ದೂರದರ್ಶನ.. ಈ ಹೆಸ್ರು ಕೇಳಿದ ತಕ್ಷಣ ದೃಶ್ಯಗಳನ್ನು ಹಾಗೂ ಧ್ವನಿಯನ್ನು ಜಂಟಿಯಾಗಿ ಪ್ರಸಾರ ಮಾಡುವ ಮಾಯಾಪೆಟ್ಟಿಗೆ ಎಲ್ಲರಿಗೂ ನೆನಪಾಗುತ್ತದೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿವಿ ಬಂದ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ. ಅಂದಿನ ಕಾಲ ಘಟ್ಟದಲ್ಲಿ ಇದ್ದಂತಹ ಹಲವಾರು ಪ್ರಚಲಿತ ವಿದ್ಯಮಾನಗಳನ್ನು ನೋಡುಗರು ಮೆಲುಕು ಹಾಕುವಂತೆ ಮಾಡುವ ಕಥಾಹಂದರ ಇರುವ ಸಿನಿಮಾ ತಯಾರಾಗಿದೆ ಅದುವೇ ದೂರದರ್ಶನ.
ಆಕರ್ಷಕ ಶೀರ್ಷಿಕೆಯಡಿ ತಯಾರಾಗಿರುವ ಈ ಸಿನಿಮಾ 80ರ ದಶಕಕ್ಕೆ ನೋಡುಗರನ್ನು ಕರೆದೊಯ್ಯುವಂತೆ ಮಾಡುತ್ತದೆ ಎನ್ನುವುದು ಚಿತ್ರತಂಡದ ಮಾತು.
ದಿಯಾ ಸಿನಿಮಾ ಮೂಲಕ ಪ್ರೇಕ್ಷಕರ ಮನೆ ಮನ ಗೆದ್ದಿರುವ ಮಂಗಳೂರಿನ ಪ್ರತಿಭೆ ಪೃಥ್ವಿ ಅಂಬರ್ ದೂರದರ್ಶನ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಪೃಥ್ವಿಗೆ ಜೋಡಿಯಾಗಿ ಅಯಾನಾ ನಟಿಸಿದ್ದಾರೆ.
ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.
ಇದನ್ನೂ ಓದಿ:ವರ್ಷಾಂತ್ಯಕ್ಕೆ ‘ಕೆಜಿಎಫ್ 3’ ಶೂಟಿಂಗ್ ಆರಂಭ; ಮಹತ್ವದ ಮಾಹಿತಿ ನೀಡಿದ ವಿಜಯ್ ಕಿರಗಂದೂರು
ಟ್ರಂಕ್ ಸಿನಿಮಾದಲ್ಲಿ ಸಂಭಾಷಣೆ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ, ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಸುಕೇಶ್ ಶೆಟ್ಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಇದು ಇವರ ಮೊದಲ ಸಿನಿಮಾವಾಗಿದೆ.