ ಬೋರು ಹೊಡೆಸದಂತೆ ವರ್ತಮಾನದ ಜೊತೆ ಭೂತಕಾಲದ ಕತೆ ಸಾಗುತ್ತದೆ. ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ತಿರುವೊಂದು ಬರುತ್ತದೆ. ಇನ್ನೇನು ಎಲ್ಲಾ ಮುಗಿಯಿತೆನ್ನುವಾಗ ಎಳೆಯೊಂದು ಸಿಕ್ಕಿ ಹೋದ ಜೀವ ಮರಳಿ ಬರುತ್ತದೆ. ಇದು ಈ ಕತೆಯ ಸ್ಪೆಷಾಲಿಟಿ.
ಸರಣಿಯ ಪಾತ್ರಗಳಂತೂ ಒಂದನ್ನೊಂದು ಮೀರಿಸುವಂತಿವೆ. ಗುಂಪಾಗಿ ಕೆಲಸ ಮಾಡುವಾಗ ತಮ್ಮ ಖಾಸಗಿ ವಿಚಾರಗಳನ್ನು ಬಿಚ್ಚಿಡಲು ಅನುಮತಿ ಇಲ್ಲದ ಕಾರಣ, ಆರಂಭದಲ್ಲೇ ತಮಗೊಂದೊಂದು ಊರಿನ ಹೆಸರನ್ನು ಪಾತ್ರಧಾರಿಗಳು ಇಟ್ಟುಕೊಳ್ಳುತ್ತಾರೆ. ಸರಣಿಯ ಅಭಿಮಾನಿಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಪಾತ್ರಗಳು ಇಷ್ಟ. ಪ್ರೊಫೆಸರ್ ಇಲ್ಲಿ ಹಾಟ್ ಫೇವರಿಟ್ ಆದರೆ, ಬರ್ಲಿನ್ ಮಿಸ್ಟರ್ ಹ್ಯಾಂಡ್‌ಸಮ್. (ಕೊನೆಯ ಸೀಸನ್‌ನಲ್ಲಿ ಕಾಣಿಸಿಕೊಂಡ ರಫೇಲ್ ಅಪ್ಪನನ್ನೂ ಮೀರಿಸುವಷ್ಟು ಸುಂದರಾಂಗ!) ಒಂದು ಕಾಲದ ಪೊಲೀಸ್ ರಖೇಲ್ ಎರಡನೇ ಸೀಸನ್ ನಲ್ಲಿ ಎಲ್ಲರನ್ನೂ ಮೀರಿಸುವ ಜಾಣ ದರೋಡೆಗಾರ್ತಿ. ಚುರುಕು ಕಂಗಳ ನೈರೋಬಿ ಸತ್ತಾಗ ಅತ್ತವರಿಗೆ, ಐದನೇ ಪಾರ್ಟಿನಲ್ಲಿ ಸಿಡುಕಿನ ಸುಂದರಿ ಟೋಕಿಯೋಳನ್ನೂ ಕಳೆದುಕೊಳ್ಳುವ ಯಾತನೆ. ಗಾಂಧಿಯಾನಂತಹ ದೈತ್ಯನನ್ನು ಕಂಡು ಹಲ್ಲು ಕಡಿಯುವವರಿಗೆ ಆರ್ತುರೋನನ್ನು ಚಚ್ಚಿಹಾಕಬೇಕೆನ್ನುವ ಸಿಟ್ಟು. ಇದೇ ಈ ಸರಣಿಯ ವಿಚಿತ್ರ. ಒಳ್ಳೆಯ ಪಾತ್ರಗಳನ್ನು ಸಮರ್ಥವಾಗಿ ಪರದೆಯ ಮೇಲೆ ಮೂಡಿಸಿದಂತೆ ಅತ್ಯಂತ ಕೆಟ್ಟ ಪಾತ್ರವನ್ನೂ ಅಷ್ಟೇ ಸಮರ್ಪಕವಾಗಿ ಚಿತ್ರಿಸಿದ್ದಾರೆ. ಸಣ್ಣ ಪಾತ್ರಗಳಂತೆ ಕಾಣುವ ಹೆಲ್ಸಿಂಕಿ, ರಿಯೋ, ಮನಿಲಾ, ಡೆನ್ವರ್, ಪಾಲೆರ್ಮೊಗಳು ಕೂಡಾ ಗಾಢವಾಗಿ ನೆನಪುಳಿಯುವ ಫಟನೆಗಳನ್ನು ಸರಣಿಯುದ್ದಕ್ಕೂ ಬಿಟ್ಟುಹೋಗುತ್ತವೆ.
‘ಐ ಡೋಂಟ್ ಕೇರ್ ಅಟ್ ಆಲ್’ ಎಂಬ ಟೈಟಲ್ ಸಾಂಗಿನಿಂದ ಹಿಡಿದು ಅಲ್ಲಲ್ಲಿ ಬರುವ ಹಾಡುಗಳು ಈ ವೆಬ್‌ಸರಣಿಯ ಜೀವಂತಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇಟಲಿಯ ಪ್ರತಿಭಟನೆಯ ಹಾಡಾದ ‘ಬೆಲ್ಲಾ ಚಾವ್’ ನಿಂದ ಹಿಡಿದು ಪ್ರತಿಯೊಂದು ಹಾಡುಗಳೂ ಇಲ್ಲಿ ರಾರಾಜಿಸಿ, ಅದಕ್ಕೆಂದೇ ಪ್ರತ್ಯೇಕ ಅಭಿಮಾನಿಗಳನ್ನು ಸೃಷ್ಟಿಸಿದೆ. ಒಟ್ಟಾರೆಯಾಗಿ ಅಲೆಕ್ಸ್ ಪೀನಾ ಸೃಷ್ಟಿಸಿರುವ ಈ ದರೋಡೆಯ ಕತೆ ಶುದ್ಧ ಮನೋರಂಜನೆಯಾಗಿ ನಮ್ಮನ್ನು ಸೆಳೆಯುತ್ತದೆ. ಪಾತ್ರಧಾರಿಗಳ ನೋವು, ದುಃಖ, ಹತಾಶೆ, ಮೊಳೆಯುವ ಪ್ರೀತಿ, ಚಾಣಾಕ್ಷ ನಡೆಗಳು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಿರುವ ಘಟನೆಯೊಂದನ್ನು ಸಹ್ಯ ವಸ್ತುವನ್ನಾಗಿ ಜಗತ್ತಿನ ಮುಂದಿಡುವಲ್ಲಿ ಸಫಲವಾಗಿದೆ.
-ಸುಚಿತ್ ಕೋಟ್ಯಾನ್ ಕುರ್ಕಾಲು
ಪತ್ರಿಕೋದ್ಯಮ ಉಪನ್ಯಾಸಕ, ಎಂಜಿಎಂ ಕಾಲೇಜು, ಉಡುಪಿ