Advertisement

ಇಲ್ಲಿ ಕನ್ನಡ ಫ‌ಲಕಗಳು ಮಾತ್ರ ; ಕನ್ನಡ ಮಾತಿಲ್ಲ!

04:13 PM Nov 04, 2019 | Suhan S |

ಬೆಂಗಳೂರು: ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ಒಂದು. ಅಷ್ಟೇ ವೇಗದಲ್ಲಿ ಇಲ್ಲಿ ಕನ್ನಡವೂ ಕರಗುತ್ತಿದೆ!

Advertisement

ಬೆಂಗಳೂರು ಮೆಟ್ರೋ ಪಾಲಿಟನ್‌ ಸಿಟಿಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅದಕ್ಕೆ ತಕ್ಕಂತೆ ನೂರಾರು ಪ್ರತಿಷ್ಠಿತ ಹೊಟೇಲ್‌, ಕಾರ್ಖಾನೆಗಳು, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು, ಹತ್ತಾರು ಸಾರ್ವಜನಿಕ ಸೇವಾ ಸಂಸ್ಥೆಗಳು ತಲೆಯೆತ್ತಿವೆ. ಆದರೆ, ಅಲ್ಲೆಲ್ಲಾ “ಕನ್ನಡ” ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಕನ್ನಡ ನಾಮಫ‌ಲಕಗಳಿವೆ, ಕೆಳದರ್ಜೆ ಸಿಬ್ಬಂದಿಯಲ್ಲಿ ಕನ್ನಡಿಗರು ಕೆಲಸ ಮಾಡುತ್ತಾರೆ, ಅಪರೂಪಕ್ಕೆ ಕನ್ನಡ ಪದಗಳು ಕೇಳಿಸುತ್ತವೆ. ಆದರೆ, ಅಲ್ಲಿ ವಾಸ್ತವಿಕವಾಗಿ ಕಂಡು ಬರುವುದು ಇಂಗ್ಲಿಷ್‌ ಸೇರಿದಂತೆ ಅನ್ಯ ಭಾಷೆಯೇ ಆಗಿದೆ.

ಕನ್ನಡ ಬಳಕೆಯೇ ಇಲ್ಲ: ನಗರದಲ್ಲಿ ಅಂದಾಜು 100ಕ್ಕೂ ಹೆಚ್ಚು ತಾರಾ ಹೋಟೆಲ್‌ಗ‌ಳಿವೆ. ಅವುಗಳ ಹೊರಗಿನ ನಾಮಫ‌ಲಕ ಬಿಟ್ಟರೆ ಉಳಿದದ್ದೆಲ್ಲವೂ ಅನ್ಯ ಭಾಷೆಯೇ. ಆ ಹೋಟೆಲ್‌ಗ‌ಳಲ್ಲಿ ಸಹಾಯಕ್ಕೆ ವಿವಿಧ ಭಾಷೆಬಲ್ಲ ಸಹಾಯಕರನ್ನು ಇಟ್ಟಿರುತ್ತಾರೆ. ಅವರಿಗೆ ಕನ್ನಡ ಹೊರತು ಪಡಿಸಿ ಮಿಕ್ಕೆಲ್ಲಾ ಭಾಷೆ ಬರುತ್ತದೆ. ಬಹುತೇಕ ಹೋಟೆಲ್‌ಗ‌ಳಲ್ಲಿ ಕನ್ನಡ ಬಳಕೆಯೇ ಇಲ್ಲದಂತಾಗಿದೆ. ಅನ್ಯ ಭಾಷೆಯ ಆದ್ಯತೆಯೇ ಹೆಚ್ಚಿದೆ. ಕನ್ನಡ ಕುರಿತು ಪ್ರಶ್ನಿಸಿದರೆ ಹೊರ ಭಾಗದವರು ಹೆಚ್ಚು ಬರುತ್ತಾರೆ, ಹೀಗಾಗಿ, ಕನ್ನಡ ಅವಶ್ಯಕತೆ ಕಡಿಮೆ ಎನ್ನುತ್ತಾರೆ ಕೆಲ ಹೋಟೆಲ್‌ ಸಿಬ್ಬಂದಿ. ವಿಚಿತ್ರವೆಂದರೆ ಆ ಸಿಬ್ಬಂದಿಗೆ ಕನ್ನಡವೇ ಬರುವುದಿಲ್ಲ! “ಪಂಚತಾರಾ ಹೋಟೆಲ್‌ಗ‌ಳಲ್ಲಿ ಕನ್ನಡ ಬಿಟ್ಟು ಎಲ್ಲವೂ ಸಿಗುತ್ತದೆ. ನಾಡಿನ ಭಾಷೆಯನ್ನು, ಸಂಸ್ಕೃತಿಯನ್ನು ಇಂಥ ಸ್ಥಳಗಳಲ್ಲಿ ಬಳಸಿದಾಗ ಮಾತ್ರ ಕನ್ನಡ ಬೆಳೆಯಲು, ಇತರರಿಗೆ ಪರಿಚಯವಾಗುತ್ತದೆ’ ಎನ್ನುತ್ತಾರೆ ಕನ್ನಡ ಮೂಲದ ವಿದೇಶಿ ನಿವಾಸಿ ಕೃಷ್ಣಕಾಂತ್‌.

ಆಚರಣೆಗಷ್ಟೇ ಸೀಮಿತ: ಬಹುತೇಕ ಮಾಹಿತಿ ತಂತ್ರಜ್ಞಾನ (ಐಟಿ) ಸಂಸ್ಥೆ, ಕೇಂದ್ರ ಸರ್ಕಾರ ಮೂಲದ ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಕನ್ನಡ ನವೆಂಬರ್‌ 1 ರಂದು ಮಾತ್ರ ಆಚರಣೆ ಸೀಮಿತವಾಗಿದೆ. ಅಂದು ಸಂಸ್ಥೆಯ ಕನ್ನಡ ಸಿಬ್ಬಂದಿ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿಗಳನ್ನು ಕೈಗೊಳ್ಳುತ್ತಾರೆ. ಆ ನಂತರ ಕನ್ನಡ ನೆನಪಾಗುವುದು ಮತ್ತೆ ನವೆಂಬರ್‌ ಒಂದರಂದೇ. ಕನ್ನಡ ಕಲಿಕಾ ಶಿಬಿರ, ತರಬೇತಿ ನಡೆಸುವುದಿಲ್ಲ. ಕೆಲವರಿಗೆ ಕನ್ನಡ ಕಲಿಕೆ ಆಸಕ್ತಿ ಇದ್ದರೂ, ಅಗತ್ಯತೆ ಏನಿದೆ ಎಂದು ಕೇಳಿ ಕಲಿಯಲು ಅವಕಾಶ ನೀಡುವುದಿಲ್ಲ.

ಇಲ್ಲಿ ಕನ್ನಡಿಗರೇ ಅನ್ಯರಂತಾಗುತ್ತಾರೆ! : ಬೆಂಗಳೂರು ನಗರದ ಕೆಲ ಪ್ರದೇಶಗಳಿಗೆ ಹೋದರೆ ಇಂದಿಗೂ ಕನ್ನಡಿಗರು ಅನ್ಯರಂತಾಗುತ್ತಾರೆ. ಪ್ರಮುಖವಾಗಿ ಹಳೇ ಮದ್ರಾಸು ಭಾಗಗಳಾದ ಹಲಸೂರು, ಇಂದಿರಾನಗರ, ಆನೆಪಾಳ್ಯ, ಆಸ್ಟಿನ್‌ ಟೌನ್‌, ವಿಕ್ಟೋರಿಯಾ ಲೇಔಟ್‌, ಪ್ರೇಜರ್‌ಟೌನ್‌, ಕಾನ್ಸ್‌ಟೌನ್‌, ಗರುಡಾಚಾರ ಪಾಳ್ಯದಲ್ಲಿ ಹೆಚ್ಚು ತಮಿಳರು ನೆಲೆಸಿದ್ದಾರೆ. ಬಹುತೇಕ ಭಾಗದಲ್ಲಿ ಹೆಚ್ಚು ತಮಿಳನ್ನೇ ಬಳಸಲಾಗುತ್ತದೆ. ಇಲ್ಲಿ ಬಹುತೇಕ ವ್ಯವಹಾರ ವ್ಯಾಪಾರ ನಡೆಯುವುದು ತಮಿಳಿನಲ್ಲೇ. ಹೀಗೆಯೇ ಶಿವಾಜಿನಗರ, ಪಾದರಾಯನಪುರದಲ್ಲಿ ಉರ್ದು, ಮಾರತಹಳ್ಳಿ, ಬೊಮ್ಮನಹಳ್ಳಿ, ಐಟಿಪಿಎಲ್‌, ಕಾಡುಗೋಡಿ, ವೈಟ್‌ಪೀಲ್ಡ್‌, ಮಹಾದೇವಪುರ, ರಾಮಮೂರ್ತಿನಗರ, ಹೆಣ್ಣೂರು, ಕಲ್ಯಾಣ ನಗರಭಾಗಗಳಲ್ಲಿ ತೆಲುಗು ಭಾಷೆ ಹೆಚ್ಚು ಬಳಕೆಯಾಗುತ್ತದೆ. ಹೀಗೆ ಅನ್ಯ ಭಾಷೆ ಹೆಚ್ಚು ಬಳಕೆಯಿಂದ ಅಲ್ಲಿನ ಕನ್ನಡಿಗರಿಗೆ ಅನ್ಯರೇ ಎಂಬ ಕಾಡದೇ ಇರಲಾರದು. ಇನ್ನು ಇಲ್ಲಿನ ಕರ್ನಾಟಕ ತಮಿಳು ಸಂಘ ಸೇರಿದಂತೆ ಅನ್ಯಭಾಷೆಯ ಭಾಷಾ ಸೌಹಾರ್ದ ಸಂಘಗಳು ಹೆಚ್ಚಿನ ಆದ್ಯತೆ ನೀಡುವ ಮೂಲಕ ಅನ್ಯ ಭಾಷಿಕರು ಕನ್ನಡವನ್ನೇ ವ್ಯವಹಾರಿಕ ಭಾಷೆಯಾಗಿ ಬಳಸುವಂತೆ ಮಾಡಬೇಕು ಎನ್ನುತ್ತಾರೆ ಕನ್ನಡ ಪರ ಹೋರಾಟಗಾರರು.

Advertisement

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕನ್ನಡ ಬಳಕೆ ಇಂದಿಗೂ ಕಡಿಮೆ ಇದೆ. 20 ವರ್ಷಗಳಿಂದೀಚೆಗೆ ಬೆಂಗಳೂರಿಗೆ ಬಂದ ಅನ್ಯಭಾಷಿಕರಲ್ಲಿ ಕನ್ನಡ ಬಳಕೆ ಕಡಿಮೆ ಇದೆ. ಅವರಿಗೆ ಕನ್ನಡದ ಅನಿವಾರ್ಯತ ಸೃಷ್ಟಿಸಿ ಕಲಿಸುವ ಕೆಲಸವನ್ನು ಸರ್ಕಾರ, ಕನ್ನಡ ಅಭಿವೃದ್ಧಿ ಸಂಸ್ಥೆಗಳಿಂದಾಗಬೇಕು.ಅರುಣ್‌ ಜಾವಗಲ್‌, ಬನವಾಸಿ ಬಳಗ

ಹೆಸರಿಗೆ ರಾಜ್ಯೋತ್ಸವ ಆಚರಿಸುತ್ತಾರೆ ಅಷ್ಟೇ. ಅರ್ಧ ದಿನ ಕನ್ನಡ ಸಾಂಸ್ಕೃತಿಕ ಚಟುವಟಿಕೆ ಮಾಡಲಾಗುತ್ತದೆ. ಇದರಿಂದ ಅನ್ಯ ಭಾಷೆಯ ಅಧಿಕಾರಿಗಳು ಮನೋರಂಜನೆ ತೆಗೆದುಕೊಳ್ಳುತ್ತಾರೆ ಅಷ್ಟೇ. ಯಾವುದೇ ಕಾರಣಕ್ಕೂ ಅನ್ಯಭಾಷಿಕರಿಗೆ ಕನ್ನಡ ಕಲಿಯಲು ಪ್ರೋತ್ಸಾಹಿಸುವುದಿಲ್ಲ. ಸೀಮಿತ ಕನ್ನಡವೇ ಹೆಚ್ಚು.  –ಆನಂದ್‌, ಐಟಿ ಉದ್ಯೋಗಿ

 

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next