Advertisement
ಇಂಗ್ಲೆಂಡ್ ಗೆಳೆಯರ ಕನ್ನಡದ ಕನವರಿಕೆಇಂದು ಇಂಗ್ಲೀಷ್ ವಿಶ್ವವ್ಯಾಪಿಯಾಗಿರುವುದಕ್ಕೆ ಕಾರಣ ಇಷ್ಟೇ. ಇಂಗ್ಲೀಷ್ ಎನ್ನುವ ಭಾಷೆ ಕೇವಲ ಯಾವುದೋ ಒಂದು ದೇಶಕ್ಕೆ ಸೀಮಿತವಾಗಿ ಉಳಿದಿಲ್ಲ. ಎಷ್ಟು ದೇಶಗಳಲ್ಲಿ ಇಂಗ್ಲೀಷ್ ಬಳಕೆಯಾಗುತ್ತಿದೆಯೋ ಅಷ್ಟೇ ವಿಧವಾದ ಇಂಗ್ಲಿಷ್ ಕೂಡ ಅಸ್ತಿತ್ವಕ್ಕೆ ಬಂದಿದೆ. ಹೀಗೆ ಬಳಸುವುದರ ಮೂಲಕವೇ ಭಾಷೆಯೊಂದು ವೈವಿಧ್ಯಮಯವಾಗಿ ರೂಪುಗೊಳ್ಳಲು ಸಾಧ್ಯ. ಇದಕ್ಕೆ ಕನ್ನಡವೂ ಹೊರತಲ್ಲ.
Related Articles
Advertisement
ಭಾರತದಲ್ಲಿದ್ದಾಗ ಕನ್ನಡವನ್ನು ಅಪರೂಪಕ್ಕೆ ಬಳಸುತ್ತಿದ್ದವರು, ಅಲ್ಲಿಗೆ ಹೋದಮೇಲೆ ಹೊಸ ರೀತಿಯಲ್ಲಿ ಮಾತನಾಡುತ್ತಿದ್ದರು. ಕನ್ನಡ ಎನ್ನುವುದು ಕೇವಲ ಒಂದು ಭಾಷೆ ಎನ್ನುವ ಅವರ ಎಷ್ಟೋ ವರ್ಷಗಳ ನಂಬಿಕೆ ಇಂಗ್ಲೆಂಡ್ ವಾಸದ ಮೊದಲ ಕೆಲವು ತಿಂಗಳುಗಳಲ್ಲೇ ಕಳಚಿಬಿದ್ದಿತ್ತು. ಇಂಗ್ಲೆಂಡ್‌ನಲ್ಲಿ ಪರಿಚಿತರೊಂದಿಗೂ ಅಪರಿಚಿತರಂತೆ ಬದುಕುತ್ತಿದ್ದವರಿಗೆ, ಅಚಾನಕ್ ಆಗಿ ಯಾರಾದರೂ ಕನ್ನಡದವರು ಪರಿಚಯವಾದರೆ ದಶಕಗಳ ಹಳೆಯ ಸ್ನೇಹಿತರಂಥ ಭಾವವೊಂದು ಬೆಳೆದು ನಿಂತುಬಿಡುತ್ತಿತ್ತು. ಹಾಗಾದರೆ, ಒಟ್ಟಿಗೆ ಓದುತ್ತಿದ್ದ, ಒಡನಾಡುತ್ತಿದ್ದ ಇಂಗ್ಲೆಂಡ್ ಗೆಳೆಯರೊಂದಿಗೆ ಸಾಧ್ಯವಾಗದ ಆತ್ಮೀಯತೆ ಅದೇ ಮೊದಲು ಪರಿಚಯವಾದ ಕನ್ನಡಿಗರೊಂದಿಗೆ ಸಾಧ್ಯವಾಗಿದ್ದು ಹೇಗೆ? ನಾರ್ತ್‌ಹ್ಯಾಮ್‌ಟನ್ ವಿ.ವಿ.ಯಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದರೂ, ಇವರ ಕಣ್ಣು, ಕಿವಿಗಳು ಹುಡುಕುತ್ತಿದ್ದಿದ್ದು ಕನ್ನಡದವರನ್ನು.
ಭಾರತದಲ್ಲಿದ್ದಾಗ ಕನ್ನಡ ಮಾತನಾಡಲು, ಕನ್ನಡ ಸಿನಿಮಾಗಳನ್ನು ನೋಡಲು ಮೂಗು ಮುರಿಯುತ್ತಿದ್ದವರು, ಹೊರದೇಶದಲ್ಲಿ ಸಾವಿರಾರು ರೂಪಾಯಿಗಳನ್ನು ತೆತ್ತು ಸಿನಿಮಾ ನೋಡುತ್ತಿದ್ದರು. ಹಾಗೆ ನೋಡಿದ ಸಿನಿಮಾಗಳು ಉತ್ಕೃಷ್ಟವಲ್ಲದಿದ್ದರೂ ಅದು ಕನ್ನಡದ ಸಿನಿಮಾ ಎಂಬ ಒಂದು ಸಂಗತಿಯೇ ಅವರಿಗೆ ಖುಷಿ ಕೊಡುತ್ತಿತ್ತು. ನಿಮಗೆ ಮಾತೃಭಾಷೆ ಎಷ್ಟು ಮುಖ್ಯ ಎನಿಸುತ್ತದೆ ಎಂದು ಕೇಳಿದಾಗ, ಅವರು ಹೇಳಿದ್ದು - “ಕನ್ನಡವನ್ನ ನಾವು ನಿಜಕ್ಕೂ ಅರ್ಥ ಮಾಡಿಕೊಂಡಿದ್ದು ಇಂಗ್ಲೆಂಡ್‌ನಲ್ಲಿ!’.
ಸಂದೀಪ್ ಈಶಾನ್ಯ
ಇಂಗ್ಲೀಷ್‌ನಲ್ಲಿ ಕನಸು ಕಾಣುವುದು ಹೇಗೆ? ನನ್ನದು ಹಳ್ಳಿಯ ಶಾಲೆ, ಕನ್ನಡ ಮೀಡಿಯಮ್ಮು… ಥೇಟ್ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಸಿನಿಮಾ ಥರ ಇತ್ತು ನಮ್ಮ ಸ್ಕೂಲು. ನಾಲ್ಕು ತರಗತಿಗಳಿಗೆ ಒಬ್ಬರೇ ಈರಣ್ಣ ಮೇಷ್ಟ್ರು. ಒಂದೇ ಕೋಣೆ ಇದ್ದ ಪುಟ್ಟ ಸ್ಕೂಲು ನಮ್ಮದು. ದನಗಳ ದೊಡ್ಡಿಯಂತಿದ್ದ ಕ್ಲಾಸ್ ರೂಂನಲ್ಲಿ ಇಂಗ್ಲಿಷ್ ಇರಲಿ, ಕನ್ನಡ ಪಾಠ ಮಾಡಿದರೇ ಹೆಚ್ಚು. ಮುಂದೆ ಇಂಗ್ಲೀಷ್ ಮೀಡಿಯಂಗೆ ಸೇರಿದರೂ ನನ್ನ ಇಂಗ್ಲೀಷಿನಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. ಹಾಗೋ ಹೀಗೋ ಕಾಮರ್ಸ್ ಡಿಗ್ರಿ ಮುಗಿಸಿ ಎಂ.ಬಿ.ಎ.ಗೆಂದು ಬೆಂಗಳೂರಿಗೆ ಬಂದಾಗಲೇ ನನಗೆ ಗೊತ್ತಾಗಿದ್ದು ನನ್ನ ಇಂಗ್ಲೀಷ್ ಜ್ಞಾನ ಎಸ್… ನೋ…ಗೆ ಮಾತ್ರ ಸೀಮಿತವಾಗಿದೆ ಎಂದು. ಬಾಯಿ ತೆರೆದರೆ ಎಲ್ಲಿ ತಪ್ಪು ಮಾತನಾಡಿ ನಗೆಪಾಟಲಿಗೆ ಗುರಿಯಾಗುವೆನೋ ಎನ್ನುವ ಹಿಂಜರಿಕೆ ಕಾಡಿ, ಎಂಬಿಎಯ ಎರಡು ವರ್ಷ ನಾನೊಬ್ಬಳು ಸೀದಾ ಸಾದಾ ಪೆದ್ದು ಹುಡುಗಿ ಎನ್ನಿಸಿಕೊಂಡಿದ್ದೆ. ಹಗಲು- ರಾತ್ರಿ ಓದಿ, ಎಲ್ಲಾ ಸಬೆjಕr…ಗಳನ್ನು ಇಂಗ್ಲೀಷ್‌ನಲ್ಲೇ ಬರೆದು ಪಾಸು ಮಾಡುವಷ್ಟರ ಹೊತ್ತಿಗೆ ಹೊಟ್ಟೆಯೊಳಗಿರುವ ಕರುಳು ಕೈಗೆ ಬಂದಂತೆನ್ನಿಸಿತ್ತು. ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಜರೂರಿಗೆ, ಎಂಬಿಎ ಮುಗಿಯುವಷ್ಟರಲ್ಲಿ ಎಷ್ಟು ಬೇಕೋ ಅಷ್ಟು ಇಂಗ್ಲಿಷ್ ಕೈ ಹಿಡಿದಿತ್ತು! ಆಮೇಲೆ ಮದುವೆಯಾಗಿ ಅಮೆರಿಕಕ್ಕೆ ಹಾರಿದ ಮೇಲೆ ತಕ್ಕಮಟ್ಟಿಗಿದ್ದ ಇಂಗ್ಲೀಷ್ ಜ್ಞಾನ ಸಹಾಯಕ್ಕೆ ಬಂದಿತ್ತು. ಅಮೆರಿಕದ ಜಂಜಾಟದಲ್ಲಿ ಮುಳುಗಿದ್ದ ನನಗೆ, “ಏನಮ್ಮಾ, ಅಮೆರಿಕಾಗೆ ಹೋದ ಮೇಲೆ ನನ್ನನ್ನು ಮರೆತೇಬಿಟ್ಯಾ?’ ಎಂಬ ನೀಲುವಿನ ವಾಟ್ಸಾಪ್ ಸಂದೇಶ ಅಚ್ಚರಿ ತಂದಿತ್ತು. ನೀಲು ನನ್ನ ಬಾಲ್ಯದ ಗೆಳತಿ. ನಾವಿಬ್ಬರೂ ಒಂದೇ ಸ್ಕೂಲಿನಲ್ಲಿ ಓದಿದ್ದರಿಂದ ಸಲುಗೆ ಜಾಸ್ತಿ. ಅವಳ ಬಳಿ ಮಾತಾಡಿ ವರ್ಷಗಳೇ ಆಗಿದ್ದವು. ಬೆಂಗಳೂರಿನಲ್ಲಿ ವಾಸವಿದ್ದ ಆಕೆ ಮಾತಾಡುತ್ತಾ, “ಮೊನ್ನೆ ನನ್ನ ಮಗ ವಾಸುವಿನ ಸ್ಕೂಲ್‌ನಲ್ಲಿ ಪೇರೆಂಟ್- ಟೀಚರ್ ಮೀಟಿಂಗ್ ಇತ್ತು. ಅಲ್ಲಿಗೆ ಹೋದಾಗ ಅವರದೊಂದೇ ಕಂಪ್ಲೇಟು. ನಿಮ್ಮ ಮಗ ಕನ್ನಡದಲ್ಲಿ ಯೋಚಿಸಿ ಅದನ್ನು ಇಂಗ್ಲೀಷಿನಲ್ಲಿ ಉತ್ತರಿಸಲು ಪ್ರಯತ್ನಿಸುತ್ತಾನೆ. ಅವನಿಗೆ ಇಂಗ್ಲೀಷಿನಲ್ಲಿ ಯೋಚಿಸುವುದನ್ನು ಕಲಿಸಿ. ಇಲ್ಲ ಅಂದ್ರೆ ಟಿ.ಸಿ ತೆಗೆದುಕೊಂಡು ಬೇರೆ ಸ್ಕೂಲು ಸೇರಿಸಿ. ಹೀಗೆ ಆದ್ರೆ ಹತ್ತನೇ ಕ್ಲಾಸಲ್ಲಿ ತುಂಬಾ ಕಷ್ಟ ಆಗುತ್ತೆ ಮತ್ತು ನಮ್ಮ ಸ್ಕೂಲಿನ ರಿಸಲ್ಟ್ ಕಡಿಮೆಯಾಗುತ್ತದೆ ಎಂದರು. ಅದ್ಹೇಗೆ ಅವನನ್ನು ಇಂಗ್ಲೀಷಿನಲ್ಲಿ ಯೋಚಿಸುವಂತೆ ಮಾಡುವುದು?’ ಎಂದು ಕೇಳಿದಳು. ಅಮೆರಿಕದಲ್ಲಿರುವ ನಾವು ಮಗನಿಗೆ ಕನ್ನಡ ಕಲಿಸಬೇಕು ಅಂತ ಮನೆಯಲ್ಲಿ ಕನ್ನಡ ಬಿಟ್ಟರೆ ಇಂಗ್ಲೀಷಿನ ತಂಟೆಗೆ ಹೋಗಲ್ಲ. ಅದೇ ನಮ್ಮೂರಿನ ಜನರಿಗೆ ಇಂಗ್ಲೀಷ್ ಮೋಹ! ಹೋದ ವರ್ಷ ಬೆಂಗಳೂರಿಗೆ ಬಂದಿದ್ದಾಗ ಗೆಳತಿಯೊಬ್ಬಳು ಸಿಕ್ಕಿದ್ದಳು. ಅವಳು “ನೀನೇಕೆ ಇಂಗ್ಲೀಷಿನಲ್ಲಿ ಬರೆಯಬಾರದು ಅಥವಾ ಕನ್ನಡದಲ್ಲಿ ಬರೆದದ್ದನ್ನು ಇಂಗ್ಲೀಷಿಗೆ ಅನುವಾದಿಸಬಾರದು. ಕನ್ನಡ ಓದಲು ಕಷ್ಟ. ಇಂಗ್ಲಿಷ್ ಆದರೆ ಸುಲಭ’ ಅಂದಿದ್ದಳು. ಅವಳಿಗೆ ನಾನು ಉತ್ತರಿಸಿದೆ – “ನನ್ನ ಭಾವನೆಗಳು ಹುಟ್ಟುವುದು ಕನ್ನಡದಲ್ಲಿ. ಅದನ್ನು ತರ್ಜುಮೆ ಮಾಡುವಷ್ಟು ಇಂಗ್ಲೀಷು ನನಗೆ ಬಾರದು’. ಅವಳು ಸುಮ್ಮನಿರಲಾರದೆ “ಯು ಶುಡ್ ಟ್ರೈ. ಗೂಗಲ… ಟ್ರಾನ್ಸ್‌ಲೇಟ್‌ಗೆ ಹಾಕಿ ಅನುವಾದಿಸು’ ಎಂದಳು. ತಿರುಗೇಟು ನೀಡುವ ಮನಸ್ಸಾದರೂ ಸುಮ್ಮನಾದೆ. ಗೂಗಲ… ಅನ್ನೋ ಆ್ಯಪ್ ಕೇವಲ ಪದಗಳನ್ನು ಅನುವಾದಿಸಬಹುದಷ್ಟೆ ಹೊರತು, ಹೃದಯದ ಮಿಡಿತ, ಭಾವನೆಗಳನ್ನಲ್ಲ. ಅವೆಲ್ಲ ಮಾತೃಭಾಷೆಯಲ್ಲಿ ಮಾತ್ರ ವ್ಯಕ್ತವಾಗುತ್ತವೆ. ಅಲ್ವಾ? ಜಮುನಾ ರಾಣಿ ಎಚ್.ಎಸ್., ಅಮೆರಿಕ