‘ಮನಸಾಗಿದೆ’ ಎಂಬ ಸಿನಿಮಾ ನಿರ್ಮಿಸಿ, ಆ ಮೂಲಕ ತಮ್ಮ ಪುತ್ರ ಅಭಯ್‌ನನ್ನು ಹೀರೋ ಆಗಿ ಲಾಂಚ್ ಮಾಡಿದ್ದ ನಿರ್ಮಾಪಕ ಚಂದ್ರಶೇಖರ್ ಈಗ ಮಗನಿಗಾಗಿ ಮತ್ತೂಂದು ಸಿನಿಮಾ ನಿರ್ಮಿಸುತ್ತಿದ್ದಾರೆ. ಅದು “ಮಂಡ್ಯ ಹೈದ’.
ಇತ್ತೀಚೆಗೆ ನಾಯಕ ಅಭಯ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಟೈಟಲ್ ಹಾಗೂ ಫಸ್ಟ್‌ಲುಕ್ ರಿಲೀಸ್ ಮಾಡಲಾಯಿತು. ಈ ಚಿತ್ರಕ್ಕೆ ವಿ. ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳ 18ರಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಚಂದ್ರಶೇಖರ್, “ಮಂಡ್ಯ ಹೈದ ನಮ್ಮ ಬ್ಯಾನರ್‌ನಿಂದ ಹೊರಬರುತ್ತಿರುವ 5ನೇ ಚಿತ್ರ. ಅಲ್ಲದೆ ನನ್ನ ಮಗನನ್ನು ಹಾಕಿಕೊಂಡು ನಿರ್ಮಿಸುತ್ತಿರುವ ಎರಡನೇ ಚಿತ್ರವೂ ಹೌದು. ತೇಜಸ್ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇದೇ ತಿಂಗಳ 18ರಂದು ಚಿತ್ರದ ಮುಹೂರ್ತ ನಡೆಸಿ, ಅಂದಿನಿಂದಲೇ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಕಿರುತೆರೆ ನಟಿ ಭೂಮಿಕಾ ಅವರನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸುತ್ತಿದ್ದೇವೆ’ ಎಂದು ಹೇಳಿದರು.
ಚಿತ್ರದಲ್ಲಿ ಮಂಡ್ಯ ಹೈದನ ಲವ್ ಯಾವ ಥರ ಇರುತ್ತೆ ಎನ್ನುವುದನ್ನು ಈ ಚಿತ್ರದ ಮೂಲಕ ಹೇಳಲ್ದಿದಾರಂತೆ. ಈ ಚಿತ್ರದ ಶೇ.80 ರಷ್ಟು ಚಿತ್ರೀಕರಣವನ್ನು ಮಂಡ್ಯ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಉಳಿದ 20 ಭಾಗವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುತ್ತಿದ್ದೇವೆ. ಕೆಲವರು ಪ್ರೀತಿಗೋಸ್ಕರ ಪ್ರಾಣವನ್ನೇ ತೆಗೆಯುತ್ತಾರೆ, ಇನ್ನೂ ಕೆಲವರು ಪ್ರಾಣವನ್ನು ಕೊಡುತ್ತಾರೆ. ನಾಯಕ ಪ್ರೀತಿಗಾಗಿ ಪ್ರಾಣ ಕೊಡ್ತಾನಾ ಅಥವಾ ಪ್ರಾಣ ತೆಗೆಯುತ್ತಾನಾ ಅನ್ನುವುದೇ ಮಂಡ್ಯ ಹೈದ ಚಿತ್ರದ ಒನ್‌ಲೈನ್ ಎನ್ನುವುದು ನಿರ್ದೇಶಕರ ಮಾತು.
ಚಿತ್ರದ ನಾಯಕ ಅಭಯ್ ಮಾತನಾಡಿ, “ಇದು ನನಗೆ ತುಂಬಾ ಇಷ್ಟವಾಗಿರುವ ಕಥೆ. ಪಕ್ಕಾ ಮಂಡ್ಯ ಭಾಷೆ ಈ ಚಿತ್ರದಲ್ಲಿರುತ್ತದೆ’ ಎಂದರು. ನಾಯಕಿ ಭೂಮಿಕಾ ಕೂಡಾ ತಮಗೆ ಸಿಕ್ಕ ಮೊದಲ ಅವಕಾಶದ ಬಗ್ಗೆ ಖುಷಿಯಿಂದ ಮಾತನಾಡಿದರು