‘ಈ ಸಿನಿಮಾ ಮೇಲೆ ನನಗೆ ವಿಶೇಷವಾದ ಪ್ರೀತಿ ಇದೆ …’
ಹೀಗೆಂದು ಪಕ್ಕದಲ್ಲಿದ್ದ ಪೋಸ್ಟರ್ ನೋಡಿದರು ನಿರ್ಮಾಪಕ ಟಿ.ಆರ್.ಚಂದ್ರಶೇಖರ್. ಅಲ್ಲಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂದು ದೊಡ್ಡದಾಗಿ ಬರೆದಿತ್ತು. ಅವರು ಅಂದು ಮಾತಿಗೆ ನಿಂತಿದ್ದು ಕೂಡಾ ಅದೇ ಸಿನಿಮಾದ ಬಗ್ಗೆ. ನಿಮಗೆ ಗೊತ್ತಿರುವಂತೆ ಗಾಂಧಿನಗರದಲ್ಲಿ ತುಂಬಾ ದಿನಗಳಿಂದ ಸದ್ದು ಮಾಡುತ್ತಿದ್ದ ಗುಬ್ಬಿಯೊಂದು ಈಗ ಬಿಡುಗಡೆಯಾಗಿದೆ. ಚಿತ್ರ ನಿನ್ನೆ (ಆ.15) ಬಿಡುಗಡೆಯಾಗಿದೆ. ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಾರೆಂಬ ವಿಶ್ವಾಸ ಕೂಡಾ ನಿರ್ಮಾಪಕರಿಗಿದೆ. ‘ನನ್ನ ಬ್ಯಾನರ್‌ನಲ್ಲಿ ಬಂದ ಹಾಗೂ ಬರುತ್ತಿರುವ ಸಿನಿಮಾಗಳಲ್ಲಿ ನನಗೆ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದ ಮೇಲೆ ವಿಶೇಷವಾದ ಪ್ರೀತಿ ಇದೆ. ಅದಕ್ಕೆ ಕಾರಣ ಆ ಚಿತ್ರದ ಕಥೆ ಹಾಗೂ ಸಿನಿಮಾ ಮೂಡಿಬಂದಿರುವ ರೀತಿ. ಯಾವುದೇ ಟೆನ್ಷನ್ ಇಲ್ಲದೇ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು’ ಎಂದರು.
ಈ ಚಿತ್ರವನ್ನು ಸುಜಯ್ ಶಾಸ್ತ್ರಿ ನಿರ್ದೇಶಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಕಾಮಿಡಿ ನಟರಾಗಿ ಕಾಣಿಸಿಕೊಂಡಿರುವ ಸುಜಯ್‌ಗೆ ‘ಗುಬ್ಬಿ’ ಮೊದಲ ಚಿತ್ರ. ಚಿತ್ರ ಚೆನ್ನಾಗಿ ಮೂಡಿಬಂದಿರುವುದರಿಂದ ಪ್ರೇಕ್ಷಕರು ಇಷ್ಟಪಡುತ್ತಾರೆಂಬ ವಿಶ್ವಾಸ ಸುಜಯ್ ಅವರಿಗಿದೆ. ಈ ಚಿತ್ರವಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಸುಜಯ್ ಮರೆಯಲಿಲ್ಲ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಹೀರೋ. ಚಿತ್ರದ ಬಗ್ಗೆ ಮಾತನಾಡುವ ರಾಜ್ ಬಿ ಶೆಟ್ಟಿ, ‘ಚಿತ್ರದ ಸನ್ನಿವೇಶಗಳೇ ನಗು ತರಿಸುತ್ತವೆ. ಚಿತ್ರದ ಹೀರೋ ಎಲ್ಲಾ ಹೀರೋಗಳಂತೆ ಬ್ರಹ್ಮಾಸ್ತ್ರಗಳನ್ನು ಎದುರಿಸುವವ ಅಥವಾ ನಾಯಕಿ ನಟಿಯರ ಜೊತೆ ಡ್ಯಾನ್ಸ್ ಮಾಡುವವ ಅಲ್ಲ. ಹೀಗೆ ಹೀರೋ ಆಗಿದ್ದು, ಹೀರೋ ಗುಣವಿಲ್ಲದ ಒಬ್ಬ ವ್ಯಕ್ತಿಯನ್ನಿಟ್ಟುಕೊಂಡು ಇಲ್ಲಿ ಕಾಮಿಡಿ ಮಾಡಲಾಗಿದೆ. ಅದು ನಾಯಕಿಯರ ಜೊತೆ ಡ್ಯಾನ್ಸ್‌ನಿಂದ ಹಿಡಿದು ರಾಬಿನ್ ಹುಡ್ ಎಂಬ ವಿಲನ್ ಕೊಡುವ ಕಾಟದವರೆಗೆ ಕಾಮಿಡಿ ಸಾಗಿಬರುತ್ತದೆ’ ಎಂದು ಚಿತ್ರದ ಬಗ್ಗೆ ಹೇಳಿದರು. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ವಿಲನ್. ಭಿನ್ನ ವಿಭಿನ್ನ ವೇಷಗಳಲ್ಲಿ ಕಾಣಿಸಿಕೊಳ್ಳುವ ಡಾನ್. ‘ಈ ಪಾತ್ರ ಅನೇಕರನ್ನು ಸುತ್ತಿಕೊಂಡು ಕೊನೆಗೆ ನನ್ನ ಬಳಿ ಬಂತು. ನಾನು ಇಷ್ಟು ದಿನ ಮಾಡಿದ ಸಿನಿಮಾಗಳಲ್ಲಿ ಈ ಪಾತ್ರ ತುಂಬಾ ಹೊಸದು’ ಎಂದರು. ಚಿತ್ರದ ನಾಯಕಿ ಕವಿತಾ ಗೌಡ ಕೂಡಾ ಸಿನಿಮಾ ಬಗೆಗಿನ ತಮ್ಮ ಅನುಭವ ಹಂಚಿಕೊಂಡರು.