Advertisement

ದೇಶ ವಿಭಜನೆಗೆ ಮುಂದಾಗಿದ್ದೇ ಸಾವರ್ಕರ್‌ ; CAA ಅಗತ್ಯ ಏನಿತ್ತು?: ಬಿ.ಎಲ್‌.ವೇಣು

09:40 AM Dec 24, 2019 | Hari Prasad |

ಚಿತ್ರದುರ್ಗ: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಪೌರತ್ವ ಕಾಯ್ದೆ ತಿದ್ದುಪಡಿ ಅಗತ್ಯವೇನಿತ್ತು ಎಂದು ಹಿರಿಯ ಕಾದಂಬರಿಕಾರ, ಚಿತ್ರ ಸಾಹಿತಿ ಡಾ| ಬಿ.ಎಲ್‌. ವೇಣು ಪ್ರಶ್ನಿಸಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ರವಿವಾರ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಒಳ್ಳೆಯದನ್ನು ಮಾಡುತ್ತೇವೆ ಎಂದು ರಾಷ್ಟ್ರೀಯತೆ ಸೋಗಿನಲ್ಲಿ ಹುಸಿ ದೇಶಭಕ್ತಿ ಪ್ರದರ್ಶಿಸಲಾಗುತ್ತಿದೆ. ಬಹುಮತವಿದೆ ಎಂಬ ಅಹಂಕಾರದಿಂದ ಬಿಜೆಪಿ ಸರಕಾರ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬುಡವನ್ನೇ ಅಲ್ಲಾಡಿಸುತ್ತಿದೆ.

ಪಾಕಿಸ್ಥಾನ, ಬಾಂಗ್ಲಾ ಮತ್ತು ಅಫ್ಘಾನಿಸ್ಥಾನದಿಂದ ಬಂದ ಮುಸ್ಲಿಮೇತರರಿಗೆ ಪೌರತ್ವ ಕೊಡುತ್ತೇವೆ ಎನ್ನುವುದು ಸರಿಯಲ್ಲ. ಈಗ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಗಲಾಟೆಯನ್ನು ಕಾಂಗ್ರೆಸ್‌ನವರು ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಅಷ್ಟಕ್ಕೂ ಕಾಂಗ್ರೆಸ್‌ ಅರ್ಧ ಸತ್ತು ಹೋಗಿದೆ. ಅವರಿಗೆ ಇಂಥ ಗಲಾಟೆ ಮಾಡಿಸುವ ಶಕ್ತಿ ಇಲ್ಲ. ದೇಶದ ಯುವ ಸಮೂಹ ಎಚ್ಚೆತ್ತಿರುವುದರಿಂದ ಇಷ್ಟೆಲ್ಲ ನಡೆಯುತ್ತಿದೆ ಎಂದರು.

ದೇಶ ವಿಭಜನೆಗೆ ಮುಂದಾಗಿದ್ದೇ ಸಾವರ್ಕರ್‌
ಹಿಂದುತ್ವದ ಆರಾಧಕ ಸಾವರ್ಕರ್‌ ಈ ದೇಶವನ್ನು ಮೊದಲು ವಿಭಜನೆ ಮಾಡಲು ಹೊರಟಿದ್ದರು. ಈಗ ಅದೇ ಹಿಂದುತ್ವದ ಪರಿಕಲ್ಪನೆ ಅಜೆಂಡಾ ಇಟ್ಟುಕೊಂಡು ಹೊರಟಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.

ನಿರುದ್ಯೋಗ, ಅತ್ಯಾಚಾರ, ಕೋಮು ಸೌಹಾರ್ದ ಕದಡುವಿಕೆ, ಜಿಡಿಪಿ ಕುಸಿತ ಸಹಿತ ದೇಶ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಒಗ್ಗಟ್ಟಿನತ್ತ ಹೆಜ್ಜೆ ಹಾಕುವ ಬದಲು ಮುಗ್ಗಟ್ಟಿನತ್ತ ಹೆಜ್ಜೆ ಹಾಕುತ್ತಿದ್ದೇವೆ. ಸಂವಿಧಾನವನ್ನು ಸುಟ್ಟು ಹಾಕಿದವರಿಗೆ ಯಾವ ಶಿಕ್ಷೆ ಕೊಟ್ಟಿದ್ದಾರೆ ಎಂದು ಡಾ| ಬಿ.ಎಲ್‌. ವೇಣು ಪ್ರಶ್ನಿಸಿದರು.

Advertisement

ರಾಜಕಾರಣಿ, ಮಠಾಧೀಶರಿಂದಲೇ ಜಾತಿ ಜೀವಂತ
ರಾಜಕಾರಣಿಗಳು ಮತ್ತು ಮಠಾಧೀಶರು ಇರುವವರೆಗೆ ಜಾತಿ, ಮತ, ಧರ್ಮ ಹೋಗುವುದಿಲ್ಲ. ರಾಜಕಾರಣಿಗಳಿಗೆ ಮತಬೇಕು, ಮಠಾಧೀಶರಿಗೆ ಉದ್ಯೋಗ ಬೇಕು. ಇತ್ತೀಚೆಗೆ ಸಾಕಷ್ಟು ಮಂದಿ ಸ್ವಾಮೀಜಿಗಳಾಗುತ್ತಿದ್ದಾರೆ.

ಸಮಾಜದಲ್ಲಿ ಮಠಾಧೀಶರು, ರಾಜಕಾರಣಿಗಳು ಎಲ್ಲರೂ ಇರಬೇಕು. ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆ. ಆದರೆ ಸರಿ-ತಪ್ಪುಗಳನ್ನು ಪ್ರಶ್ನಿಸಿ, ಲೋಕ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ದ್ವೇಷ ಅಳಿಸಿ ದೇಶ ಉಳಿಸಿ, ಜಾತಿ ನಾಶ ಮಾಡಿ ಪ್ರೀತಿ ಉಳಿಸಿ ಎಂದು ವೇಣು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next