Advertisement

ನಾಮಫಲಕ‌ದಲ್ಲಿ ಕನ್ನಡ ಕಡ್ಡಾಯ: ಡಿಸಿ

08:44 AM Jul 12, 2019 | Suhan S |

ಬೆಳಗಾವಿ: ಜಾಹೀರಾತು ಫಲಕಗಳಲ್ಲಿ ನಿಯಮಾವಳಿ ಪ್ರಕಾರ ಇಂತಿಷ್ಟು ಪ್ರಮಾಣದಲ್ಲಿ ಕನ್ನಡ ಬಳಕೆ ಮಾಡುವ ಕುರಿತು ಸಂಬಂಧಪಟ್ಟ ಜಾಹೀರಾತುದಾರರಿಗೆ ನೋಟಿಸ್‌ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಅವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕನ್ನಡ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಂಗಡಿ-ಮುಂಗಟ್ಟುಗಳ ಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ ಪಾಲಿಕೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ಅನ್ಯ ಭಾಷೆಗೆ ಪ್ರಾಧಾನ್ಯತೆ ನೀಡಿದರೆ ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಬಗ್ಗೆ ಪ್ರತಿ ಸಭೆಯಲ್ಲೂ ಚರ್ಚೆ ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಮೇಯರ್‌ ಸಿದ್ದನಗೌಡ ಪಾಟೀಲ ಒತ್ತಾಯಿಸಿದರು. ಕನ್ನಡ ಅನುಷ್ಠಾನದಲ್ಲಿ ಯಾವುದೇ ಇಲಾಖೆ ನಿರ್ಲಕ್ಷ್ಯ ತೋರಿಸಿದರೆ ಕ್ರಮ ಕೈಗೊಳ್ಳುವಂತೆ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ಸದಸ್ಯ ಅನಂತಕುಮಾರ್‌ ಬ್ಯಾಕೂಡ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಕನ್ನಡ ಅನುಷ್ಠಾನ ಸಭೆಯನ್ನು ನಿಯಮಿತವಾಗಿ ನಡೆಸಬೇಕು. ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಪತ್ರ ವ್ಯವಹಾರಗಳ ಕುರಿತು ನಿಗದಿತ ನಮೂನೆಯ ಮಾಹಿತಿಯನ್ನು ಕನ್ನಡ ಜಾಗೃತಿ ಸಮಿತಿಯ ಗಮನಕ್ಕೆ ತರುತ್ತಿಲ್ಲ. ಮುಂಬರುವ ದಿನಗಳಲ್ಲಿ ಸಮಿತಿ ಸದಸ್ಯರಿಗೂ ಸಭೆಗಿಂತ ಮುಂಚೆ ಮಾಹಿತಿ ಸಲ್ಲಿಸುವಂತೆ ಒತ್ತಾಯಿಸಿದರು.

ಕನ್ನಡದಲ್ಲಿ ದೋಷಾರೋಪಣೆ ಪಟ್ಟಿ: ಪೊಲೀಸ್‌ ಇಲಾಖೆಯಲ್ಲಿ ಕೆಲವು ಅನಿವಾರ್ಯ ಪ್ರಸಂಗ ಹೊರತುಪಡಿಸಿ ದರೆ ಬಹುತೇಕ ಆಡಳಿತ ವ್ಯವಹಾರ ಕನ್ಮಡದ ಲ್ಲಿಯೇ ನಡೆಯುತ್ತಿದೆ. ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಹಾಗೂ ದೋಷಾರೋಪಣೆ ಪಟ್ಟಿಯನ್ನು ಕನ್ನಡದಲ್ಲಿಯೇ ಸಲ್ಲಿಸಲಾಗುತ್ತಿದೆ ಎಂದು ಮಹಾನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ ತಿಳಿಸಿದರು.

Advertisement

ಶಿಕ್ಷಣ ಇಲಾಖೆ, ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಪ್ರತಿನಿಧಿಗಳನ್ನು ಕರೆಸುವ ಅಗತ್ಯವಿದೆ. ಅದೇ ರೀತಿ ಚಿಕ್ಕೋಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಕೆಲವು ನಗರಸಭೆ, ಪುರಸಭೆ ಸೇರಿಂದತೆ ಕೆಲ ಸ್ಥಳೀಯ ಸಂಸ್ಥೆಗಳು ಮರಾಠಿ ಫಲಕಗಳನ್ನು ಅಳವಡಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಈ ಬಗ್ಗೆ ಒಂದು ಸಭೆ ನಡೆಸಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಕನ್ನಡ ಫಲಕ ಬಳಕೆಗೆ ನಿರ್ದೇಶನ ನೀಡುವಂತೆ ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿ, ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ತಮ್ಮ ಕಚೇರಿಯ ಆಡಳಿತ ವೆಚ್ಚದಲ್ಲಿ ಅಳವಡಿಸುವಂತೆ ತಿಳಿಸಿದರು.

ಗಡಿ ತಾಲೂಕುಗಳಲ್ಲಿರುವ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ತಕ್ಷಣ ನಿಯೋಜಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ| ಬೂದೆಪ್ಪ ಎಚ್.ಬಿ., ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಡಾ| ಕವಿತಾ ಯೋಗಪ್ಪನವರ, ಶಿವಾನಂದ ಭಜಂತ್ರಿ, ರವಿ ಸೋಮಲಿಂಗಣ್ಣವರ ಸೇರಿದಂತೆ ಇತರರು ಇದ್ದರು.

 

ಹಿಂಡಲಗಾ ಪಿಡಿಒ ಅಮಾನತಿಗೆ ಜಿಲ್ಲಾಧಿಕಾರಿ ಆದೇಶ:

ಹಿಂಡಲಗಾ ಗ್ರಾಮ ಪಂಚಾಯಿತಿಯ ಪಿಡಿಒ ಬೇರೆ ಭಾಷೆಯಲ್ಲಿ ರಸೀದಿ ನೀಡುವ ಜತೆಗೆ ಆಡಳಿತದಲ್ಲಿ ಕನ್ನಡ ಅನುಷ್ಠಾನವನ್ನು ನಿರ್ಲಕ್ಷಿಸಿದ್ದು ಗಮನಕ್ಕೆ ಬಂದಿದ್ದು, ಕೂಡಲೇ ಪಿಡಿಒ ಅವರನ್ನು ತಕ್ಷಣವೇ ಅಮಾನತು ಮಾಡುವಂತೆ ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಸೂಚನೆ ನೀಡಿದರು. ಗ್ರಾಪಂನಿಂದ ರಸೀದಿ ಅನ್ಯ ಭಾಷೆಯಲ್ಲಿ ನೀಡಿರುವುದು ಆಡಳಿತದಲ್ಲಿ ಕನ್ನಡ ಅನುಷ್ಠಾನದ ವೈಫಲ್ಯ ತೋರಿಸುತ್ತದೆ. ಕಳೆದ ಬಾರಿಯ ಸಭೆಯಲ್ಲೂ ಈ ವಿಷಯ ಪ್ರಸ್ತಾಪ ಆಗಿರುವುದರಿಂದ ಕೂಡಲೇ ಪಿಡಿಒ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಹಿಂಡಲಗಾ ಗ್ರಾಪಂನಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸುತ್ತಿಲ್ಲ ಎಂದು ಸಭೆಯಲ್ಲಿ ಆರೋಪ ಕೇಳಿ ಬಂದಿದ್ದರಿಂದ ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಉಪ ಕಾರ್ಯದರ್ಶಿ ಎ.ಎಂ. ಪಾಟೀಲ, ಈಗಾಗಲೇ ಸಂಬಂಧಿಸಿದ ಪಿಡಿಒ ಹಾಗೂ ತಾಪಂ ಇಒ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ವಿವರಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next