Advertisement

Kannada Mandatory; ಕನ್ನಡ ಫ‌ಲಕ ಕಡ್ಡಾಯ: ಹೈಕೋರ್ಟ್‌ ತಾಕೀತು

02:26 AM Oct 25, 2024 | Team Udayavani |

ಬೆಂಗಳೂರು: “ಕರ್ನಾಟಕದಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತೀರಿ ಎಂದಾದರೆ ಕನ್ನಡ ಫ‌ಲಕ ಬಳಸಲು ಹಿಂದೇಟು ಏಕೆ?’ ಕರ್ನಾಟಕದಲ್ಲಿದ್ದ ಮೇಲೆ ಸೂಚನ ಫ‌ಲಕಗಳು ಕನ್ನಡದಲ್ಲಿ ಇರಲೇಬೇಕು’ ಎಂದು ಹೈಕೋರ್ಟ್‌ ತಾಕೀತು ಮಾಡಿದೆ.

Advertisement

ವಾಣಿಜ್ಯ, ವ್ಯವಹಾರ ನಡೆಸುವ ಅಂಗಡಿಗಳ ಎದುರಿನ ನಾಮಫ‌ಲಕಗಳಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯವಾಗಿ ಇರಬೇಕೆಂಬ ರಾಜ್ಯ ಸರಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಮುಂಬಯಿ ಯಲ್ಲಿ ಕೇಂದ್ರ ಕಚೇರಿ ಹೊಂದಿರುವ ರೀಟೇಲರ್ಸ್‌ ಅಸೋಸಿ ಯೇಶನ್‌ ಆಫ್ ಇಂಡಿಯಾ ಸಹಿತ 24 ಪ್ರತಿಷ್ಠಿತ ಖಾಸಗಿ ವಾಣಿಜ್ಯ ಸಂಸ್ಥೆಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಹೇಮಂತ ಚಂದನ ಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮೌಖೀಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ ಅರ್ಜಿ ದಾರರ ಪರ ವಕೀಲರು ನ. 1ರಂದು ಕನ್ನಡ ರಾಜ್ಯೋತ್ಸವ ಇದೆ, ಅನಂತರ ರಾಜ್ಯದಲ್ಲಿ ಕನ್ನಡ ಅಭಿಯಾನ ಆರಂಭವಾಗಲಿದೆ. ಹಾಗಾಗಿ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಪ್ರಕರಣದ ದಾಖಲೆಗಳನ್ನು ಗಮನಿಸಿದ ನ್ಯಾಯಪೀಠವು ನೀವು ಕ‌ರ್ನಾಟಕದಲ್ಲಿ ವಹಿವಾಟು ನಡೆಸುತ್ತಿರುವುದರಿಂದ ಕನ್ನಡದಲ್ಲಿ ಸೂಚನ ಫ‌ಲಕಗಳನ್ನು ಪ್ರದರ್ಶಿಸಲೇ ಬೇಕು, ವಿನಾಯಿತಿ ಇಲ್ಲ ಎಂದಿತು.

ಅಲ್ಲದೆ ಕನ್ನಡ ಭಾಷಾ ರಕ್ಷಣೆ ಸಂಬಂಧ ಶ್ರಮಿಸುತ್ತಿರುವ ಕನ್ನಡ ರಕ್ಷಣ ವೇದಿಕೆಯ ಹೋರಾಟವನ್ನು ನ್ಯಾಯಪೀಠ ಪ್ರಸ್ತಾವಿಸಿತು.ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ತಳ್ಳಿಹಾಕಿತು. ಆದರೆ ಈ ವಿಚಾರದಲ್ಲಿ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕಳೆದ ಮಾರ್ಚ್‌ 18ರಂದು ನೀಡಿದ್ದ ಮಧ್ಯಾಂತರ ಆದೇಶವನ್ನು ಮುಂದುವರಿಸಿ ವಿಚಾರಣೆಯನ್ನು ಮುಂದೂಡಿತು.

Advertisement

ಮಧ್ಯಾಂತರ ಆದೇಶದಲ್ಲೇನಿತ್ತು?
ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಕೂಡ ಕರ್ನಾಟಕದಲ್ಲಿ ವಾಣಿಜ್ಯ ವಹಿವಾಟು ನಡೆಸುವ ಸಂಸ್ಥೆಗಳು ಕನ್ನಡ ಭಾಷೆಯನ್ನು ಪಾಲಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು. ಆದರೆ ಸೂಚನಾ ಫ‌ಲಕಗಳಲ್ಲಿ ಶೇ. 60ರಷ್ಟು ಕನ್ನಡವಿಲ್ಲದ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಿಸುವುದು ಸರಿಯಲ್ಲ. ಮೇಲ್ನೋಟಕ್ಕೆ ಇದನ್ನು ಒಪ್ಪಲಾಗದು, ಸಂಸ್ಥೆಗಳಿಗೆ ಸ್ವಲ್ಪ ಕಾಲಾವಕಾಶ ನೀಡಬೇಕಾಗುತ್ತದೆ ಎಂದು ಹೇಳಿತ್ತು. ಅಲ್ಲದೆ ಸದ್ಯಕ್ಕೆ ವಾಣಿಜ್ಯ ಸಂಸ್ಥೆಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಮಾ. 18ರಂದು ಮಧ್ಯಾಂತರ ಆದೇಶ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next