ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳನ್ನು ಕನ್ನಡ ಸಾಹಿತ್ಯದತ್ತ ಆಕರ್ಷಿಸುವ ಸವಾಲು ಗೆಲ್ಲಬೇಕು ; ಸಾಹಿತ್ಯಿಕ ಪುರಸಾರಕ್ಕೆ ಸಾಧನೆಯೊಂದೇ ಮಾನದಂಡವಾಗಲಿ
ಸದಭಿರುಚಿ ಸಾಹಿತ್ಯ ಬೆಳೆಸಲು ಪತ್ರಿಕೆ, ವಿದ್ಯುನಾನ ಮಾಧ್ಯಮ, ಪುಸ್ತಕ ಪ್ರಕಾಶಕರು ಮುಂದಾಗಲಿ
ಕಳೆದ 50 ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಾಗಿಬಂದ ದಾರಿ ಮತ್ತು ಪಡೆದುಕೊಂಡ ತಿರುವುಗಳು ಯಾವುವು? ಕನ್ನಡ ಸಾಹಿತ್ಯ ಈ ದಿನಗಳಲ್ಲಿ ಯಾವ ಮಾರ್ಗ ಹಿಡಿಯುತ್ತಿದೆ?ಸಾಹಿತ್ಯದ ಯಾವ ಪ್ರಕಾರ ಹೆಚ್ಚು ಪ್ರಖರವಾಗಿದೆ? ಓದುಗರ ಸಂಖ್ಯೆ ಕುಸಿಯುತ್ತಿದೆ ಎಂಬ ಆತಂಕದ ನಡುವೆಯೇ ಪ್ರಕಟವಾಗುತ್ತಿರುವ ಕೃತಿಗಳ ಸಂಖ್ಯೆ ಹೆಚ್ಚುತ್ತಿದೆಯಲ್ಲ; ಅದರ ಹಿಂದಿನ ಗುಟ್ಟೇನು? ಕನ್ನಡ ಸಾಹಿತ್ಯದ ಮುಂದಿರುವ ಸವಾಲುಗಳೇನು?- ಈ ಎಲ್ಲ ಪ್ರಶ್ನೆಗಳಿಗೂ ಇಲ್ಲಿ ಉತ್ತರವಿದೆ…
1973ರಲ್ಲಿ ಮೈಸೂರು ರಾಜ್ಯ ಮೈಕೊಡವಿಕೊಂಡು ಎದ್ದು “ಕರ್ನಾಟಕ’ವಾದಾಗ, ಸಾಹಿತ್ಯದಲ್ಲಿ ನವ್ಯದ ಕಾವು ಕಡಿಮೆ ಯಾಗಿ ಬಂಡಾಯದ ಕಹಳೆ ಕೇಳತೊಡಗಿತ್ತು. ದಲಿತ ಸಾಹಿತ್ಯ ಎಂಬ ಮಾತೂ ಚಲಾವಣೆಗೆ ಬರತೊಡಗಿತ್ತು. ನಾನು ಆಗಷ್ಟೆ ಕಾಲೇಜು ವಿದ್ಯಾಭ್ಯಾಸಕ್ಕೆಂದು ಹಟ್ಟಿಕುದ್ರು ಎಂಬ ಹಳ್ಳಿಯಿಂದ ಬೆಂಗಳೂರಿಗೆ ಬಂದಿದ್ದೆ. ಅಲ್ಲಿ ನಡೆಯುತ್ತಿದ್ದ ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕ್ರಮಗಳು, “ಸಮುದಾಯ’ದ ಬೀದಿ ನಾಟಕಗಳು ಸಾಹಿತ್ಯದಲ್ಲಿ ಆಸಕ್ತಿ ಇದ್ದ ನನ್ನಂಥ ಯುವಕರನ್ನು ಆಕರ್ಷಿಸುತ್ತಿದ್ದವು.
“ಸಂಕ್ರಮಣ’, “ಶೂದ್ರ’ದಂಥ ಸಾಹಿತ್ಯಿಕ ಪತ್ರಿಕೆಗಳು ಹೊಸ ಬರಹಗಾರರಿಗೆ ಅವಕಾಶ ನೀಡುತ್ತಿದ್ದವು. ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ, ಸೈದ್ಧಾಂತಿಕ ಬದ್ಧತೆ, ಇಸಂಗಳು, ಕಲೆಗಾಗಿ ಕಲೆ ಮುಂತಾದವುಗಳ ಬಗ್ಗೆ ಎಲ್ಲೆಡೆ ಗಂಭೀರ ಚರ್ಚೆಗಳು ನಡೆಯುತ್ತಿದ್ದ ಸಮಯವದು. ಇದರ ಪರಿಣಾಮ ವಾಗಿ ಪ್ರೇಮ, ಕಾಮ, ಅನಾಥಪ್ರಜ್ಞೆ ಮುಂತಾದ ಸಂಗತಿಗಳ ಶೋಧನೆಯಲ್ಲಿ ನಿರತರಾಗಿದ್ದ ನವ್ಯ ಸಾಹಿತಿಗಳೂ ಜೀವಪರ ನಿಲುವು ತಳೆಯುವುದು ಅನಿವಾರ್ಯವಾಗಿ ನವ್ಯೋತ್ತರ ಎಂಬ ಹೊಸ ಸಾಹಿತ್ಯ ಮಾರ್ಗ ರೂಪುಗೊಂಡಿತು.
ಸಾಹಿತ್ಯೇತರ ಕ್ಷೇತ್ರದವರು, ಮಹಿಳೆಯರು, ಶೋಷಿತ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡು ಹೊಸ ಅನುಭವ ಲೋಕವನ್ನು ಓದುಗರ ಮುಂದೆ ತೆರೆದಿಟ್ಟರು. ಬಂಡಾಯ ಚಳವಳಿ, ಬರಹಗಾರರಿಗೆ ನವ್ಯವನ್ನು ಪ್ರಶ್ನಿಸುವ ಧೈರ್ಯವನ್ನು ನೀಡಿತು. ಸರಳವಾದ ಹೋರಾಟದ ಹಾಡುಗಳು, ಹೊಸ ಸಂವೇದನೆಯ ಭಾವಗೀತೆಗಳು, ಹೊಸ ಶೈಲಿಯ ಮಕ್ಕಳ ಕವಿತೆಗಳು ಮತ್ತು ಮುಕ್ತ ಛಂದದ ಹನಿಗವನಗಳ ಮೂಲಕ ಸಾಹಿತ್ಯ ಪುನಃ ಜನರಿಗೆ ಹತ್ತಿರವಾಯಿತು.
ಅ ಕಾಲವೇ ಹಾಗಿತ್ತು…
ಅಂದು ಕೆಲವೇ ಪತ್ರಿಕೆಗಳಿದ್ದರೂ ಅವುಗಳಲ್ಲಿ ಸಾಹಿತ್ಯಕ್ಕೆ ಹೆಚ್ಚು ಅವಕಾಶವಿತ್ತು. ಉತ್ತಮ ಕೃತಿಗಳ ಬಗ್ಗೆ ಸುದೀರ್ಘ ವಿಮರ್ಶೆ, ಚರ್ಚೆ ಪ್ರಕಟವಾಗುತ್ತಿತ್ತು. ಅವುಗಳನ್ನು ಓದಿದವರು ಆ ಕೃತಿಗಳನ್ನು ಹುಡುಕಿ ಓದುತ್ತಿದ್ದರು. ಹೊಸಬರು ಹಿರಿಯ ಲೇಖಕರಿಗೆ ಪುಸ್ತಕ ಕಳುಹಿಸಿದರೆ ಉತ್ತರ ಬರುತ್ತಿತ್ತು. ಸಾಹಿತ್ಯ ಸಮ್ಮೇಳನಗಳಲ್ಲಿ ಅವಕಾಶ, ಸರಕಾರಿ ಪ್ರಶಸ್ತಿಗಳು ಉತ್ತಮ ಲೇಖಕರನ್ನು ಅರಸಿಕೊಂಡು ಬರುತ್ತಿದ್ದವು. ಮಕ್ಕಳು, ಗೃಹಿಣಿಯರು ಸಾಹಿತ್ಯ ಕೃತಿಗಳನ್ನು ಓದುತ್ತಿದ್ದರು. ಕವಿಗೋಷ್ಠಿಗಳು ಆಗಾಗ ನಡೆಯುತ್ತಿದ್ದವು. ಗ್ರಂಥಾಲಯಗಳಲ್ಲಿ, ಸಾಹಿತ್ಯಿಕ ಸಮಾರಂಭಗಳಲ್ಲಿ ನಿವೃತ್ತರ ಜತೆಗೆ ಯುವಕ, ಯುವತಿಯರೂ ಇರುತ್ತಿದ್ದರು. ಒಳ್ಳೆಯ ಕೃತಿಗಳು ಯಾವ ಪ್ರಕಾರಕ್ಕೆ ಸೇರಿದ್ದರೂ ಪ್ರಕಟನೆ ಹಾಗೂ ಮಾರಾಟಕ್ಕೆ ಅಡ್ಡಿಯಾಗುತ್ತಿರಲಿಲ್ಲ. ಬರಹಗಾರರು ಮತ್ತು ಓದುಗರಲ್ಲಿ ಸಾಹಿತ್ಯದ ಹಸಿವು ತೀವ್ರವಾಗಿತ್ತು. ಅದನ್ನು ನೀಗಿಸಿಕೊಳ್ಳಲು ಆಗ ನಮಗಿದ್ದ ಸಾಧನ ಪುಸ್ತಕ ಮತ್ತು ಪತ್ರಿಕೆಗಳು ಮಾತ್ರ.
ಬದಲಾದ ರೀತಿ, ಎದುರಾದ ಸವಾಲು…
ಇವೆಲ್ಲ “ಇತ್ತು’ಗಳ ಮಾತಾಯಿತು. ಕಾಲದ ಓಟದಲ್ಲಿ ಇತರ ಕ್ಷೇತ್ರಗಳಂತೆ ಸಾಹಿತ್ಯದ ರೀತಿ ನೀತಿಗಳೂ ಬದಲಾಗುತ್ತ ಸಾಗಿದವು. ಹಲವು “ಇತ್ತು’ಗಳು ಕ್ರಮೇಣ ಇಲ್ಲವಾಗಿ ಹೊಸ ವಿದ್ಯಮಾನಗಳು, ಸವಾಲುಗಳು ಎದುರಾದವು. ಸಾಹಿತ್ಯ ಪರಿಷತ್ತು, ಅಕಾಡೆಮಿಗಳಂಥ ವ್ಯವಸ್ಥೆಯ ವಿರುದ್ಧ ಬಂಡಾಯ ಸಾರಿದವರೇ ರಾಜಿ ಮಾಡಿಕೊಂಡು ಅಧಿಕಾರ, ಪುರಸ್ಕಾರಗಳ ಫಲಾನುಭವಿಗಳಾದರು. ಅಂಥ ಸಂಸ್ಥೆಗಳಲ್ಲಿ ತಮ್ಮೊಂದಿಗೆ ತಮ್ಮ ಅನುಯಾಯಿಗಳನ್ನೇ ತುಂಬಿಸಿಕೊಂಡರು. ವಿಮರ್ಶಕರು ಸಂಸ್ಕೃತಿ ಚಿಂತಕರಾಗಿ ಬದಲಾದರು. ಶ್ರೇಷ್ಠತೆಯ ಬದಲು ಸೈದ್ಧಾಂತಿಕ ನಿಲುವು, ಧರ್ಮ, ಜಾತಿ, ಪ್ರಾದೇಶಿಕತೆ, ಪ್ರಭಾವ ಮುಂತಾದವುಗಳು ಪ್ರಶಸ್ತಿಗಳಿಗೆ ಮಾನದಂಡವಾದವು. ಮೈಸೂರು ರಾಜ್ಯ ಕರ್ನಾಟಕವಾಗುವ ಮೊದಲು 17 ವರ್ಷಗಳಲ್ಲಿ ಕನ್ನಡಕ್ಕೆ 2 ಜ್ಞಾನಪೀಠ ಪ್ರಶಸ್ತಿ ಬಂದಿತ್ತು. ಅನಂತರ 37 ವರ್ಷಗಳಲ್ಲಿ 6 ಜ್ಞಾನಪೀಠ ಪ್ರಶಸ್ತಿಗಳು ಬಂದವು. ಕಳೆದ 14 ವರ್ಷಗಳಿಂದ ಕನ್ನಡಕ್ಕೆ ಜ್ಞಾನಪೀಠ ಬಂದೇ ಇಲ್ಲ. ಇಷ್ಟು ಅಂತರ ಎಂದೂ ಆಗಿಲ್ಲ. ಇದಕ್ಕೆ ಕಾರಣ ಉತ್ತಮ ಸಾಹಿತಿಗಳ ಕೊರತೆಯೆ? ಅಥವಾ ಪ್ರಶಸ್ತಿಗಳ ಗುಪ್ತ ಮಾನದಂಡಗಳು ಬದಲಾಗಿರುವುದೆ?
ಬದಲಾದ ಕಾಲ ಸಾಹಿತ್ಯದ ಮೇಲೆ ಪ್ರಭಾವ
ಸಾಹಿತ್ಯ ಸಮಾಜದ ಪ್ರತಿಬಿಂಬ. ತಂತ್ರಜ್ಞಾನದಲ್ಲಾದ ಕ್ರಾಂತಿ, ಜಾಗತೀಕರಣ, ವಾಣಿಜ್ಯೀಕರಣ ಮೊದಲಾದವುಗಳು ನಮ್ಮ ಬದುಕಿನಂತೆ ಸಾಹಿತ್ಯದ ಮೇಲೂ ಪ್ರಭಾವ ಬೀರಿವೆ. ಕನ್ನಡ ಅನ್ನದ ಭಾಷೆಯಾಗಿಲ್ಲದಿರುವುದರಿಂದ ಆಂಗ್ಲ ಮಾಧ್ಯಮ ಗ್ರಾಮೀಣ ಪ್ರದೇಶದವರನ್ನೂ ಸೆಳೆಯುತ್ತಿದೆ. ಪರಿಣಾಮವಾಗಿ ವಿದ್ಯಾರ್ಥಿ ದೆಸೆಯಲ್ಲೆ ಕನ್ನಡ ಸಾಹಿತ್ಯ ಓದುವವರ, ರಚಿಸುವವರ ಸಂಖ್ಯೆ ಕಡಿಮೆಯಾಗಿದೆ. 2012ರಲ್ಲಿ ಅಕ್ಕ ಸಮ್ಮೇಳನಕ್ಕೆಂದು ನಾನು ಮೊದಲ ಸಲ ಅಮೆರಿಕಕ್ಕೆ ಬಂದಾಗ, ನನ್ನನ್ನು ಮಾತನಾಡಿಸಿದ ಯುವಕ, ಯುವತಿಯರು “ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ. ಕಾಲೇಜು ದಿನಗಳಿಂದಲೂ ನಿಮ್ಮ ಹನಿಗವನಗಳನ್ನು ಓದುತ್ತಿದ್ದೇನೆ’ ಎಂದಿದ್ದರು. ಈ ಬಾರಿ ಬಂದಾಗ ಸಿಕ್ಕ ಯುವಕ, ಯುವತಿಯರು “ಸರ್, ನಮ್ಮ ಪೇರೆಂಟ್ಸ್ ನಿಮ್ಮ ಬಿಗ್ ಫ್ಯಾನ್’ ಅಂದರು!
ಪುಸ್ತಕದ ಜಾಗಕ್ಕೆ ಮೊಬೈಲ್ ಬಂದಿದೆ…
ಬಿಡುವಿನ ವೇಳೆಯಲ್ಲಿ ಕಾದಂಬರಿ ಓದುತ್ತಿದ್ದ ಮಹಿಳೆಯರು ಈಗ ಟಿವಿ ಧಾರಾವಾಹಿಗಳು ಮತ್ತು ಮೊಬೈಲ್ ವೀಕ್ಷಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಯುವ ಜನಾಂಗಕ್ಕೆ ಸಾಹಿತ್ಯದ ಓದಿಗಿಂತ ರೀಲ್ಸ್ ಹೆಚ್ಚು ಆಕರ್ಷಕವಾಗಿದೆ. ಹೊಸದಾಗಿ ಬರೆಯುವವರ ಮುಂದೆ 73ರಲ್ಲಿ ಇದ್ದಂಥ ಯಾವುದೇ ಪಂಥ ಅಥವಾ ಚಳವಳಿಗಳಿಲ್ಲ. ಅಂದು ಮಾರ್ಗದರ್ಶನ ನೀಡುತ್ತಿದ್ದವರು ಇಂದು ಹಿಂಬಾಲಕರನ್ನು ನಡುನೀರಿನಲ್ಲಿ ಕೈ ಬಿಟ್ಟು ಅವಕಾಶವಾದಿಗಳಾಗಿ ತಮ್ಮ ಸ್ಥಾನಮಾನಗಳನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ಅವಕಾಶ ವಂಚಿತ ಹಿರಿಯರು ಹೋರಾಟ, ಬರವಣಿಗೆ ಎರಡನ್ನೂ ಬಿಟ್ಟು ಸಿನಿಕರಾಗಿ ಎಲ್ಲರನ್ನೂ ಟೀಕಿಸುತ್ತಿದ್ದಾರೆ. ಯುವ ಲೇಖಕರು ಭಾಗವಹಿಸುವ ಸ್ಪರ್ಧೆಗಳಲ್ಲಿ ಹಿರಿಯರೂ ಭಾಗವಹಿಸುತ್ತಿರುವುದು ಹಿರಿಯರು ಅವಜ್ಞೆಗೆ ಒಳಗಾಗಿರುತ್ತಾರೆ ಅನ್ನುವುದನ್ನು ಸೂಚಿಸುತ್ತಿದೆ. ಕಿರಿಯರ ಬರಹಗಾರರಲ್ಲಿ ಅಧ್ಯಯನದ ಕೊರತೆ ಕಾಣಿಸುತ್ತಿದೆ.
ಈಗ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ
ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಅವಕಾಶ ಕಡಿಮೆಯಾಗಿರುವುದರಿಂದ ಯುವ ಬರಹಗಾರರು ಸಾಮಾಜಿಕ ಜಾಲತಾಣವನ್ನು ನೆಚ್ಚಿಕೊಂಡಿದ್ದಾರೆ. ಜರಡಿಯೇ ಇಲ್ಲದ, ಯಾರು ಏನು ಬೇಕಾದರೂ ಬರೆಯಬಹುದಾದ ಸಾಮಾಜಿಕ ಜಾಲತಾಣಗಳಿಂದ ಹಲವು ಹಿರಿಯ ಸಾಹಿತಿಗಳು ದೂರವಿದ್ದಾರೆ. ಕೆಲವರು ಅವುಗಳನ್ನು ತಮ್ಮ ಕೃತಿಗಳ ಮತ್ತು ಸಾಧನೆಗಳ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಮುದ್ರಣ ತಂತ್ರಜ್ಞಾನದಲ್ಲಿ ಆಗಿರುವ ಬದಲಾವಣೆಗಳಿಂದ ಪುಸ್ತಕಗಳು ಬಹಳ ಬೇಗ ಮತ್ತು ಆಕರ್ಷಕವಾಗಿ ಮುದ್ರಣಗೊಳ್ಳುತ್ತಿವೆ. ಪುಸ್ತಕ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ ಅನ್ನುವ ಕೂಗಿನ ನಡುವೆಯೂ ಅನಿವಾರ್ಯವಾಗಿ ಸ್ವಯಂ ಪ್ರಕಾಶಕರಾಗುವವರ, ಸರಕಾರದ ಸಗಟು ಖರೀದಿಯನ್ನು ನಂಬಿಕೊಂಡ ಪ್ರಕಾಶಕರ ಸಂಖ್ಯೆ ಕಡಿಮೆಯಾಗಿಲ್ಲ. ಇ ಬುಕ್, ಆಡಿಯೊ ಬುಕ್, ಇ ಪತ್ರಿಕೆಗಳು ಚಲಾವಣೆಗೆ ಬಂದು ಸಾಕಷ್ಟು ಸಮಯವಾದರೂ ಅವು ಮುದ್ರಿತ ಪುಸ್ತಕ/ ಪತ್ರಿಕೆಗಳಿಗೆ ಸವಾಲಾಗುವಷ್ಟು ಬೆಳೆಯದಿರುವುದರಿಂದ ಪುಸ್ತಕ ಪ್ರೇಮಿಗಳು, ಪ್ರಕಾಶಕರು, ಮಾರಾಟಗಾರರು ಆತಂಕ ಪಡುವ ಪರಿಸ್ಥಿತಿ ಬಂದಿಲ್ಲ ಅನ್ನಬಹುದು. ಕಾದಂಬರಿಗೆ ಹೆಚ್ಚು ಬೇಡಿಕೆ ಇದೆ. ಚೆನ್ನಾಗಿದ್ದರೆ ಇತರ ಪ್ರಕಾರದ ಕೃತಿಗಳೂ ಮಾರಾಟವಾಗುತ್ತವೆ.
ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳನ್ನು ಕನ್ನಡ ಸಾಹಿತ್ಯದತ್ತ ಆಕರ್ಷಿಸದಿದ್ದರೆ ಸಾಹಿತ್ಯಕ್ಕೆ ಅಪಾಯವಿದೆ. ಅವರನ್ನು ಸೆಳೆಯುವುದು ಹೇಗೆ? ಎಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲು. ಇದರಲ್ಲಿ ಹೆತ್ತವರ ಪಾತ್ರ ಬಹಳ ಮುಖ್ಯ. ಬಾಲ್ಯದಲ್ಲೇ ಮನೆಯಲ್ಲಿ ಸಾಹಿತ್ಯಿಕ ವಾತಾವರಣವಿದ್ದರೆ ಮಕ್ಕಳು ದೊಡ್ಡವರಾದ ಅನಂತರವೂ ಸಾಹಿತ್ಯ ಪ್ರಿಯರಾಗಿರುತ್ತಾರೆ. ಸದಭಿರುಚಿಯ ಸಾಹಿತ್ಯವನ್ನು ಬೆಳೆಸುವ ಜವಾಬ್ದಾರಿ ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮ ಮತ್ತು ಪುಸ್ತಕ ಪ್ರಕಾಶಕರ ಮೇಲೂ ಇದೆ. ಸರಕಾರ ಇವರನ್ನು ಬೆಂಬಲಿಸಬೇಕು. ಸಾಹಿತಿಗಳು ಕ್ರಿಯಾಶೀಲರಾಗಿರುವಾಗಲೇ ಅವರನ್ನು ಗುರುತಿಸಬೇಕು. ಅಕಾಡೆಮಿಯಂಥ ಸಂಸ್ಥೆಗಳು ಕಳೆದ 50 ವರ್ಷಗಳಲ್ಲಿ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಅತ್ಯುತ್ತಮ ಸಾಹಿತ್ಯ ಕೃತಿಗಳ ಸಂಕಲನ (Antholoy) ಪ್ರಕಟಿಸಿದರೆ ಓದುಗರಿಗೆ ಅನುಕೂಲವಾಗುತ್ತದೆ. ಸಾಹಿತ್ಯಿಕ ಪುರಸ್ಕಾರಕ್ಕೆ ಸಾಧನೆಯೊಂದೇ ಮಾನದಂಡವಾಗಬೇಕು. ಆಗಬೇಕಾದ್ದು ಬಹಳ ಇವೆ. ಇವೆಲ್ಲವೂ ಆದರೆ ಕನ್ನಡ ಸಾಹಿತ್ಯದ ಭವಿಷ್ಯ ಉಜ್ವಲವಾಗಿದೆ ಅಂತಲೇ ಅನ್ನಬಹುದು.
ಆಗಬೇಕಾದ್ದೇನು?
1. ರಾಜ್ಯದಲ್ಲಿ ಸಾಹಿತ್ಯಿಕ ಪುರಸ್ಕಾರಕ್ಕೆ ಸಾಧನೆಯೊಂದೇ ಮಾನದಂಡವಾಗಬೇಕು. ಚಿಂತನೆ ನಡೆಯಲಿ
2. ಪುಸ್ತಕ ಓದುವ ಅಭಿರುಚಿಯನ್ನು ಮಕ್ಕಳಿಗೆ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಅಗತ್ಯ
3. ಕನ್ನಡದ ಸದಭಿರುಚಿಯ ಸಾಹಿತ್ಯವನ್ನು ಬೆಳೆಸಲು ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಮತ್ತು ಪುಸ್ತಕ ಪ್ರಕಾಶಕರು ಮುಂದಾಗಬೇಕು.
4. ಕಳೆದ 50 ವರ್ಷಗಳಲ್ಲಿ ಕನ್ನಡದಲ್ಲಿ ಪ್ರಕಟವಾದ ಎಲ್ಲ ಅತ್ಯುತ್ತಮ ಕೃತಿಗಳ ಪಟ್ಟಿ ಪ್ರಕಟಿಸಿದರೆ ಓದುಗರಿಗೆ ಅನುಕೂಲವಾಗುತ್ತದೆ.
5. ಕ್ರಿಯಾಶೀಲವಾಗಿರುವಾಗಲೇ ಸಾಹಿತಿಗಳನ್ನು ಗುರುತಿಸಿ, ಗೌರವಿಸುವ ಕೆಲಸವಾಗಬೇಕು
-ಎಚ್.ಡುಂಡಿರಾಜ್,
ಖ್ಯಾತ ಕವಿ