ಡೊಂಬಿವಲಿ: ರಿಜೆನ್ಸಿ ಕನ್ನಡ ಬಳಗ ಡೊಂಬಿವಲಿ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆಯು ನ. 4 ರಂದು ರಿಜೆನ್ಸಿ ಎಸ್ಟೇಟ್ ಬಡಾವಣೆಯ ಕ್ಲಬ್ ಹೌಸ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮುಂಬಯಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಹಲವು ಸಂಘ ಸಂಸ್ಥೆಗಳು ತೊಡಗಿದ್ದು, ಈ ನಿಟ್ಟಿನಲ್ಲಿ ಡೊಂಬಿವಲಿ ಪೂರ್ವದಲ್ಲಿರುವ ರಿಜೆನ್ಸಿ ಎಸ್ಟೇಡ್‌ನ ರಿಜೆನ್ಸಿ ಕನ್ನಡ ಬಳಗ’ 2014ರಲ್ಲಿ ಸ್ಥಾಪಿತಗೊಂಡು, ಸುಮಾರು ಎಪ್ಪತ್ತು ಕರ್ನಾಟಕ ಮೂಲದ ಕುಟುಂಬಗಳಿರುವ ಈ ಬಡಾವಣೆಯಲ್ಲಿ ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಗುತ್ತಿದೆ.
ಸಂಜೆ 6ರಿಂದ ಸ್ವಾತಿ ಭಟ್ ಅವರ ಗಣಪತಿ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾರಂಭಗೊಂಡಿತು. ಅನಂತರ ವಿವಿಧ ಮನೋರಂಜನ ಕಾರ್ಯಕ್ರಮದಲ್ಲಿ ಕನ್ನಡಿಗರೆಲ್ಲರೂ ಪಾಲ್ಗೊಂಡರು. ಗೌರಿ ಶಾಸ್ತ್ರಿ ಅವರು ಅಚ್ಚ ಕನ್ನಡದ ಹಚ್ಚೇವು ಕನ್ನಡದ ದೀಪ ಹಾಡಿಗೆ ನೃತ್ಯಗೈದರೆ, ಶೀತಲಾ ದೇಶಪಾಂಡೆ, ಪ್ರತಿಮಾ ಹೆಗಡೆ, ಸಾನ್ವಿ ಭಟ್, ಯಾದವಿ ಶೆಟ್ಟಿ, ಧೈರ್ಯ ದೇಶಪಾಂಡೆ ಅವರಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು.
ಅನಘಾ ಹಲಗೇರಿ, ಅಧƒತ್ ಹಲಗೇರಿ, ರಿಷಭ ಕಿಣಿ, ಅಶ್ವಿನಿ ಕುಲಕರ್ಣಿ, ಸಾನ್ವಿ ಶೆಟ್ಟಿ, ಶ್ರಾವಣಿ ಜಾಗಿರ್ದಾರ್, ಡಾ| ವಿಜಯ ಶೆಟ್ಟಿ, ವಾಸಂತಿ ಭಟ್ ಮೊದಲಾದವರಿಂದ ಹಾಡುಗಾರಿಕೆ ನಡೆಯಿತು. ಶಾಂತಾ ಶಾಸ್ತ್ರೀ ಅವರು ಸ್ವರಚಿತ ಕನ್ನಡ ಕವಿತೆಯನ್ನು ಹಾಡಿದರು. ದೂರದರ್ಶ ಕಲಾವಿದ ತೇಜಸ್ ಮಾಲೋದೆ ಅವರಿಂದ ಮ್ಯಾಜಿಕ್ ಶೋ ವಿಶೇಷ ಆಕರ್ಷಣೆಯಾಗಿತ್ತು. ರಿಜೆನ್ಸಿಯ ಯುವಕ ಯುವತಿಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಹಿಮ್ಮೇಳದಲ್ಲಿ ರಘುನಾಥ ರಾವ್ ಮೃದಂಗದಲ್ಲಿ ಮತ್ತು ರಾಘವೇಂದ್ರ ಮೊರಬ್ ಅವರು ಕೀಬೋರ್ಡ್‌ನಲ್ಲಿ ಸಹಕರಿಸಿದರು. ಇದೇ ಸಂದರ್ಭ ರಿಜೆನ್ಸಿ ಕನ್ನಡ ಬಳಗದ ವಿಶೇಷ ಪ್ರತಿಭೆಗಳಾದ ತೇಜಸ್ ಮಾಲೋದೆ ಹಾಗೂ ಸಮಾಜ ಸೇವಕ ಸುರೇಂದ್ರ ನಾಯಕ ಇವರನ್ನು ಬಳಗದ ವತಿಯಿಂದ ಗೌರವಿಸಲಾಯಿತು. ಆರಂಭದಲ್ಲಿ ರಿಜೆನ್ಸಿ ಕನ್ನಡ ಬಳಗದ ಅಧ್ಯಕ್ಷ ಸುರೇಂದ್ರ ಕುಬೇರ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ಶ್ರೀಧರ ಹಲ್ಗೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೃಷ್ಣ ಭಟ್ ವಂದಿಸಿದರು. ಕರ್ನಾಟಕ ಸಂಘ ಡೊಂಬಿವಲಿಯ ಅಧ್ಯಕ್ಷರಾದ ಇಂದ್ರಾಳಿ ದಿವಾಕರ ಶೆಟ್ಟಿ ಹಾಗೂ ರಾಜೀವ ಭಂಡಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ವಾತಿ ಭಟ್ ಮತ್ತು ಜಯಶ್ರೀ ಹಲಗೇರಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.