ಸದ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (ಆರ್ಟಿಕಲ್ 370) ವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದೆ. “ಆರ್ಟಿಕಲ್ 370′ ರದ್ದಾದ ನಂತರ ಜಮ್ಮು ಮತ್ತು ಕಾಶ್ಮೀರ ಈಗ ಹೇಗಿದೆ ಎಂಬುದನ್ನು ಈಗ “ಆರ್ಟಿಕಲ್ 370′ ಸಿನಿಮಾದ ಮೂಲಕ ತೆರೆಮೇಲೆ ಹೇಳಲು ಹೊರಟಿದೆ.
“ಲೈರಾ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ಭರತ್ ಗೌಡ ಮತ್ತು ಸಿ. ರಮೇಶ್ ನಿರ್ಮಿಸಿರುವ “ಆರ್ಟಿಕಲ್ 370′ ಚಿತ್ರಕ್ಕೆ ಕೆ. ಶಂಕರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಶಶಿಕುಮಾರ್, ಶೃತಿ, ಶಿವರಾಂ ಮೊದಲಾದ ಕಲಾವಿದರು “ಆರ್ಟಿಕಲ್ 370′ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ “ಆರ್ಟಿಕಲ್ 360′ ಸಿನಿಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದೆ.
ಪತ್ರಕರ್ತ ಹಾಗೂ ಪಂಡಿತರೂ ಆಗಿರುವ ಆರ್. ಕೆ ಮುಟ್ಟು, ಮಾಜಿ ಸೈನಿಕ ಪ್ರಹ್ಲಾದ್ ವಿ. ಕುಲಕರ್ಣಿ, ಯೋಧರಾದ ಈರಣ್ಣ, ಈರಪ್ಪ ಸೇರಿದಂತೆ ಸೇನೆಯಲ್ಲಿ ಸೇವೆಸಲ್ಲಿಸಿದ ಅನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದು, “ಆರ್ಟಿಕಲ್ 370′ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಜಿ. ಶಂಕರ್, “ಜಮ್ಮು ಮತ್ತು ಕಾಶ್ಮೀರದ ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಈ ಸಿನಿಮಾವನ್ನು ಮಾಡಿದ್ದೇವೆ. “ಆರ್ಟಿಕಲ್ 370′ ರದ್ದಾದ ಬಳಿಕ ಈಗ ಜಮ್ಮು ಮತ್ತು ಕಾಶ್ಮೀರ ಹೇಗಿದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಇದರಲ್ಲೊಂದು ಸಂದೇಶವಿದೆ. ಬಹುತೇಕರ ಅರಿವಿಗೆ ಬಾರದಿರುವ ಹಲವು ವಿಷಯಗಳನ್ನು ಸಿನಿಮಾದಲ್ಲಿ ಚರ್ಚಿಸಿದ್ದೇವೆ’ ಎಂದರು.
“ಈ ಸಿನಿಮಾದ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಇದೊಂದು ನೈಜ ಘಟನೆಗಳನ್ನು ಕುರಿತಾಗಿ ಮಾಡಿದ ಸಿನಿಮಾ. ಈ ಸಿನಿಮಾವನ್ನು ಮುಖ್ಯವಾಗಿ ಭಾರತೀಯ ಸೈನಿಕರು ಮತ್ತು ಕಾಶ್ಮೀರಿ ಪಂಡಿತರಿಗೆ ಸಮರ್ಪಿಸುತ್ತಿದ್ದೇವೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಮಾಡಿದ್ದೇವೆ. ಕನ್ನಡದ ಮಟ್ಟಿಗೆ ಇದೊಂದು ಹೊಸರೀತಿಯ ಸಿನಿಮಾ’ ಎನ್ನುವುದು ನಿರ್ಮಾಪಕ ಭರತ್ ಗೌಡ ಮಾತು.
ಸೆನ್ಸಾರ್‌ನಿಂದಲೂ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ ಚಿತ್ರತಂಡ, ಇದೇ ನವೆಂಬರ್ ವೇಳೆಗೆ “ಆರ್ಟಿಕಲ್ 370′ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ.