Advertisement

ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ದಡ್ಡರಲ್ಲ

08:41 AM Jun 04, 2019 | Suhan S |

ದಾವಣಗೆರೆ: ಕನ್ನಡ ಮಾಧ್ಯಮದಲ್ಲಿ ಓದುವವರು ದಡ್ಡರು ಎಂಬುದನ್ನು ಮಕ್ಕಳ ತಲೆಯಲ್ಲಿ ತುಂಬಬೇಡಿ ಎಂದು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಶಿಕ್ಷಕರಿಗೆ ತಾಕೀತು ಮಾಡಿದ್ದಾರೆ.

Advertisement

ಸೋಮವಾರ ನಿಟುವಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌, ಶಾಲಾ ಪ್ರಾರಂಭೋತ್ಸವ ಉದ್ಘಾಟನೆ, ಯೋಗ ಮತ್ತು ಪ್ರಸಾದ ಮಂದಿರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಮಾಧ್ಯಮದಲ್ಲಿ ಓದುವವರು ದಡ್ಡರು ಎಂಬುದನ್ನು ಮಕ್ಕಳ ತಲೆಯಲ್ಲಿ ತುಂಬದೆ ಕನ್ನಡ ಮಾಧ್ಯಮದಲ್ಲಿ ಓದಿದವರು ಸಹ ಬುದ್ಧಿವಂತರಾಗುತ್ತಾರೆ ಎಂಬುವಂತೆ ಎಲ್ಲಾ ಶಿಕ್ಷಕರು ಚೆನ್ನಾಗಿ ಪಾಠ ಮಾಡಬೇಕು ಎಂದರು.

ಇಂದಿನ ದಿನಮಾನಗಳಲ್ಲಿ ಕೂಲಿ ಮಾಡುವರು ಸಹ ನಾವಂತೂ ಓದಲಿಲ್ಲ. ನಮ್ಮ ಮಕ್ಕಳಾದರೂ ಓದಲಿ. ಇಂಜಿನಿಯರ್‌, ಡಾಕ್ಟರ್‌ ಆಗಲಿ ಎಂಬ ಆಸೆಯಿಂದ ಇಂಗ್ಲಿಷ್‌ ಮೀಡಿಯಂ ಶಾಲೆಗೆ ಕಳಿಸುವುದು ಕಂಡು ಬರುತ್ತದೆ. ಅದನ್ನ ಮನಗಂಡೇ ಕುಮಾರಸ್ವಾಮಿ ಅವರ ಸರ್ಕಾರ ರಾಜ್ಯದಲ್ಲಿ 1 ಸಾವಿರ ಇಂಗ್ಲಿಷ್‌ ಮೀಡಿಯಂ ಶಾಲೆ ಪ್ರಾರಂಭಿಸಿರುವುದು ಒಳ್ಳೆಯ ಚಿಂತನೆ. ಅದರ ಪ್ರಯೋಜನ ಎಲ್ಲರಿಗೂ ದೊರೆಯುವಂತೆ ಆಗಬೇಕು ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು ಸಹ ಚೆನ್ನಾಗಿ ಓದಿ ತಮ್ಮ ತಂದೆ-ತಾಯಿ, ಶಾಲೆಗೆ ಒಳ್ಳೆಯ ಹೆಸರು ತರಬೇಕು ಎಂದು ಆಶಿಸಿದರು.

ತಾಲೂಕು ಪಂಚಾಯತ್‌ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮಾತನಾಡಿ, ಕೆಲವಾರು ಶಿಕ್ಷಕರು ಶಾಲಾ ಅವಧಿಯಲ್ಲೂ ಸರ್ಕಲ್ ಮತ್ತಿತರೆ ಕಡೆ ಇರುವುದನ್ನು ನೋಡಿದ್ದೇನೆ. ಎಷ್ಟೇ ಹೇಳಿ, ನೋಟಿಸ್‌ ಕೊಟ್ಟರೂ ಅದೇ ರೀತಿ ಮಾಡುತ್ತಾರೆ. ಪಾಠ ಮಾಡಿದರೂ, ಮಾಡದೇ ಇದ್ದರೂ ಸಂಬಳ ಬರುತ್ತದೆ ಎಂಬ ಮನೋಭಾವನೆ ಒಳ್ಳೆಯದಲ್ಲ. ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

Advertisement

ಪ್ರಾಸ್ತಾವಿಕ ಮಾತುಗಳಾಡಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ, ಪೋಷಕರ ಬಹು ದಿನಗಳ ಬೇಡಿಕೆಯಂತೆ ಸರ್ಕಾರ 2019-20ನೇ ಸಾಲಿನಿಂದ ಜಿಲ್ಲೆಯಲ್ಲಿ 32 ಒಳಗೊಂಡಂತೆ ರಾಜ್ಯದಲ್ಲಿ 1 ಸಾವಿರ ಶಾಲೆಯಲ್ಲಿ ಆಂಗ್ಲ ಮಾಧ್ಯಮ, ಜಿಲ್ಲೆಯ 11 ಶಾಲೆಯಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಪ್ರಾರಂಭಿಸಿದೆ. ಇದರಿಂದ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಂತಹ ಗುರುತರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌ ಮಾತನಾಡಿ, ಇಂದಿನ ಜಾಗತೀಕರಣ ಕಾಲಘಟ್ಟದಲ್ಲಿ ಉನ್ನತ ಶಿಕ್ಷಣ, ಉದ್ಯೋಗ, ಸಂವಹನಕ್ಕೆ ಇಂಗ್ಲಿಷ್‌ ಕಲಿಕೆ ಅನಿವಾರ್ಯ. ಬಡ ಮಕ್ಕಳಿಗೂ ಇಂಗ್ಲಿಷ್‌ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಸರ್ಕಾರ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿದೆ. ಒಂದು ತರಗತಿಗೆ 30 ಮಕ್ಕಳಿಗೆ ಮಾತ್ರ ಎಂದು ಪ್ರವೇಶಾತಿ ನಿಗದಿಪಡಿಸುವುದರಿಂದ ಇತರೆ ಮಕ್ಕಳಿಗೆ ಅನ್ಯಾಯ ಆಗುತ್ತದೆ. ಹಾಗಾಗಿ ಬೇಡಿಕೆಗೆ ಅನುಗುಣವಾಗಿ ಪ್ರವೇಶವಕಾಶ ಕಲ್ಪಿಸುವತ್ತ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್‌ ಪಿ.ಎಸ್‌. ಜಯಣ್ಣ, ಎ.ವೈ. ಪ್ರಕಾಶ್‌, ಶಿವರುದ್ರಪ್ಪ, ಮುಕುಂದಪ್ಪ, ಪೈಲ್ವಾನ್‌ ಶಿವಕುಮಾರ್‌, ದುರುಗೇಶ್‌, ಆರ್‌.ಎಸ್‌. ತಿಪ್ಪೇಸ್ವಾಮಿ, ನರಸಿಂಹಮೂರ್ತಿ, ತಿಪ್ಪೇಸ್ವಾಮಿ, ಡಯಟ್ ಉಪ ನಿರ್ದೇಶಕ ಎಚ್.ಕೆ. ಲಿಂಗರಾಜ್‌, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶಿವಶಂಕರ್‌, ಮುಖ್ಯೋಪಾಧ್ಯಾಯ ಕೆ.ಟಿ. ಚಂದ್ರಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next