Advertisement

ನಾಡು-ನುಡಿಯ ಬಗ್ಗೆ ಅಭಿಮಾನ ಮುಖ್ಯ: ದಿವಾಕರ ಸಾಲ್ಯಾನ್‌

08:41 PM Nov 06, 2020 | Suhan S |

ಕಲ್ಯಾಣ್‌, ನ. 5: ಮುಂಬಯಿ ಕನ್ನಡಿಗರು ಮರಾಠಿ ಮಣ್ಣಿನಲ್ಲಿ ನೆಲೆಸಿದರೂ ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ಕರ್ನಾಟಕ ಎನ್ನುವುದು ಶ್ರೀಗಂಧದ ಬೀಡು. ಕನ್ನಡಾಂಭೆಯ ಪುಣ್ಯಭೂಮಿಯಲ್ಲಿ ಹುಟ್ಟಿ ಬೆಳೆದ ನಾವು ಭಾಗ್ಯವಂತರು. ರನ್ನ, ಪಂಪ, ಪೊನ್ನ, ಕುವೆಂಪು, ಶಿವರಾಮ ಕಾರಂತರು, ರಾಣಿ ಚೆನ್ನಮ್ಮ, ಒನಕೆ ಓಬವ್ವರಂತವರು ಮೆರೆದ ನಾಡಿನಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು. ಕನ್ನಡಾಂಬೆಯ ಮಣ್ಣಿನ ಕಂಪು ನಮ್ಮ ಜೀವನದಲ್ಲಿ ನವ ಚೈತನ್ಯವನ್ನು ತುಂಬಿ ನಮ್ಮನ್ನು ಪುಳಕಿತಗೊಳಿಸುತ್ತದೆ. ಸಂಘದಿಂದ ಇಂದು ನೆರವು ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಶಿಕ್ಷಣವನ್ನು ಪಡೆದು, ಉನ್ನತ ಹುದ್ಧೆಯನ್ನು ಪಡೆದು ಇತರರಿಗೆ ಸಹಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಮಿತ್ರ ಮಂಡಳಿ ಕಲ್ಯಾಣ್‌ ಇದರ ಅಧ್ಯಕ್ಷ ದಿವಾಕರ ಸಾಲ್ಯಾನ್‌ ಅವರು ಅಭಿಪ್ರಾಯಿಸಿದರು.

Advertisement

ನ. 1ರಂದು ಕರ್ನಾಟಕ ಮಿತ್ರ ಮಂಡಳಿ ಕಲ್ಯಾಣ್‌ ವತಿಯಿಂದ ಸಂಸ್ಥೆಯ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ಮಿತ್ರ ಮಂಡಳಿಯು ನಾಡು-ನುಡಿಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಸ್ಥಳೀಯ ಕನ್ನಡಿಗರು ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾಡು-ನುಡಿಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಬಿಲ್ಲವ ಶಿರೋಮಣಿ ಜಯ ಸಿ. ಸುವರ್ಣರನ್ನು ನಾವು ಕಳೆದುಕೊಂಡ ದುಃಖ ನಮ್ಮಲ್ಲಿದೆ. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರಾದ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅಗಲಿದ ಅವರ ದಿವ್ಯಾತ್ಮಕ್ಕೆ ಪರಮಾತ್ಮ ಚಿರಶಾಂತಿಯನ್ನು ಕರುಣಿಸಲಿ ಎಂದು ನುಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಮಿತ್ರ ಮಂಡಳ ಕಲ್ಯಾಣ್‌ ಗೌರವಾಧ್ಯಕ್ಷ ಶ್ರೀಧರ ಪೂಜಾರಿ, ಗೌರವ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಗೌರವ ಕೋಶಾಧಿಕಾರಿ ಪ್ರಶಾಂತ್‌ ಪೂಜಾರಿ, ಜತೆ ಕಾರ್ಯದರ್ಶಿ ರಾಜೇಶ್‌ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೇವಕಿ ಪೂಜಾರಿ, ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಕೋಟ್ಯಾನ್‌, ಮಹಿಳಾ ವಿಭಾಗದ ಕಾರ್ಯದರ್ಶಿ ಪ್ರೀತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೇವಕಿ ಪೂಜಾರಿ ಅವರು ಕರ್ನಾಟಕ ಏಕೀಕರಣದ ಬಗ್ಗೆ ಮಾತನಾಡಿ, ಕರ್ನಾಟಕದಿಂದ ಬಂದ ನಾವು ನಾಡಿನ ಸಂಸ್ಕೃತಿಯೊಂದಿಗೆ ಇಲ್ಲಿನ ಸಂಸ್ಕೃತಿಯನ್ನು ಪ್ರೀತಿಸಿ, ಗೌರವಿಸುತ್ತಿದ್ದೇವೆ. ನಾಡು-ನುಡಿಯ ಬಗ್ಗೆ ಮಕ್ಕಳಿಗೆ ಅಭಿಮಾನವನ್ನು ಮೂಡಿಸುವ ಜವಾಬ್ದಾರಿ ನಮ್ಮ ತಾಯಂದಿರ ಮೇಲಿದೆ. ನಾವೆಲ್ಲರೂ ಒಂದಾಗಿ ನಾಡು-ನುಡಿಯ ಬೆಳವಣಿ ಗೆಗೆ ಶ್ರಮಿಸೋಣ ಎಂದರು.

ಜಯ ಸಿ. ಸುವರ್ಣರಿಗೆ ಶ್ರದ್ಧಾಂಜಲಿ ಸಂಘದ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಬಿಲ್ಲವ ಶಿರೋಮಣಿ, ಭಾರತ್‌ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರಿಗೆ ಸಂಸ್ಥೆಯ ವತಿಯಿಂದ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳು ಜಯ ಸಿ. ಸುವರ್ಣರ ಜೀವನ ಸಾಧನೆ, ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿ ನುಡಿನಮನ ಸಲ್ಲಿಸಿದರು.

Advertisement

ಆರ್ಥಿಕ ನೆರವು ವಿತರಣೆ :

ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಪರಿಸರದ 52 ವಿದ್ಯಾರ್ಥಿಗಳಿಗೆ ಜಾತಿ, ಮತ, ಧರ್ಮವನ್ನು ಮರೆತು ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅಲ್ಲದೆ ಐವರು ಕನ್ನಡಿಗರಿಗೆ ವೈದ್ಯಕೀಯ ನೆರವು, ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದರ ಹೆಣ್ಣು ಮಕ್ಕಳ ಮದುವೆಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆಯಲಾಯಿತು. ಸಂಸ್ಥೆಯ ಈ ಸಮಾಜ ಕಲ್ಯಾಣ ಯೋಜನೆಗೆ 1.20 ಲಕ್ಷ ರೂ. ಗಳ ದೇಣಿಗೆಯನ್ನು ನೀಡಿದ ಮುಂಬಯಿಯ ಗಝದರ್‌ ಕುಟುಂಬವನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಲಾಯಿತು. ಸಂಘದ ಸಮಾಜ ಕಲ್ಯಾಣ ಯೋಜನೆಗೆ ಸಹಕರಿಸಿದ ರಾಜೇಶ್‌ ಪೂಜಾರಿ ದಂಪತಿಯನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.

ಪ್ರಶಾಂತಿ ಪೂಜಾರಿ ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಪ್ರೀತಿ ಪೂಜಾರಿ ಅವರು ವಂದಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಯುವ ವಿಭಾಗದ ಪ್ರತೀಕ್‌ ಪೂಜಾರಿ, ಕಾರ್ತಿಕ್‌, ಧೀರಾಜ್‌, ಲತೇಶ್‌ ಕೋಟ್ಯಾನ್‌ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕೊರೊನಾ ಲಾಕ್‌ಡೌನ್‌ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕರ್ನಾಟಕ ಮಿತ್ರ ಮಂಡಳಿಯ ಕಳೆದ ಹಲವಾರು ವರ್ಷಗಳಿಂದ ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳೊಂದಿಗೆ ಪರಿಸರದ ತುಳು, ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಪ್ರತೀ ವರ್ಷ ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಶೈಕ್ಷಣಿಕ ನೆರವು, ವೈದ್ಯಕೀಯ ನೆರವು ನೀಡಿ ಸಹಕರಿಸುತ್ತಿದೆ. ಬಿಲ್ಲವ ಸಮಾಜದ ಧುರೀಣ ಜಯ ಸಿ. ಸುವರ್ಣ ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಮಾರ್ಗದರ್ಶನ, ತತ್ವ ಸಂದೇಶಗಳು ಯುವಪೀಳಿಗೆಗೆ ಮಾದರಿಯಾಗಿದೆ. ಅಗಲಿದ ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ. -ಶ್ರೀಧರ ಪೂಜಾರಿ, ಗೌರವಾಧ್ಯಕ್ಷ, ಕರ್ನಾಟಕ ಮಿತ್ರ ಮಂಡಳಿ ಕಲ್ಯಾಣ್‌

Advertisement

Udayavani is now on Telegram. Click here to join our channel and stay updated with the latest news.

Next