ಆತ ಶ್ರುಶ್ರಾವ್ಯವಾಗಿ ಹಾಡುತ್ತಾ ಕೇಳುಗರನ್ನು ಮೋಡಿ ಮಾಡುವ ಸ್ಫುರದ್ರೂಪಿ ಸಂಗೀತಗಾರ. ಪ್ರತಿದಿನ ಲೋಕಲ್ ಟ್ರೈನ್ ಒಂದರ “ವಿಂಡೋಸೀಟ್’ನಲ್ಲಿ ಕುಳಿತು ಪ್ರಯಾಣಿಸುವ ಈ ಸಂಗೀತಗಾರನಿಗೆ, ಯಾರಿಗೂ ಕಾಣಿಸದ ಒಂದಷ್ಟು ಘಟನೆಗಳು ಕಾಣಿಸುತ್ತವೆ. ಅದರ ಬೆನ್ನಟ್ಟಿ ಹೊರಡುವ ಈ ಸಂಗೀತಗಾರನಿಗೆ, ಅದನ್ನು ತೆರೆಮೇಲೆ ನೋಡುವ ಪ್ರೇಕ್ಷಕರಿಗೆ, ತೆರೆಮರೆಯಲ್ಲಿ ನಡೆದ ಒಂದಷ್ಟು ನಿಗೂಢ ವಿಷಯಗಳು ಒಂದೊಂದಾಗಿ ಬಿಚ್ಚಿಕೊಳ್ಳಲು ಶುರುವಾಗುತ್ತದೆ. ಅದು ಹೇಗೆ ಅನ್ನೋದೇ “ವಿಂಡೋಸೀಟ್’ ಸಿನಿಮಾದ ಕಥಾಹಂದರ.
“ವಿಂಡೋಸೀಟ್’ ಒಂದು ಲವ್ ಕಂ ಸಸ್ಪೆನ್ಸ್ ಕ್ರೈಂ-ಥ್ರಿಲ್ಲರ್ ಕಥಾಹಂದರ ಸಿನಿಮಾ. ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಈ ಶೈಲಿಯ ಕಥೆಯೊಂದನ್ನು ಸಿನಿಮಾವಾಗಿ ತೆರೆಮೇಲೆ ತಂದಿರುವ ನಿರ್ದೇಶಕಿ ಶೀತಲ್ ಶೆಟ್ಟಿ ಪ್ರಯತ್ನ ಪ್ರಶಂಸನಾರ್ಹ. ಹಾಗಂತ ಸಿನಿಮಾದ ಕಥೆಯ ಒಂದೆಳೆಯಲ್ಲಿರುವ ಅಂಶವನ್ನು ಅಷ್ಟೇ ಸಸ್ಪೆನ್ಸ್-ಥ್ರಿಲ್ಲಿಂಗ್ ಆಗಿ ಸಿನಿಮಾದ ಉದ್ದಕ್ಕೂ “ವಿಂಡೋಸೀಟ್’ನಲ್ಲಿ ನಿರೀಕ್ಷಿಸಬಹುದು ಎನ್ನುವಂತಿಲ್ಲ. ಮಾಮೂಲಿ ಕಥೆಗಳಿಗಿಂತ ವಿಭಿನ್ನವಾದ ಕಥೆಯನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಚಿತ್ರತಂಡ ಅಲ್ಲಲ್ಲಿ ಎಡವಿದಂತಿದೆ.
ಅದರಲ್ಲೂ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾಗಳಲ್ಲಿ ಚಿತ್ರಕಥೆಯಲ್ಲಿ ಬರುವ ಅನಿರೀಕ್ಷಿತ ಟ್ವಿಸ್ಟ್ ಮತ್ತು ಟರ್ನ್ಸ್, ಮತ್ತು ಅದನ್ನು ಹೇಳುವ ದಾಟಿ ತುಂಬ ಮುಖ್ಯವಾಗಿರುತ್ತವೆ. ಆದರೆ ಇಂಥದ್ದೊಂದು ಸಾಧ್ಯತೆಯನ್ನು ಸಿನಿಮಾದಲ್ಲಿ ಹೆಚ್ಚಾಗಿ ಕಾಣಲಾಗದು. ಸಿನಿಮಾದ ಕಥೆಗೆ ತಕ್ಕಂತೆ ಚಿತ್ರಕಥೆಗೆ ಮತ್ತು ನಿರೂಪಣೆಗೆ ಇನ್ನಷ್ಟು ವೇಗ ಸಿಕ್ಕಿದ್ದರೆ, “ವಿಂಡೋಸೀಟ್’ ಜರ್ನಿ ಮತ್ತಷ್ಟು ಥ್ರಿಲ್ಲಿಂಗ್ ಆಗಿರುವ ಸಾಧ್ಯತೆಗಳಿದ್ದವು.
ಇದನ್ನೂ ಓದಿ:ಚಿತ್ರವಿಮರ್ಶೆ: ಹುಲಿಬೇಟೆಯಲ್ಲಿ ಕಾಣಿಸಿದ ಪವರ್‌ಫುಲ್ ‘ಬೈರಾಗಿ’
ಇನ್ನು “ವಿಂಡೋಸೀಟ್’ನಲ್ಲಿ ನಾಯಕ ನಿರೂಪ್ ಭಂಡಾರಿ ಸಂಗೀತಗಾರನಾಗಿ, ಭಗ್ನಪ್ರೇಮಿಯಾಗಿ ಎರಡು ಶೇಡ್‌ನ ಪಾತ್ರದಲ್ಲಿ ಒಪ್ಪುವಂಥ ಅಭಿನಯ ನೀಡಿದ್ದಾರೆ. ನಾಯಕಿಯರಾದ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ತಮ್ಮ ಪಾತ್ರದಲ್ಲಿ ಲವಲವಿಕೆಯಿಂದ ಅಭಿನಯಿಸಿದ್ದಾರೆ. ಲೇಖಾ ನಾಯ್ಡು, ಸೂರಜ್ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಮಧುಸೂಧನ ರಾವ್, ರವಿಶಂಕರ್, ನಂದ ಕುಮಾರ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಇನ್ನುಳಿದ ಪಾತ್ರಗಳು ಹಾಗೆ ಬಂದು, ಹೀಗೆ ಹೋಗುವುದರಿಂದ ಅವುಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.
ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಒಂದೆರಡು ಹಾಡುಗಳು ಗಮನ ಸೆಳೆಯುತ್ತದೆ. ಒಟ್ಟಾರೆ ಕೆಲವೊಂದು ಲೋಪಗಳನ್ನು ಬದಿಗಿಟ್ಟು ನೋಡುವುದಾದರೆ, “ವಿಂಡೋಸೀಟ್’ ಒಂದೊಳ್ಳೆಯ ಪ್ರಯತ್ನ ಎನ್ನಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್