ಕೆಳಹಂತದ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗೆ ಒತ್ತು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಸಲಹೆ ನೀಡಿರುವುದು ಉತ್ತಮ ಬೆಳವಣಿಗೆ. ಬಹು ಹಿಂದಿನಿಂದಲೂ ಇಂಥದ್ದೊಂದು ಬೇಡಿಕೆ ಚಾಲ್ತಿಯಲ್ಲಿದೆ. ಕೆಳಹಂತ ಅಂದರೆ ಜಿಲ್ಲಾ ಮತ್ತು ತಾಲೂಕು ಕೋರ್ಟ್‌ಗಳಲ್ಲಿ ಸಮರ್ಪಕವಾಗಿ ಕನ್ನಡ ಅನುಷ್ಠಾನವಾದರೆ ಗ್ರಾಮೀಣ ಭಾಗದ ಕಕ್ಷಿದಾರರಿಗೆ ಕೋರ್ಟ್ ಭಾಷೆ ಸುಲಭವಾಗಿ ಅರ್ಥವಾಗುತ್ತದೆ ಎಂಬುದು ಇದರ ಪ್ರಮುಖ ಉದ್ದೇಶ.
ಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್‌ವರೆಗೂ ಹೋಗಿದ್ದು, ಅಲ್ಲಿನ ಸಂವಿಧಾನ ಪೀಠ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಸ್ಥಳೀಯ ಭಾಷೆ ಬಳಕೆ ಮಾಡಲು ಸಾಧ್ಯವಿಲ್ಲ ಎಂದು 2012ರಲ್ಲೇ ತೀರ್ಪು ನೀಡಿದೆ. ಇದಕ್ಕೆ ಕಾರಣಗಳೂ ಉಂಟು. ಈ ಹಿಂದೆಯೇ ಈ ಬಗ್ಗೆ ಚರ್ಚೆ ಬಂದಿದ್ದಾಗ ಹಿರಿಯ ವಕೀಲರು, ಮೇಲ್ಮಟ್ಟದ ಕೋರ್ಟ್‌ಗಳಲ್ಲಿ ಸ್ಥಳೀಯ ಅಥವಾ ಹಿಂದಿ ಭಾಷೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂಬುದಕ್ಕೆ ಕಾರಣಗಳನ್ನೂ ನೀಡಿದ್ದರು. ಹೈಕೋರ್ಟ್‌ಗಳಲ್ಲಿ ನಾಲ್ಕೈದು ಮಂದಿ ಬೇರೆ ರಾಜ್ಯಗಳ ನ್ಯಾಯಮೂರ್ತಿಗಳು ಇರುತ್ತಾರೆ. ಇವರ ಮುಂದೆ ಕನ್ನಡ ಅಥವಾ ಆಯಾ ರಾಜ್ಯದ ಸ್ಥಳೀಯ ಭಾಷೆಯಲ್ಲಿ ವಾದ ಮಂಡನೆ ಸಾಧ್ಯವೇ ಎಂಬ ಪ್ರಶ್ನೆ ಕೇಳಿದ್ದರು. ಹಾಗೆಯೇ ಸುಪ್ರೀಂನಲ್ಲೂ ಎಲ್ಲರಿಗೂ ಹಿಂದಿ ಬಾರದೇ ಇರುವುದರಿಂದ ಅದನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.
ಆದರೆ ವಿಷಯ ಇದಲ್ಲ, ಶನಿವಾರದ ಸಮಾವೇಶದಲ್ಲಿ ಪ್ರಸ್ತಾವಿಸಿರುವುದು ಜಿಲ್ಲಾ ಮತ್ತು ತಾಲೂಕು ಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಇನ್ನಷ್ಟು ಒತ್ತು ನೀಡಿ ಬಳಕೆ ಮಾಡಬೇಕು ಎಂಬುದು. ಈಗಾಗಲೇ ಬಳಕೆಯಾಗುತ್ತಿದೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಜಾರಿಯಾಗಿಲ್ಲ ಎಂಬ ಮಾತುಗಳಿವೆ.
ಕರ್ನಾಟಕದ ಮಟ್ಟಿಗೆ ಬಂದರೆ ನ್ಯಾ| ಅರಳಿ ನಾಗರಾಜ್ ಮತ್ತು ನ್ಯಾ| ಎ.ಜೆ. ಸದಾಶಿವ ಅವರು ಸ್ಥಳೀಯ ಕೋರ್ಟ್‌ಗಳಲ್ಲಿ ಕನ್ನಡ ಬಳಕೆ ಮಾಡುವುದಷ್ಟೇ ಅಲ್ಲ ಕನ್ನಡದಲ್ಲೇ ತೀರ್ಪು ಬರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದರು. ಅಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ನ್ಯಾ| ಅರಳಿ ನಾಗರಾಜ್ ಅವರಿಗೆ ಕನ್ನಡದಲ್ಲಿ ತೀರ್ಪು ಬರೆದ ಕಾರಣಕ್ಕೆ ಅಭಿನಂದನೆಯನ್ನೂ ಸಲ್ಲಿಸಿತ್ತು. ಈಗಲೂ ರಾಜ್ಯ ಮಟ್ಟದಲ್ಲಿ ಇಂಥ ಕೆಲಸಗಳು ಆಗಬೇಕಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಕೋರ್ಟ್‌ಗಳಲ್ಲಿ ಕನ್ನಡ ಬಳಕೆ ಮಾಡುವ ನ್ಯಾಯಾಧೀಶರನ್ನು ಗುರುತಿಸಿ ಇವರಿಗೆ ಅಭಿನಂದಿಸುವ ಕೆಲಸವಾಗಬೇಕು.
ಈ ಎಲ್ಲ ಅಂಶಗಳ ನಡುವೆ ಸ್ಥಳೀಯ ಕೋರ್ಟ್‌ಗಳಲ್ಲೂ ಕನ್ನಡ ಬಳಕೆ ಕಷ್ಟಕರವೇ ಎಂಬ ವಾದವಿದೆ. ಇದಕ್ಕೆ ಕಾರಣ, ಭಾಷಾಂತರ ಸಮಸ್ಯೆ. ಪ್ರಕರಣವೊಂದು ಜಿಲ್ಲಾ ಮಟ್ಟದಲ್ಲೇ ಇತ್ಯರ್ಥವಾದರೆ ಸಮಸ್ಯೆ ಇಲ್ಲ. ಆದರೆ ಇದೇ ಪ್ರಕರಣವನ್ನು ಹೈಕೋರ್ಟ್‌ಗೆ ತೆಗೆದುಕೊಂಡು ಹೋದರೆ ಭಾಷೆಯ ಸಮಸ್ಯೆಯಾಗುತ್ತದೆ. ಆಗ ವಕೀಲರೇ ತಮ್ಮ ಕಕ್ಷಿದಾರರ ಮೂಲಕ ಇಡೀ ಪ್ರಕರಣದ ಎಲ್ಲ ಅಂಶಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿಸಬೇಕು. ಇದರಿಂದ ಹೆಚ್ಚು ವೆಚ್ಚ ತಗಲುತ್ತದೆ ಎಂಬ ಮಾತುಗಳಿವೆ. ಇದಕ್ಕಾಗಿ ಸರಕಾರವೇ ಭಾಷಾಂತರಕ್ಕೆ ವ್ಯವಸ್ಥೆ ಮಾಡಿಸಿದಲ್ಲಿ ಸ್ಥಳೀಯ ಮಟ್ಟದಲ್ಲಿ ಕನ್ನಡದ ಅನುಷ್ಠಾನ ಉತ್ತಮ ರೀತಿಯಲ್ಲಿ ಆಗುತ್ತದೆ ಎಂಬುದನ್ನು ಆಶಿಸಬಹುದು.