Advertisement

ಬದಲಾದ ಮೆಂಟಾಲಿಟಿಯೊಂದಿಗೆ ಮತ್ತೆ ಬಂದ್ರು ಅಣ್ತಮ್ಮ!

03:45 AM Apr 07, 2017 | Harsha Rao |

“ಹೇಗೋ ಸಿನಿಮಾ ಮಾಡಬೇಕು ಎಂದಿದ್ದರೆ ಯಾವಾಗಲೋ ಮಾಡಬಹುದಿತ್ತು. ಹೀಗೇ ಮಾಡಬೇಕು ಅಂತ ಕಾದಿದ್ದಕ್ಕೆ ಸ್ವಲ್ಪ ತಡವಾಯ್ತು. ಈ ಮಧ್ಯೆ ನಮ್ಮ ತಂದೆ ಸಾವಾಯ್ತು. ಡಿಪ್ರಷನ್‌ಗೆ ಹೋಗಿಬಿಟ್ಟೆ. ಅದರಿಂದ ಹೊರಬರೋಕೆ ಇಷ್ಟು ಸಮಯ ಹಿಡೀತು …’

Advertisement

“ಮೆಂಟಲ್‌ ಮಂಜ’ ನಿರ್ದೇಶಿಸಿದ್ದ ಸಾಯಿಸಾಗರ್‌ ಮತ್ತು ಅದರಲ್ಲಿ ಹೀರೋ ಆಗಿ ಅಭಿನಯಿಸಿದ್ದ ಅರ್ಜುನ್‌ ಪುನಃ ಬಂದಿದ್ದಾರೆ. ಈ ಬಾರಿ ಇಬ್ಬರೂ “ಮೆಂಟಲ್‌ ಮಂಜ 2′ ಎಂಬ ಹೆಸರಲ್ಲಿ ಸಿನಿಮಾ ಮಾಡೋಕೆ ಹೊರಟಿದ್ದಾರೆ. ಚಿತ್ರದ ಮುಹೂರ್ತವಾಗಿದೆ. ಇನ್ನು ಚಿತ್ರೀಕರಣ ಶುರುವಾಗಬೇಕಿದೆ. ಈ ಗ್ಯಾಪ್‌ನಲ್ಲಿ ಸಿನಿಮಾ ಬಗ್ಗೆ ಮಾತಾಡೋಕೆ ತಮ್ಮ ನಿರ್ಮಾಪಕ ಗೋವಿಂದಣ್ಣನ ಜೊತೆಗೆ ಇಬ್ಬರೂ ಬಂದಿದ್ದರು.

ಕೊನೆಯಲ್ಲಿ ಮಾತಾಡ್ತೀನಿ ಅಂತ ನಿರ್ದೇಶಕರು ಹೇಳಿದ್ದಿಕ್ಕೆ ಮೊದಲು ಅರ್ಜುನ್‌ ಮಾತಾಡಿದರು. “ನಾಲ್ಕು ವರ್ಷಗಳ ಹಿಂದೆಯೇ ಮಾಡಬೇಕು ಅಂತ ಯೋಚನೆ ಇತ್ತು. ಎರಡು ವರ್ಷದ ಹಿಂದೆ ಶುರು ಮಾಡಬೇಕು ಎನ್ನುವಷ್ಟರಲ್ಲಿ ತಂದೆ (ಚಳವಳಿ ನಾರಾಯಣ್‌) ಹೋಗಿಬಿಟ್ಟರು. ಈ ಚಿತ್ರ ಮಾಡಬೇಕು ಎಂಬ ಅವರ ಆಸೆಯಾಗಿತ್ತು. ಅವರ ಆಸೆಗಾಗಿ ಈ ಚಿತ್ರವನ್ನು ಮಾಡುತ್ತಿದ್ದೀವಿ’ ಎಂದರು ಅರ್ಜುನ್‌.

ಇಷ್ಟಕ್ಕೂ ಚಿತ್ರದ ಕಥೆಯೇನು ಮತ್ತು ಅರ್ಜುನ್‌ ಪಾತ್ರವೇನು ಎಂದರೆ, ಗೊತ್ತಿಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. “ನನ್ನ ತಮ್ಮನ ನಿರ್ದೇಶನದಲ್ಲಿ ನಾನು ಅಭಿನಯಿಸುತ್ತಿರುವ ನಾಲ್ಕನೇ ಚಿತ್ರ ಇದು. ಹಿಂದಿನ ಮೂರು ಚಿತ್ರಗಳಲ್ಲೂ ಅವನು ನನಗೆ ಕಥೆ ಮತ್ತು ಪಾತ್ರ ಹೇಳಿರಲಿಲ್ಲ. ಈಗಲೂ ಹೇಳಿಲ್ಲ. ಕಥೆ ಮತ್ತು ಪಾತ್ರದ ಬಗ್ಗೆ ಹೇಳಿಬಿಟ್ಟರೆ, ತಯಾರಾಗಿಬಿಡುತ್ತೀವಿ ನೈಜತೆ ಇರುವುದಿಲ್ಲ ಎಂಬುದು ಅವನ ನಂಬಿಕೆ. ಹಾಗಾಗಿ ಕಥೆ ಅಥವಾ ಪಾತ್ರದ ಬಗ್ಗೆ ಹೇಳಿಲ್ಲ. ನೇರವಾಗಿ ಬಂದು ಮಾಡು ಅಂತಾನೆ’ ಎಂದು ತಮ್ಮ ಸಹೋದರನ ಕಾರ್ಯವೈಖರಿಯನ್ನು ವಿವರಿಸಿದರು ಅರ್ಜುನ್‌.

ಅರ್ಜುನ್‌ ಹೇಳುವುದರಲ್ಲಿ ನೂರಕ್ಕೆ ನೂರು ನಿಜ ಎಂದು ಅನುಮೋದಿಸುತ್ತಲೇ ಮಾತು ಶುರು ಮಾಡಿದರು ಸಾಯಿ ಸಾಗರ್‌. “ಇಲ್ಲೊಂದು ಬೇರೆ ತರಹದ ಪ್ರಯತ್ನ ಮಾಡುತ್ತಿದ್ದೀವಿ. ಇವತ್ತು ನಾವು ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದೀವಿ. ಆ ಸಮಸ್ಯೆಗಳನ್ನು ಒಬ್ಬ ರೌಡಿ ಬಗೆಹರಿಸಬಹುದಾ ಎಂಬುದೇ ಕಥೆ. ಇಲ್ಲಿ ನಾವು ರೌಡಿಗಳನ್ನು ವೈಭವೀಕರಿಸುತ್ತಿಲ್ಲ. ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದೀವಿ. ಇಲ್ಲಿ ನಾಯಕನಿಗೆ ಎರಡು ಶೇಡ್‌ಗಳಿವೆ. ಒಬ್ಬ ಡಾನ್‌ ಆಗಿ ಏನೆಲ್ಲಾ ಬದಲಾವಣೆಗಳನ್ನು ತರುತ್ತಾನೆ ಎನ್ನುವುದು ಕಥೆ. ಇದೊಂದು ಸ್ಟೈಲಿಶ್‌ ಸಿನಿಮಾ ಆಗಲಿದೆ. ಈ ಸಿನಿಮಾಗೂ “ಮೆಂಟಲ್‌ ಮಂಜ’ಗೂ ಸಂಬಂಧವಿಲ್ಲ. ಆ ಸಿನಿಮಾ ನೆನಪಿದ್ದರೆ, ಅದರಲ್ಲಿ ಹೀರೋ ಸಾಯುತ್ತಾನೆ. ಇಲ್ಲಿ ಇನ್ನೊಬ್ಬ ಅವನ ಸ್ಫೂರ್ತಿಯಿಂದ ಏನೆಲ್ಲಾ ಮಾಡುತ್ತಾನೆ ಅನ್ನೋದು ಕಥೆ. ಒಟ್ಟು 45 ದಿನಗಳಲ್ಲಿ ಚಿತ್ರೀಕರಣ ಮಾಡೋ ಯೋಚನೆ ಇದೆ. ನಾನೇ ಸಂಗೀತ ಸಂಯೋಜಿಸುತ್ತಿದ್ದೀನಿ. ಅರ್ಜುನ್‌ಗೆ ಇಬ್ಬರು ನಾಯಕಿಯರಿರುತ್ತಾರೆ ಎಂಬ ವಿವರಗಳನ್ನು ಅವರು ನೀಡಿದರು.

Advertisement

ಗೋವಿಂದಣ್ಣನಿಗೆ ಈ ಚಿತ್ರ ಕನಸಿನ ಕೂಸಂತೆ. ಆ ಕೂಸನ್ನು ಅಕ್ಕರೆಯಿಂದ ನೋಡಿಕೊಳ್ಳಿ ಎಂದು ಮಾಧ್ಯಮದವರ ಮೇಲೆ ಜವಾಬ್ದಾರಿ ಹೊರಿಸಿದರು. ಅವರ ಮಗ ಗಿರೀಶ ಅಂತ, ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರಂತೆ. ಒಳ್ಳೆಯ ತಂಡದ ಜೊತೆಗೆ, ಒಳ್ಳೆಯ ಚಿತ್ರ ಮಾಡುವುದಕ್ಕೆ ಹೊರಟಿದ್ದೀವಿ, ಸಹಕರಿಸುವ ಕೆಲಸ ಮಾಧ್ಯಮದವರದ್ದು ಎಂದು ಮಾತು ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next