Advertisement

ಈ ಪಟ್ಟಣಕ್ಕೆ ಏನಾಯ್ತು?

11:16 AM May 01, 2017 | Sharanya Alva |

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಚಂದದ ಟೈಟಲ್‌ಗ‌ಳಿರುವ ಸಿನಿಮಾಗಳು ಬರುತ್ತಿವೆ. “ಉಳಿದವರು ಕಂಡಂತೆ’, “ದಯವಿಟ್ಟು ಗಮನಿಸಿ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಹೀಗೆ ಹಲವು ಚಂದದ ಟೈಟಲ್‌ಗ‌ಳಿರುವ ಸಿನಿಮಾಗಳು ಬಂದಿವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ, “ಈ ಪಟ್ಟಣಕ್ಕೆ ಏನಾಗಿದೆ?’ ಸಹ ಒಂದು. ಚಿತ್ರಮಂದಿರದಲ್ಲಿ ಚಿತ್ರ ಶುರುವಾಗುವ ಮುನ್ನ ಬರುವ ಧೂಮಪಾನ
ನಿಷೇಧದ ಕುರಿತ ಜಾಹೀರಾತಿನಲ್ಲಿ “ಈ ಪಟ್ಟಣಕ್ಕೆ ಏನಾಗಿದೆ?’ ಈ ಸಾಲನ್ನು ಖಂಡಿತಾ ಕೇಳಿರುತ್ತೀರಿ.

Advertisement

ಈಗ ಅದೇ ಸಾಲನ್ನಿಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ರವಿ ಸುಬ್ಬರಾಜ್‌. ಅಂದಹಾಗೆ, ಇದು ಧೂಮಪಾನ ನಿಷೇಧದ ಕುರಿತಾದ ಸಿನಿಮಾ ಖಂಡಿತಾ ಇಲ್ಲ. ಬದಲಿಗೆ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯ ಕುರಿತಾದ ಚಿತ್ರ ಇದು. ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಸಾಕಷ್ಟು ಸದ್ದು ಮಾಡುತ್ತಿದೆ. ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಕಡಿವಾಣ ಹಾಕುವುದಕ್ಕೆ ಪ್ರಯತ್ನಪಟ್ಟರೂ ಬೆಟ್ಟಿಂಗ್‌ ಜಾಲ ದಿನೇದಿನೇ ಬೆಳೆಯುತ್ತಲೇ ಇದೆ. ಅದೆಷ್ಟೋ ಜನ ಹಣ ಹೂಡಿ ಮನೆ ಮಾರಿಕೊಂಡಿದ್ದಾರೆ. ಈ ಕುರಿತು ಕಥೆ ಬರೆದು, ಚಿತ್ರ ನಿರ್ದೇಶಿಸುತ್ತಿದ್ದಾರೆ ರವಿ ಸುಬ್ಬರಾವ್‌.

ಈ ಚಿತ್ರದಲ್ಲಿ ಬೆಟ್ಟಿಂಗ್‌ ಹಿಂದೆ ಯಾರಿದ್ದಾರೆ, ಯಾರೆಲ್ಲಾ ಈ ದಂಧೆಯನ್ನು ನಿಯಂತ್ರಿಸುತ್ತಿದ್ದಾರೆ ಎಂಬಂತಹ ಅಂಶಗಳನ್ನು
ಹೇಳಲಾಗಿದೆಯಂತೆ. ಅದಕ್ಕೆ ಸಾಕಷ್ಟು ಅಧ್ಯಯನ ಮಾಡಿ, ದಾಖಲೆ ಹೊಂದಿಸಿ, ಚಿತ್ರಕಥೆಯನ್ನು ಅವರು ಸಿದ್ಧಪಡಿಸಿದ್ದಾರೆ. ಈ ಚಿತ್ರವನ್ನು ಅವರು ಬರೀ ಕಥೆ ಬರೆದು ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ನಿರ್ಮಾಣ ಮಾಡುವುದರ ಜೊತೆಗೆ, ಚಿತ್ರದಲ್ಲಿ ಹೀರೋ ಆಗಿಯೂ ನಟಿಸುತ್ತಿದ್ದಾರೆ. ಇನ್ನು ನಾಯಕಿಯರಾಗಿ ಡಿಂಪಿ ಫಾದ್ಯ ಖಾನ್‌ ಮತ್ತು ಸಂಧ್ಯಾ ಇದ್ದಾರೆ. ರಜಪೂತಿ ಅರುಣ್‌ ಕುಮಾರ್‌ ಅವರ ಛಾಯಾಗ್ರಹಣ ಮತ್ತು ಮ್ಯಾರಿಯೋ ಅವರ ಸಂಗೀತವಿರುವ ಈ ಚಿತ್ರ ಮೇ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next