Advertisement
ಕೇಂದ್ರ ಪಠ್ಯಕ್ರಮ ಬೋಧಿಸುವ ಐಸಿಎಸ್‌ಇ, ಸಿಬಿಎಸ್‌ಇ ಮತ್ತು ಇನ್ನಿತರ ಪಠ್ಯಕ್ರಮ ಬೋಧಿಸುವ ಶಿಕ್ಷಣ ಸಂಸ್ಥೆಗಳು ಎನ್‌ಒಸಿ ಪಡೆಯುವ ಸಂಬಂಧ ಶಿಕ್ಷಣ ಇಲಾಖೆಯು ಕರಡು ಅಧಿಸೂಚನೆ ಪ್ರಕಟಿಸಿದೆ.
Related Articles
ಯಾವುದೇ ಶಿಕ್ಷಣ ಸಂಸ್ಥೆಯು ಎನ್‌ಒಸಿ ಪಡೆಯಲು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1 ಎಕ್ರೆ ಜಮೀನು ಹೊಂದಿರಬೇಕು. ನಗರಸಭೆ ಅಥವಾ ಪಟ್ಟಣ ಪಂಚಾಯತ್‌ನಲ್ಲಿ 1 ಎಕರೆ ಜಮೀನಿನ ಜತೆಗೆ ಆಟದ ಮೈದಾನವಿರಬೇಕು. ಗ್ರಾಮ ಪಂಚಾತ್ ವ್ಯಾಪ್ತಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 2 ಎಕ್ರೆ ಜಮೀನು ಅಥವಾ ಸಿಬಿಎಸ್‌ಇ, ಐಸಿಎಸ್‌ಇ ನಿಗದಿಪಡಿಸಿರುವಷ್ಟು ಜಾಗವಿರಬೇಕು.
Advertisement
ಸಿಎ ಸೈಟು ಪಡೆದಿದ್ದಲ್ಲಿ ಜಮೀನಿನ ಒಡೆತನವು ಸಂಬಂಧಪಟ್ಟ ವಿದ್ಯಾಸಂಸ್ಥೆ, ಸೊಸೈಟಿ ಅಥವಾ ಮಂಡಳಿಯ ಹೆಸರಿನಲ್ಲಿ ಇರಬೇಕು. ಕನಿಷ್ಠ 30 ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಭೋಗ್ಯಕ್ಕೆ ಪಡೆದಿರಬೇಕು. ನೋಂದಾಯಿತ ಸಂಸ್ಥೆಯು ಶಾಲಾ ನೋಂದಣಿ ಪ್ರಮಾಣ ಪತ್ರ, ಮಾನ್ಯತೆ ನವೀಕರಣ ಪತ್ರ ಹೊಂದಿರಬೇಕು. ಕಳೆದ ಮೂರು ವರ್ಷಗಳ ಲೆಕ್ಕ ಪರಿಶೋಧನಾ ವರದಿ ಹೊಂದಿರಬೇಕು.
ಅಗ್ನಿಶಾಮಕ ಮತ್ತು ಕಟ್ಟಡ ಸುರಕ್ಷತಾ ಪ್ರಮಾಣಪತ್ರ ಸಲ್ಲಿಸಬೇಕು. ಸೂಕ್ತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಹೊಂದಿರಬೇಕು. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ (ಎನ್‌ಟಿಇಸಿ) ಪ್ರಕಾರ ಶಿಕ್ಷಕರ ನೇಮಕಾತಿ ಮಾಡಿಕೊಂಡಿರಬೇಕು. ರಾಜ್ಯದ ಅನುದಾನಿತ ಶಾಲೆಗಳು ನಿರಾಕ್ಷೇಪಣ ಪತ್ರವನ್ನು ಪಡೆಯಲು ಅರ್ಹತೆ ಹೊಂದಿರುವುದಿಲ್ಲ. ನಿರಾಕ್ಷೇಪಣ ಪತ್ರ ಪಡೆದ ಎರಡು ವರ್ಷದೊಳಗೆ ಸಂಬಂಧಪಟ್ಟ ಮಂಡಳಿಯ ಪಠ್ಯ ಸಂಯೋಜನೆ ಪಡೆಯಬೇಕು ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಿದೆ.