ಚಿಕ್ಕಬಳ್ಳಾಪುರ: ಮೈಸೂರು ರಾಜ್ಯ ಕರ್ನಾಟಕ ಎಂದು ಮರು ನಾಮಕರಣವಾಗಿ 50 ವರ್ಷ ಸಂದ ಸಂಭ್ರಮಕ್ಕೆ ಸಾಕ್ಷಿಯಾದ ಈ ಬಾರಿ ಕನ್ನಡ ರಾಜ್ಯೋತ್ಸವ ಜಿಲ್ಲೆಯ ಪಾಲಿಗೆ ಮಾತ್ರ ಸಂಭ್ರಮ ಕಾಣದೇ ಕನ್ನಡದ ನಾಡು ಹಬ್ಬ ಕಳೆಗುಂದಿತು.
ಹೌದು, ಜಿಲ್ಲಾ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ರಾಜ್ಯೋತ್ಸವ ಕಾರ್ಯಕ್ರಮ ಅಂತೂ ಕನ್ನಡ ನಾಡು, ನುಡಿ, ನೆಲ, ಜಲ. ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಇಂದಿನ ಪೀಳಿಗೆಯಲ್ಲಿ ಸಾರುವಲ್ಲಿ ವಿಫಲ ಆಯಿತು.
ಎರಡೇ ಸ್ತಬ್ಧ ಚಿತ್ರಗಳು: ಜಿಲ್ಲಾ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವಕ್ಕೆ ಆಗಮಿಸಿದ್ದು ಕೇವಲ ಎರಡೇ ಸ್ತಬ್ಧಚಿತ್ರಗಳು ಮಾತ್ರ. ಒಂದು ಕೆಎಸ್‌ಆರ್‌ಟಿಸಿಯಿಂದ ಚಂದ್ರಯಾನ-3 ಕಲಾಕೃತಿ ಮಾತ್ರ ಗಮನ ಸೆಳೆದಿದ್ದು ಬಿಟ್ಟರೆ ಆರೋಗ್ಯ ಇಲಾಖೆ ಸ್ತಬ್ಧ ಚಿತ್ರ ಕಾಟಾಚಾರ ಎಂಬಂತೆ ಸಿದ್ಧಪಡಿಸಿಕೊಂಡು ಬರಲಾಗಿತ್ತು. ಪೊಲೀಸರ ಪಥ ಸಂಚಲಕ ಆಕರ್ಷಕವಾಗಿದ್ದು ಬಿಟ್ಟರೆ ಕನ್ನಡ ನಾಡು, ನುಡಿ ವಿಚಾರದಲ್ಲಿ ಕನ್ನಡದ ಕಂಪು ಪಸರಿಸಬೇಕಿದ್ದರಾಜ್ಯೋತ್ಸವ ಕಾರ್ಯಕ್ರಮ ಜಿಲ್ಲಾ ಕೇಂದ್ರದಲ್ಲಿಹೆಚ್ಚು ಕಳೆಗುಂದಿದ್ದು ಕನ್ನಡಪ್ರೇಮಿಗಳಲ್ಲಿ ತೀವ್ರ ಬೇಸರ ಮೂಡಿಸಿತು.
ಜಿಲ್ಲಾಡಳಿತದ ವೈಫಲ್ಯ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸುವಲ್ಲಿ ಜಿಲ್ಲಾಡಳಿತ ವೈಫಲ್ಯತೆ ಎದ್ದು ಕಾಣುತ್ತಿತ್ತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣವಾಗಿ 50 ವರ್ಷ ಸಂದಿರುವ ಸಂದರ್ಭದಲ್ಲಿ ಅದ್ಧೂರಿ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮಗಳಿಗೆ ಸಾಕ್ಷಿ ಆಗಬೇಕಿದ್ದ ರಾಜ್ಯೋತ್ಸವ ಜಿಲ್ಲಾ ಕೇಂದ್ರದಲ್ಲಿ ಅಂತೂ ತೀವ್ರ ನಿರಾಸೆ ಮೂಡಿಸಿತು. ಅಂತಃಕರಣದ ಬದಲಾಗಿ ಶಿಷ್ಟಾಚಾರ ಎಂಬಂತೆ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಡಿ ಜಿಲ್ಲಾಡಳಿತ ಕೈ ತೊಳೆದುಕೊಂಡಿತು.
ಕುರ್ಚಿಗಳ ಖಾಲಿ ಖಾಲಿ: ಜಿಲ್ಲಾ ಉಸ್ತುವಾರಿ ಸಚಿವರ ಭಾಷಣದ ವೇಳೆಯೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಬೆರಣಿಕೆಯಷ್ಟು ಮಂದಿ ಕೂತಿದ್ದು, ಪ್ರೇಕ್ಷಕರಿಗೆ ಹಾಕಲಾಗಿದ್ದ ಕುರ್ಚಿಗಳು ಖಾಲಿ ಖಾಲಿ ಕಂಡು ಬಂದವು. ಜಿಲ್ಲಾ ಹಾಗೂ ಚಿಕ್ಕಬಳ್ಳಾಪುರ ತಾಲೂಕು ಮಟ್ಟದ ಅಧಿಕಾರಿಗಳು ಮಾತ್ರ ಕಂಡು ಬಂದಿದ್ದು ಸಾರ್ವಜನಿಕರ ಪಾಲ್ಗೊಳ್ಳುವಿಕೆ ತೀರಾ ಕಡಿಮೆ ಇತ್ತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರ ಮಗಳ ವೀಕ್ಷಣೆಗೂ ಪ್ರೇಕ್ಷಕರ ಕೊರತೆ ಎದ್ದು ಕಾಣುವ ಮೂಲಕ ಒಟ್ಟಾರೆ ಜಿಲ್ಲಾ ಕೇಂದ್ರದಲ್ಲಿ ರಾಜ್ಯೋತ್ಸವ ನಿರಾಸೆ ಮೂಡಿಸಿತು.
ಪ್ರದೀಪ್ ಈಶ್ವರ್‌ರಿಂದ ಹಳೇ ಡೈಲಾಗ್!: ಇನ್ನೂ ಶಾಸಕ ಪ್ರದೀಪ್ ಈಶ್ವರ್ ಕನ್ನಡ ನಾಡು, ನುಡಿ ಬಗ್ಗೆ ಹೆಚ್ಚು ಮಾತನಾಡದೇ ಎಂದಿನಂತೆ ತಮ್ಮ ಹಳೇ ಡೈಲಾಗ್‌ಗಳನ್ನೇ ಹೇಳಿ ತಮ್ಮ ಸರದಿಯ ಭಾಷಣ ಮುಗಿಸಿದರು.ಅಲ್ಲದೇ ಕಾರ್ಯಕ್ರಮದ ಪೂರ್ಣವಾಗುವವರೆಗೂ ನಿಲ್ಲದೇ ಅರ್ಧದಲ್ಲೇ ಸಭೆಯಿಂದ ಹೋದರು. ಸಂಸದ ಬಿ.ಎನ್. ಬಚ್ಚೇಗೌಡರು ಕರ್ನಾಟಕ ಏಕೀಕರಣದ ಬಗ್ಗೆ ಮಾತನಾಡಿದ್ದು ಬಿಟ್ಟರೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಹೆಚ್ಚು ಕನ್ನಡ ನಾಡು, ನುಡಿ ಬಗ್ಗೆ ಮಾತನಾಡಲಿಲ್ಲ.
–ಕಾಗತಿ ನಾಗರಾಜಪ್ಪ