ಚಿಕ್ಕಬಳ್ಳಾಪುರ: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ವಿಶ್ವ ಮಾನ್ಯತೆ ಲಭಿಸಿದೆ. ವಿಶ್ವದಲ್ಲಿ ಕನ್ನಡ ಭಾಷೆಯ ಲಿಪಿಗೆ ರಾಣಿಯ ಸ್ಥಾನ ನೀಡಿರುವುದು ಕನ್ನಡಿಗರಾಗಿರುವನಾವೆಲ್ಲರು ಹೆಮ್ಮೆ ಪಡುವ ವಿಷಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹರ್ಷ ವ್ಯಕ್ತಪಡಿಸಿದರು.
ನಗರದ ಸರ್ ಎಂ.ವಿ.ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 65ನೇ ಕನ್ನಡ ರಾಜ್ಯೋತ್ಸವಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವರು, ಸ್ವಾತಂತ್ರ್ಯ ಬಂದ ಮೇಲೆ 5 ಪ್ರಾಂತ್ಯಗಳಿತ್ತು. ಆದರೆ ನಾಡಿನ ಮಹ ನೀಯರು ಹೋರಾಟ ನಡೆಸಿದ ಪರಿಣಾಮ ಕರ್ನಾಟಕ ಏಕೀಕರಣವಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿನ ಕನ್ನಡ ಭಾಷಾ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಮಕ್ಕಳಲ್ಲಿ ಈ ನೆಲದ ಭಾಷೆಯ ಬಗ್ಗೆ ಅರಿವು ಮೂಡಿಸಿ ನಮ್ಮ ಪೂರ್ವಜರ ಪರಂಪರೆ ಬೆಳೆಸುವ ಅಗತ್ಯವಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ: ಸಮಾಜದಲ್ಲಿರುವ ಪ್ರತಿಯೊಬ್ಬರಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಪ್ರಾದೇಶಿಕ ಭಾಷೆಯ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ. ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿ ಆದಾಗ ಮಾತ್ರ ನಮ್ಮ ಆಲೋಚನೆ ಕನ್ನಡದಲ್ಲಿರಲು ಸಾಧ್ಯ ಎನ್ನುವುದು ರಾಷ್ಟ್ರೀಯಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ (ಚಿನ್ನಿ), ತಾಪಂ ಅಧ್ಯಕ್ಷ ರಾಮಸ್ವಾಮಿ, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಪಿ. ಶಿವಶಂಕರ್, ಎಸ್ಪಿ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಮರೇಶ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
8 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ 8 ಸಾಧಕರಿಗೆ 2020ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗೀತ ಕ್ಷೇತ್ರ ಲೀಲಾ ಲಕ್ಷ್ಮೀ ನಾರಾಯಣ, ಕನ್ನಡ ಸೇವಾ ಕ್ಷೇತ್ರದಲ್ಲಿ ಬಿ.ಎ.ಬಾಬಾಜಾನ್, ಪತ್ರಿಕೋದ್ಯಮದಲ್ಲಿ ದಯಾಸಾಗರ್, ಶಿಕ್ಷಣ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಟಿ.ನಾರಾಯಣ ಸ್ವಾಮಿ (ಪಟೇಲ್), ಯೋಗ ಮತ್ತು ಆಯುರ್ವೇದ ಕ್ಷೇತ್ರದಲ್ಲಿ ಗೋವಿಂದಪ್ಪ, ನಾದಸ್ವರ ಮತ್ತು ದೂರದರ್ಶನ ಕಲಾವಿದರಾದ ಎ.ಆವಲಮೂರ್ತಿ, ಕವಿ ಲೇಖಕ ನಂಜಪ್ಪರೆಡ್ಡಿ, ರಂಗಭೂಮಿ ಕಲಾವಿದ ಡಾ.ಸೋ.ಸು.ನಾಗೇಂದ್ರನಾಥ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಅನೇಕ ಮಹತ್ವಪೂರ್ಣ ಕೃತಿಗಳನ್ನು ಹೊಂದಿರುವ ಶ್ರೀಮಂತ ಭಾಷೆ. ಕನ್ನಡಿಗರು ಇಂದು ಅನೇಕ ದೇಶಗಳಲ್ಲಿ ತಮ್ಮದೇ ಆದ ಸಾಧನೆ ಕೈಗೊಂಡಿದ್ದಾರೆ. ಬೇರೆ ದೇಶಗಳಲ್ಲಿದ್ದರೂ ಅವರು ಕನ್ನಡವನ್ನು ಮರೆತಿಲ್ಲ. ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಡಿಜಿಟಲ್ ಗ್ರಂಥಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆ.
–ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ