ದುಬಾೖ: ಅಬುಧಾಬಿ, ಶಾರ್ಜಾ ಕರ್ನಾಟಕ ಸಂಘ, ಕನ್ನಡಿಗರು ದುಬಾೖ ಮತ್ತು ಆಲ್ ಐನ್ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ನ. 6ರಂದು ಯು.ಎ.ಇ. ಯಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವವನ್ನು ಅಂತರ್ಜಾಲದ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ಕಳೆದ ಮೂರ್‍ನಾಲ್ಕು ದಶಕಗಳಿಂದ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದ ಕರ್ನಾಟಕ ರಾಜ್ಯೋತ್ಸವವನ್ನು ಈ ಬಾರಿ ಕೋವಿಡ್- 19ರ ಲಾಕ್‌ಡೌನ್‌ನಿಂದಾಗಿ ವರ್ಚುವಲ್ ಕಾರ್ಯಕ್ರಮವನ್ನಾಗಿ ಆಚರಿಸಲಾಯಿತು. ಸಂಜೆ 4 ಗಂಟೆಗೆ ಆರಂಭವಾದ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಡಾ| ಹೆಗ್ಗಡೆಯವರು ಉದ್ಘಾಟಿಸಿದರು. ಶಾರ್ಜಾ ಕರ್ನಾಟಕ ಸಂಘದ ವತಿಯಿಂದ ಧ್ವಜಾರೋಹಣ ನೆರವೇರಿತು. ದುಬಾೖ ಕನ್ನಡಿಗರಿಂದ ಕನ್ನಡ ನಾಡ ಗೀತೆ ಪ್ರಸ್ತುತಪಡಿಸಿದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಆನಂದ್ ಬೈಲೂರ್, ಕನ್ನಡಿಗರು ದುಬಾೖ ಅಧ್ಯಕ್ಷೆ ಉಮಾದೇವಿ ವಿದ್ಯಾಧರ್ ಮತ್ತು ಅಲ್ ಐನ್ ಕನ್ನಡ ಸಂಘದ ಅಧ್ಯಕ್ಷರಾದ ವಿಮಲ್ ಕುಮಾರ್ ಯು.ಎ.ಇ.ಯ ನಾಲ್ಕು ವಿಭಾಗಗಳಲ್ಲಿ ಜ್ಯೋತಿ ಬೆಳಗಿಸಿ ರಾಜ್ಯೋತ್ಸವ ಸಂದೇಶ ನೀಡಿದರು.
ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಹೆಜ್ಜೆ ಗುರುತುಗಳನ್ನು ಸಂಕ್ಷಿಪ್ತವಾಗಿ ಸರ್ವೋತ್ತಮ ಶೆಟ್ಟಿ ವಿವರಿಸಿದರು. ಇಂಡಿಯ ಸೋಶಿಯಲ್ ಸೆಂಟರ್‌ನ ಅಧ್ಯಕ್ಷ ಯೋಗೀಶ್ ಪ್ರಭು, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಕರ್ನಾಟಕ ಸಂಘ ಶಾರ್ಜಾದ ಉಪಾಧ್ಯಕ್ಷ ಎಂ.ಇ. ಮೂಳೂರ್ ಮಾತನಾಡಿದರು.
ಅನಂತರ ಪ್ರಸಾರವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಲ್ಕು ಸಂಘಟನೆಗಳ ವತಿಯಿಂದ ಸ್ವಾಗತ ನೃತ್ಯ, ಮಕ್ಕಳಿಂದ ಸಮೂಹ ಜಾನಪದ ಗೀತೆಗಾಯನ, ನೃತ್ಯ ಪ್ರದರ್ಶನ, ಹರೀಶ್ ಶೇರಿಗಾರ್ ಮತ್ತು ಅಕ್ಷತಾ ಅವರಿಂದ ಕನ್ನಡ ಯುಗಳ ಗೀತೆ ಪ್ರಸ್ತುತಗೊಂಡವು. ಪುಟ್ಟ ಮಕ್ಕಳೂ ಸಮೂಹ ನೃತ್ಯ ಪ್ರದರ್ಶನ ನೀಡಿದರು.
ಆರತಿ ಅಡಿಗ ಸ್ವಾಗತಿಸಿದರು. ಮನೋಹರ್ ತೋನ್ಸೆ ವಂದಿಸಿದರು. ನೇರ ಪ್ರಸಾರದ ತಾಂತ್ರಿಕ ವರ್ಗದಲ್ಲಿ ಆರತಿ ಅಡಿಗ ನಿರೂಪಕಿಯಾಗಿ, ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ.ಕೆ. ಗಣೇಶ್ ರೈ ಭಿತ್ತಿ ಚಿತ್ರ ವಿನ್ಯಾಸ ಮತ್ತು ಸಂಕಲನ, ವಿಕಾಸ್ ಶೆಟ್ಟಿ ನೇರ ಪ್ರಸಾರ ಮತ್ತು ದೀಪಕ್ ಸೋಮಶೇಖರ್ ಸಂಕಲನ ಮತ್ತು ನೇರ ಪ್ರಸಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಯು.ಎ.ಇ. ಯಿಂದ ಅಯೋಜಿಸಲಾದ ಕಾರ್ಯ ಕ್ರಮವನ್ನು ಲಂಡನ್ ಹಾಗೂ ಭಾರತದ ಕೆಲವು ದೃಶ್ಯ ಮಾಧ್ಯಮಗಳು ಯುಟ್ಯೂಬ್, ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರ ಮಾಡಿದ್ದರಿಂದ ವಿಶ್ವಾದ್ಯಂತ ಕನ್ನಡಿಗರು ಮನೆಮಂದಿಯೊಂದಿಗೆ ವೀಕ್ಷಿಸುವಂತಾಯಿತು. ವಿದೇಶಿ ನೆಲದಲ್ಲಿ ಪ್ರಥಮ ಬಾರಿಗೆ ವರ್ಚುವಲ್ ಮೂಲಕ ಪ್ರಸಾರವಾದ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.