ನಟ ವಿನೋದ್ ಪ್ರಭಾಕರ್ “ಟೈಗರ್ ಟಾಕೀಸ್’ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದು, ಅದರ ಮೂಲಕ ಮೊದಲ ಪ್ರಯತ್ನವಾಗಿ “ಲಂಕಾಸುರ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಪ್ರಮೋದ್ ಕುಮಾರ್ ನಿರ್ದೇಶಿಸಿರುವ ಲಂಕಾಸುರ ಚಿತ್ರವನ್ನು ವಿನೋದ್ ಪ್ರಭಾಕರ್ ನಿರ್ಮಿಸಿ, ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ಇದೀಗ ಚಿತ್ರತಂಡ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಬೆಂಗಳೂರು ಹಾಗೂ ಗೋವಾದಲ್ಲಿ ಸುಮಾರು 65 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಸಹ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್ ತಿಳಿಸಿದ್ದಾರೆ.
ವಿನೋದ್ ಪ್ರಭಾಕರ್ ಹಾಗೂ ಲೂಸ್ಮಾದ ಯೋಗಿ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದು, ನಾಯಕಿಯಾಗಿ ಪಾರ್ವತಿ ಅರುಣ್ ಅಭಿನಯಿಸಿದ್ದಾರೆ. ಹಿರಿಯ ನಟ ದೇವರಾಜ್, ರವಿಶಂಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇನ್ನು ಈ ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದ್ದು, ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್, ಕುಂಗ್ಳು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಒಂದು ಸಾಹಸ ಸನ್ನಿವೇಶಕ್ಕಾಗಿ ವಿನೋದ್ ಪ್ರಭಾಕರ್ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಪ್ರಮೋದ್ ಕುಮಾರ್ ನಿರ್ದೇಶನ. ವಿಜೇತ್ ಕೃಷ್ಣ ಸಂಗೀತ ಸಂಯೋಜನೆ, ಸುಜ್ಞಾನ್ ಛಾಯಾಗ್ರಹಣ, ಮುರಳಿ ಮೋಹನ್ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.