ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಗೂ ಅದ್ಭುತ ಹಾಸ್ಯ ನಟರಲ್ಲಿ ಒಬ್ಬರಾಗಿದ್ದವರು ಬಾಲಣ್ಣ..ಹೌದು ಟಿಎನ್ ಬಾಲಕೃಷ್ಣ. ಕಿವಿ ಸರಿಯಾಗಿ ಕೇಳಿಸದಿದ್ದರೂ ಕೂಡಾ ಬರೇ ಬಾಯಿ ಚಲನೆಯ ಮೂಲಕವೇ ಶಬ್ದವನ್ನು ಗ್ರಹಿಸಿ ನಿರರ್ಗಳವಾಗಿ ಡೈಲಾಗ್ ಹೇಳುತ್ತಿದ್ದದ್ದು ಬಾಲಣ್ಣನವರ ಪ್ರತಿಭೆಗೆ ಸಾಕ್ಷಿಯಾಗಿದೆ. ಹೀರೋ, ವಿಲನ್, ಹಾಸ್ಯ ನಟನಾಗಿ, ಉತ್ತಮ ತಂದೆಯ ಪಾತ್ರ ಸೇರಿದಂತೆ ಬರೋಬ್ಬರಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಕೀರ್ತಿ ಬಾಲಣ್ಣನವರದ್ದು.
ಭಿಕ್ಷೆ ಬೇಡಿ ಬದುಕುತ್ತಿದ್ದ ತಾಯಿ ಬಾಲಕೃಷ್ಣನನ್ನು ವ್ಯಾಪಾರಿಗೆ ಮಾರಿಬಿಟ್ಟಿದ್ದರು!
ಹಾಸನ ಜಿಲ್ಲೆಯ ಅರಸೀಕರೆಯಲ್ಲಿ ಬಾಲಕೃಷ್ಣ ಅವರು ಜನಿಸಿದ್ದರು. ಕಿತ್ತು ತಿನ್ನುವಂತಹ ಬಡತನ..ತಂದೆ, ತಾಯಿ ದಿನಗೂಲಿ ನೌಕರಿ ಮಾಡಿ ಬದುಕುತ್ತಿದ್ದರು. ಈ ದಂಪತಿಯ ಒಬ್ಬನೇ ಒಬ್ಬ ಮಗ ಬಾಲಕೃಷ್ಣ. ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿ ಎಂಬಂತೆ ಕಷ್ಟ ಇವರನ್ನು ನಕ್ಷತ್ರಿಕನಂತೆ ಕಾಡುತ್ತಲೇ ಇತ್ತು. ಏಕಾಏಕಿ ತಂದೆಯ ಖಾಯಿಲೆ ವಿಪರೀತ ಹಂತ ತಲುಪಿದಾಗ ಕೈಯಲ್ಲಿ ಹಣವಿಲ್ಲದೆ ತಾಯಿ ಕಂಡ, ಕಂಡಲ್ಲಿ ಭಿಕ್ಷೆ ಬೇಡಿ ಹಣ ಹೊಂದಿಸುತ್ತಿದ್ದರಂತೆ. ಕೊನೆಗೆ ದಿಕ್ಕು ತೋಚದ ತಾಯಿ ತನ್ನ ಕರುಳು ಕುಡಿ, ಒಬ್ಬನೇ ಒಬ್ಬ ಮಗ ಬಾಲಕೃಷ್ಣನನ್ನು ಅರಸೀಕೆರೆಯ ಮಂಡಿ ವ್ಯಾಪಾರಿಯ ಪತ್ನಿಗೆ ಕೇವಲ 8 ರೂಪಾಯಿಗೆ ಮಾರಿಬಿಟ್ಟಿದ್ದರು!
ಕೊನೆಗೆ ಆ ಸಾಕುತಾಯಿಯೇ ಬಾಲಕೃಷ್ಣನನ್ನು ಅರಸೀಕೆರೆ ಶಾಲೆಗೆ ಸೇರಿಸಿದ್ದರು. ಪಾಪಿ ಹೋದಲ್ಲೇ ಮೊಣಕಾಲುದ್ದ ನೀರು ಎಂಬಂತೆ 8ನೇ ವಯಸ್ಸಿಗೆ ಬಾಲಕೃಷ್ಣ ಅವರ ಶ್ರವಣಶಕ್ತಿ ಹೋಗಿತ್ತು. ಇದರಿಂದಾಗಿ ಕಲಿಕೆ ಕಷ್ಟವಾಯಿತು..ಬಳಿಕ ಈ ಬಾಲಕನ ಮನಸ್ಸು ಹೊರಳಿದ್ದು ನಾಟಕ ಕಂಪನಿಯತ್ತ…
ಸಾಕು ತಾಯಿಯೂ ಮನೆಯಿಂದ ಹೊರಹಾಕಿದ್ದಳು..ಜಗತ್ತೇ ಬಾಲಣ್ಣನ ಮನೆಯಾಯ್ತು!
ಸ್ನೇಹಿತರ ಜೊತೆಗೂಡಿ ಅಡ್ಡಾಡುತ್ತಿದ್ದ ಬಾಲಣ್ಣ ಒಮ್ಮೆ ಸಾಕು ತಂದೆಯ ಜೇಬಿನಿಂದ ದುಡ್ಡು ಕದ್ದು ಸಿಕ್ಕಿ ಬಿದ್ದಾಗ ಸಾಕು ತಾಯಿ ಮನೆಯಿಂದಲೇ ಹೊರಹಾಕಿಬಿಟ್ಟಿದ್ದರು. ಅಲ್ಲಿಗೆ ಸಾಕು ತಾಯಿಯ ಮನೆಯ ಋಣವೂ ಮುಗಿದು ಹೋಗಿತ್ತು. ಅಲ್ಲಿಂದ ನಾಟಕ ಕಂಪನಿಯೇ ಬಾಲಣ್ಣನಿಗೆ ಮನೆ, ಕಚೇರಿ, ಅಪ್ಪ, ಅಮ್ಮ, ಬಂಧು, ಬಳಗ ಎಲ್ಲವೂ ಆಗಿ ಬಿಟ್ಟಿತ್ತು. ಹೌದು ಆರಂಭಿಕವಾಗಿ ಬಾಲಣ್ಣ ನಾಟಕ ಕಂಪನಿಯ ಪರದೆಯ ಪೇಯಿಂಟಿಂಗ್ ಮಾಡುವ ಕೆಲಸ ಮಾಡಿದ್ದರು. ಬಳಿಕ ದಿನಗೂಲಿಯಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು. ಪೋಸ್ಟರ್ ಬಾಯ್ ಆಗಿ, ಹಾರ್ಮೋನಿಯಂ ನುಡಿಸುವವರಾಗಿ,ಪರದೆ ಎಳೆಯುವವರಾಗಿ ಹೀಗೆ ಶ್ರಮದ ಬದುಕಿನಲ್ಲೇ ಕಾಲಕಳೆಯುತ್ತಿದ್ದ ಬಾಲಣ್ಣ ರಂಗಭೂಮಿಗೆ ಕಾಲಿಟ್ಟುಬಿಟ್ಟಿದ್ದರು.
ರಂಗಭೂಮಿಯಲ್ಲಿ ಅಂದಿನ ದಿನಗಳಲ್ಲಿ ರಾಜ್ ಕುಮಾರ್, ಜಿವಿ ಅಯ್ಯರ್ ಮತ್ತು ನರಸಿಂಹ ರಾಜು ಒಟ್ಟಿಗೆ ಗುಬ್ಬಿ ಕಂಪನಿಯಲ್ಲಿ ಇದ್ದು, ಒಂದು ಹಂತದಲ್ಲಿ ಒಟ್ಟಿಗೆ ಚಿತ್ರರಂಗ ಪ್ರವೇಶ ಮಾಡಿದ್ದರು.
ರಂಗಭೂಮಿಯಿಂದ ಚಿತ್ರರಂಗದವರೆಗೆ ನಟಿಸಿ ಖ್ಯಾತರಾಗಿಬಿಟ್ಟರು!
ಕೃಷ್ಣಲೀಲಾ ಬಾಲಣ್ಣ ನಟಿಸಿದ್ದ ಮೊತ್ತ ಮೊದಲ ನಾಟಕ. ಲಕ್ಷ್ಮಾಸನಾ ನಾಟಕ ಮಂಡಳಿ, ಗೌರಿ ಶಂಕರ ನಾಟಕ ಮಂಡಳಿ ಬಳಿಕ ಅಂದಿನ ಜನಪ್ರಿಯ ಗುಬ್ಬಿ ವೀರಣ್ಣ ರಂಗಭೂಮಿಗೆ ಪದಾರ್ಪಣೆ ಮಾಡಿದ್ದರು. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲ ನೀಲಾಂಜನೆ, ಚಿತ್ರಾಂಗದೆ ಸೇರಿದಂತೆ ಸುಮಾರು 50 ನಾಟಕಗಳನ್ನು ಬರೆದಿದ್ದರು. ಹೀಗೆ ಒಮ್ಮೆ ಪ್ರಸಿದ್ಧ ನಿರ್ದೇಶಕರಾದ ಬಿಆರ್ ಪಂತುಲು ಅವರು ನಾಟಕ ಕಂಪನಿಗೆ ಬಂದಿದ್ದಾಗ ಬಾಲಣ್ಣನವರ ನಟನೆ ಕಂಡು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಆಹ್ವಾನ ಕೊಟ್ಟುಬಿಟ್ಟಿದ್ದರು.
1943ರಲ್ಲಿ ರಾಧಾರಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಾಲಣ್ಣ ಸಂತ ತುಕಾರಾಂ, ಸ್ಕೂಲ್ ಮಾಸ್ಟರ್, ಗಂಧದ ಗುಡಿ, ಸಾಕು ಮಗಳು, ಗುಣ ನೋಡಿ ಹೆಣ್ಣು ಕೊಡು, ಪರಾಜಿತೆ, ಬೆಂಗಳೂರು ಭೂತ, ಕಸ್ತೂರಿ ವಿಜಯ ಸೇರಿದಂತೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ವಿವಿಧ ಮತ್ತು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಸಿಕರ ಮನದಾಳದಲ್ಲಿ ಬೇರೂರಿಬಿಟ್ಟಿದ್ದರು.
ಪರ ಭಾಷೆಯ ಸ್ಟುಡಿಯೋದವರು ಕನ್ನಡ ಚಿತ್ರಗಳ ಬಗ್ಗೆ ತೋರಿಸುತ್ತಿದ್ದ ನಿರ್ಲಕ್ಷ್ಯ ಮತ್ತು ಕನ್ನಡಿಗರಿಗೆ ಲಾಭವಾಗಲಿ ಎಂಬ ದೃಷ್ಟಿಕೋನದಿಂದ ತಾವೇ ಸ್ವಂತ ಮುಂದಾಳತ್ವ ವಹಿಸಿ ಸಾರ್ವಜನಿಕರಿಂದ 100 ರೂ. ವಂತಿಗೆ ಸಂಗ್ರಹಿಸಿ ಸ್ಟುಡಿಯೋ ಮಾಡಿ, ಅದಕ್ಕೆ ಅಭಿಮಾನ್ ಎಂದು ಹೆಸರಿಟ್ಟರು. ಆದರೆ ಆರಂಭಿಕವಾಗಿ ಅಭಿಮಾನ್ ಸ್ಟುಡಿಯೋ ತುಂಬಾ ತೊಂದರೆ ಅನುಭವಿಸಿತು. ಅವರ ಉತ್ಸಾಹಕ್ಕೆ ಸರ್ಕಾರ ಕೂಡಾ ಕೈಜೋಡಿಸಲಿಲ್ಲ, ಕನ್ನಡ ಚಿತ್ರರಂಗದವರು ತನ್ನ ಕೈಹಿಡಿಯುತ್ತಾರೆಂದು ಸಾಲ ಮಾಡಿದ್ದ ಬಾಲಣ್ಣಗೆ..ವ್ಯವಹಾರ ಜ್ಞಾನವೂ ಕೈಕೊಟ್ಟಿತ್ತು. ಅದರ ಪರಿಣಾಮ ಬಡ್ಡಿ ಸಾಲ ಕಟ್ಟುವುದರಲ್ಲಿಯೇ ಜೀವನ ಕಳೆಯುವಂತಾಗಿತ್ತು. ಸ್ಟುಡಿಯೋ ಯಶಸ್ಸಾಗದೇ ಬಾಲಣ್ಣ ನೋವಿನಲ್ಲೇ ಕೊನೆಯುಸಿರೆಳೆದಿದ್ದರು. ಇಂದು ಅಭಿಮಾನ್ ಸ್ಟುಡಿಯೋದಲ್ಲಿ ಟಿವಿ ಸೀರಿಯಲ್ ನಿರ್ಮಾಣವಾಗುತ್ತಿದೆ.
ಕಷ್ಟ ಕಾರ್ಪಣ್ಯದಲ್ಲೇ ಬದುಕನ್ನು ಕಳೆದು ಬೆಳ್ಳಿತೆರೆಯಲ್ಲಿ ಹೆಸರುಗಳಿಸಿದ್ದ ಬಾಲಣ್ಣ 1995ರ ಜುಲೈ 19ರಂದು ಕ್ಯಾನ್ಸರ್ ನಿಂದ ವಿಧಿವಶರಾಗಿದ್ದರು. ಇಂದಿಗೂ ಬಾಲಣ್ಣ ಕೋಟ್ಯಂತರ ಕನ್ನಡಿಗರ ಮನದಾಳದಲ್ಲಿ ಅಜರಾಮರರಾಗಿದ್ದಾರೆ.