Advertisement

ಕನ್ನಡ-ಮರಾಠಿ ಶಾಲೆ ಸ್ಥಿತಿ ಶೋಚನೀಯ

01:25 PM Dec 22, 2018 | |

ಬಸವಕಲ್ಯಾಣ: ತಾಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರ, ಆಂಧ್ರ ಪ್ರದೇಶ ಗಡಿ ಭಾಗದ ಹಾಗೂ ತಾಂಡಾ ಗ್ರಾಮಗಳಲ್ಲಿರುವ ಕನ್ನಡ ಶಾಲೆಗಳು ದುಸ್ಥಿತಿಯಲ್ಲಿವೆ. ಎಲ್ಲೆಡೆ ಶಿಕ್ಷಕರ ಕೊರತೆ, ಮಕ್ಕಳ ಪ್ರವೇಶವಿಲ್ಲದೇ ಸೊರಗಿದ್ದು, ಈ ಕುರಿತು ನಾವು ಚಿಂತನೆ ಮಾಡಬೇಕಾಗಿದೆ ಎಂದು ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಭಾಷಣ ಬೀಗಿಯುತ್ತಾರೆ. ಆದರೆ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯೇ ಅಧೋಗತಿಯಲ್ಲಿದ್ದರೂ ಯಾರೂ ಇತ್ತ ಗಮನ ಹರಿಸದಿರುವುದು ನೋವಿನ ಸಂಗತಿ.

Advertisement

ತಾಲೂಕಿನ ಹಳೆ ಶಾಲೆ ಇದಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಕೋಣೆಗಳ ಪಕ್ಕದಲ್ಲಿ ಹೊಸ ಕನ್ನಡ ನಿರ್ಮಿಸಿ 1ರಿಂದ 7ನೇ ತರಗತಿ ವರೆಗಿನ ಕನ್ನಡ ಮತ್ತು ಮರಾಠಿ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.
 
ಕನ್ನಡ ಮತ್ತು ಮರಾಠಿ ಸೇರಿ ಒಟ್ಟು 63 ವಿದ್ಯಾರ್ಥಿಗಳು ಹಾಗೂ 5 ಜನ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮರಾಠಿ-56 ವಿದ್ಯಾರ್ಥಿಗಳು ಇದ್ದರೆ, ಕನ್ನಡ ಶಾಲೆಗೆ ಕೇವಲ 7 ಜನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದರಲ್ಲಿ 4ನೇ ತರಗತಿಗೆ ಒಬ್ಬ, 5 ತರಗತಿಗೆ ಒಬ್ಬ ಹಾಗೂ 6ನೇ ತರಗತಿಗೆ 5 ಜನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದು ಶೋಚನೀಯ ಸ್ಥಿತಿಯಾಗಿದೆ. 

ಉಳಿದ 1, 2, 3, 7ನೇ ತರಗತಿಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಹಾಗಾಗಿ ಇರುವ ಮಕ್ಕಳನ್ನು ಒಂದೇ ಕೋಣೆಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತದೆ. ಶುಕ್ರವಾರ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ 7 ಜನ ವಿದ್ಯಾರ್ಥಿಗಳಲ್ಲಿ 4 ಜನ ವಿದ್ಯಾರ್ಥಿಗಳು ಗೈರು ಆಗಿರುವುದರಿಂದ 3 ಜನರಿಗೆ ಮಾತ್ರ ಶಿಕ್ಷಕರು ಪಾಠ ಹೇಳುತ್ತಿರುವುದು ಕಂಡಬಂತು.

ಶಾಲೆಯಲ್ಲಿ ಕಲಿಕೆಯ ವಾತಾವರಣ ನಿರ್ಮಾಣವಾಗಬೇಕಾದರೆ ಉತ್ತಮ ಪರಿಸರ ಇರುವುದು ತುಂಬಾ ಅವಶ್ಯ. ಆದರೆ ಈ ಶಾಲೆಯ ಆವರಣ ತಿಪ್ಪೆಗಿಂತ ಕನಿಷ್ಠವಾಗಿದೆ. ಆದರೂ ಇಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗುತ್ತದೆ. ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಈ ಶಾಲೆಯತ್ತ ಗಮನ ಹರಿಸದಿರುವುದು ವಿಪರ್ಯಾಸ.

ಆವರಣದಲ್ಲಿ ಕಸದ ರಾಶಿ: ಶಾಲೆ ಸ್ವತ್ಛಗೊಳಿಸಲು ಗುಮಾಸ್ತನಿಲ್ಲ. ಹಾಗಾಗಿ ಶಾಲೆ ಆವರಣದಲ್ಲಿ ಕಸದ ರಾಶಿ ಬಿದ್ದಿದೆ. ಹಾಗಾಗಿ ಇದೇನು ಶಾಲೆಯೊ ಅಥವಾ ಹಾಳು ಕಟ್ಟಡವೊ ಎಂಬಂತೆ ಭಾಸವಾಗುತ್ತದೆ. ಮಕ್ಕಳು ಓಡಾಡುವ ಶಾಲಾ ಆವರಣದಲ್ಲಿ ನಾಯಿ, ಹಂದಿಗಳು ತಿರುಗಾಡುತ್ತವೆ.
 
ಶೌಚಾಲಯಕ್ಕೆ ಬೀಗ: ಒಂದು ಕಡೆ ಸರ್ಕಾರ ಬಯಲು ಶೌಚ ಮುಕ್ತ ಮಾಡುವುದಕ್ಕಾಗಿ ಕೋಟ್ಯಂತ ರೂ. ಖರ್ಚು ಮಾಡುತ್ತಿದೆ. ಆದರೆ ಶಾಲೆಗಳಲ್ಲಿ ನಿರ್ಮಿಸಲಾದ ಬಹುತೇಕ ಶೌಚಾಲಗಳಿಗೆ ಬೀಗ ಹಾಕಲಾಗುತ್ತಿದೆ. ಇದರಿಂದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಶೌಚಾಲಯಗಳು ಉಪಯೋಗಕ್ಕೆ ಬರುವ ಮುನ್ನವೇ ಹಾಳಾಗುತ್ತಿವೆ.

Advertisement

ದಾಖಲೆಗಳಿಗೆ ಇಲ್ಲ ಸಂರಕ್ಷಣೆ: ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧ ಪಟ್ಟ ದಾಖಲೆಗಳು ಸಂರಕ್ಷಣೆ ಇಲ್ಲದೆ ಒಂದು ಕೋಣೆಯಲ್ಲಿ ಮನ ಬಂದಂತೆ ಬೀಸಲಾಗಿದೆ. ಹಾಗಾಗಿ ಇಲ್ಲಿ ಕಲಿತ ಮಕ್ಕಳು ಏನಾದರೂ ಮಾಹಿತಿ ಹೇಳಿದರೆ ದೇವರೆ ಗತಿ ಎಂಬಂತಿದೆ ದಾಖಲೆಗಳ ಸ್ಥಿತಿ. 

ಹತ್ತು ವರ್ಷಗಳಿಂದ ಶಾಲೆಯ ಸಮಸ್ಯೆ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತ ಬರಲಾಗುತ್ತಿದೆ. ಆದರೆ ಈ
ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಇದ್ದ ಸೌಕರ್ಯಗಳಲ್ಲಿಯೇ ಮಕ್ಕಳಿಗೆ ಪಾಠ ಕಲಿಸಲಾಗುತ್ತಿದೆ.
 ಮಾಣಿಕರಾವ್‌, ಮುಖ್ಯಶಿಕ್ಷಕ

ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next