Advertisement

ಡಿ. 20ರಿಂದ ಕನ್ನಡ ನುಡಿ ಸಂಭ್ರಮ-28: ಸದಾಶಿವ ಶ್ರೀ

03:58 PM Nov 24, 2018 | Team Udayavani |

ಅಕ್ಕಿಆಲೂರು: ಪಟ್ಟಣದ ಶ್ರೀ ದುಂಡಿ ಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ನುಡಿ ಸಂಭ್ರಮ-28 ರ ಸಾಂಸ್ಕೃತಿಕ ಸಮಾರಂಭವನ್ನು ಡಿ. 20ರಿಂದ ಮೂರು ದಿನ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

Advertisement

ಪಟ್ಟಣದ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಆರ್‌ ಐಟಿಐ ಕಾಲೇಜಿನಲ್ಲಿ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ನುಡಿ ಸಂಭ್ರಮ-28 ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಡಿ. 20, 21 ಮತ್ತು 22 ರಂದು ಕವಿಗೋಷ್ಠಿ, ವಚನ ಸಾಹಿತ್ಯ ಗೋಷ್ಠಿ, ಕೃಷಿಗೋಷ್ಠಿ, ಮಹಿಳಾಗೋಷ್ಠಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾಡಿನ ಹೆಸರಾಂತ ಜನಪ್ರತಿನಿಧಿಗಳು, ಮಠಾಧೀಶರು, ಚಲನಚಿತ್ರ ನಟ-ನಟಿಯರು, ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿವರ್ಷ ಸಂಘದ ವತಿಯಿಂದ ನಡೆಯುವ ಗುರುವಂದನೆ, ಬಸವ ಚೇತನ ಪುರಸ್ಕಾರ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಈಗಾಗಲೇ ಸಮಿತಿ ಕೈಗೊಂಡಿದೆ. ವಿವಿಧ ಸಮಿತಿಗಳ ರಚನೆ, ಕಾರ್ಯ ವಿಂಗಡನೆ ಕುರಿತಂತೆ ಮುಂದಿನ ದಿನಗಳಲ್ಲಿ ಸಭೆಗಳು ನಡೆಯಲಿದೆ.

ಸಭೆ ಸಾನ್ನಿಧ್ಯ ವಹಿಸಿದ್ದ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಆಶೀರ್ವಚನ ನೀಡಿ, ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕಲಾಸೇವೆ ಸತತ 27 ವರ್ಷಗಳಿಂದ ನಿರಂತರವಾಗಿ ನಡೆದು ಬಂದಿದ್ದು, ಕನ್ನಡ ನಾಡಿನ ಶ್ರೀಮಂತಿಕೆ ರಕ್ಷಿಸುವ ನಿಟ್ಟಿನಲ್ಲಿ ಸಂಘದ ಪ್ರಯತ್ನ ಉತ್ತಮವಾಗಿದೆ. ನಾಡಿಗೆ ಸಾಹಿತ್ಯಿಕ, ಸಾಂಸ್ಕೃತಿಕ, ಆಧ್ಯಾತ್ಮಿಕವಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ ಹಾವೇರಿ ಜಿಲ್ಲೆ ಹೆಮ್ಮೆ ಪಡುವಂತಹ ಸಮಾರಂಭ ಅಕ್ಕಿಆಲೂರಿನಲ್ಲಿ ನಡೆದು ರಾಜ್ಯದ ಗಮನ ಸೆಳೆಯುತ್ತಿದೆ. ಇದು ನಮ್ಮೆಲ್ಲರ ಹೆಮ್ಮೆಯ ವಿಷಯ. ನಾಡು-ನುಡಿಯ ಸೇವೆ ಬಗ್ಗೆ ತಿರಸ್ಕಾರ ಮನೋಭಾವದಿಂದ ವರ್ತಿಸುತ್ತಿರುವ ಯುವಶಕ್ತಿ ಇಂತಹ ಸಮಾರಂಭಗಳಲ್ಲಿ ತೊಡಗಿಸಿಕೊಂಡು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ  ಕೊಂಡೊಯ್ಯುವ ಜವಾಬ್ದಾರಿ ಪ್ರದರ್ಶಿಸಬೇಕಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ಷಣ್ಮುಖಪ್ಪ ಮುಚ್ಚಂಡಿ, ಸಂಘ ಕಳೆದ 2 ದಶಕಗಳಿಂದ ನಾಡು-ನುಡಿ ಸೇವೆ ತನ್ನದೇ ಆದ ವಿಶಿಷ್ಠ ಕೊಡುಗೆ ನೀಡುತ್ತಿದೆ. ಈ ಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಕಲಾವಿದರಿಗೆ ವೇದಿಕೆ ಕಲ್ಪಿಸಿ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ ವಿಚಾರಗಳನ್ನು ಅನಾವರಣಗೊಳಿಸುತ್ತಿದೆ. ಕನ್ನಡ ನುಡಿ ಸಂಭ್ರಮ-28 ರ ಸಮಾರಂಭದ ಯಶಸ್ಸಿಗೆ ಪಟ್ಟಣದ ಎಲ್ಲ ಶಾಲಾ ಕಾಲೇಜುಗಳು, ಸಂಘ-ಸಂಸ್ಥೆಗಳು ಕೈಜೋಡಿಸುತ್ತಿರುವುದು ನಮ್ಮೆಲ್ಲರ ಆಯೋಜನೆ ಶಕ್ತಿ ಹೆಚ್ಚಿಸಿದೆ. ಕೇವಲ ಹಣವಿದ್ದರೇ ಮಾತ್ರ ಕಾರ್ಯಕ್ರಮ ನಡೆಸಬೇಕೆಂದಿಲ್ಲ; ಬದಲಾಗಿ ಸಾಂಸ್ಕೃತಿಕ ಮನಸ್ಸುಳ್ಳವರಾಗಿದ್ದರೇ ಸಾಕು ಎಂದರು.

ಸ್ಥಳೀಯ ವಿರಕ್ತಮಠದ ಶಿವಬಸವ ಶ್ರೀಗಳು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ವಿಜಯಪುರದ ಅಭಿನವ ಸಿದ್ಧಾರೂಢ ಶ್ರೀಗಳು, ಕುಮಾರ ದೇವರು ನೇತೃತ್ವ ವಹಿಸಿದ್ದರು. ಜಿಪಂ ಸದಸ್ಯ ಟಾಕನಗೌಡ ಪಾಟೀಲ, ಕಸಾಪಾ ತಾಲೂಕಾಧ್ಯಕ್ಷ ನಾಗರಾಜ ಅಡಿಗ, ಸಂಘದ ಅಧ್ಯಕ್ಷ ಬಸವರಾಜ ಕೋರಿ, ಪ್ರಾಚಾರ್ಯ ಸುಭಾಸ ಮಾಳಗಿ ಮಾತನಾಡಿದರು. ಎಪಿಎಂಸಿ ಉಪಾಧ್ಯಕ್ಷೆ ಸುಜಾತಾ ಪಸಾರದ, ಶಿವಕುಮಾರ ದೇಶಮುಖ, ಕೃಷ್ಣ ಈಳಗೇರ, ಸದಾಶಿವ ಕಂಬಾಳಿ, ವಿಶ್ವನಾಥ ಭಿಕ್ಷಾವರ್ತಿಮಠ, ಎಂ.ಎಚ್‌.ಬ್ಯಾಡಗಿ, ಮುತ್ತಪ್ಪ ಮುಚ್ಚಂಡಿ, ಪ್ರಶಾಂತ ಮಿರ್ಜಿ, ಸಿದ್ಧಲಿಂಗೇಶ ತುಪ್ಪದ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next