ಬಾಗಲಕೋಟೆ: ಕನ್ನಡ ಒಂದು ಭಾಷೆಯಲ್ಲ ಅದು ಈ ನಾಡಿನ ಅಸ್ಮಿತೆ. ಮಾತೃಭಾಷೆಯಾದ ಕನ್ನಡ ಆಡಳಿತ ಮತ್ತು ವಾಣಿಜ್ಯ ಭಾಷೆಯಾಗಿ ಬೆಳಯಬೇಕಾಗಿದೆ. ಮನುಷ್ಯ ಮನುಷ್ಯರ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಮಾತೃಭಾಷೆ ಕನ್ನಡ ಎಂದು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಜಿಲ್ಲಾ ಕಸಾಪ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿಯೆ ಕರ್ನಾಟಕದ ಕನ್ನಡ ಸಂಸ್ಕೃತಿ ಶ್ರೀಮಂತವಾಗಿದ್ದು, ಇಂದಿನ ತಂತ್ರಜ್ಞಾನದ ಆಧುನಿಕ ದಿನಮಾನಗಳಲ್ಲಿ ನಮ್ಮ ದೇಶಿಯ ಕನ್ನಡ ಸಂಸ್ಕೃತಿ ಬಳಸುವುದರೊಂದಿಗೆ ಅದನ್ನು ಉಳಿಸಿ, ಬೆಳೆಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದರು. ನಿವೃತ್ತ ಎಂಜಿನಿಯರ್ ಸಿ.ಎಚ್. ಕಟಗೇರಿ, ಶಿಲ್ಪಾ ಯರಾಶಿ ಮಾತನಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ. ಗುಡೂರ, ಸಂಗಪ್ಪ ನಾಲತವಾಡ, ಬಿವಿವಿಎಸ್ ಅಕ್ಕನ ಬಳಗದ ಕಾರ್ಯದರ್ಶಿ ವಿಜಯಲಕ್ಷ್ಮೀ ಭದ್ರಶೆಟ್ಟಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಕಜಾಪ ಜಿಲ್ಲಾ ಕಾರ್ಯದರ್ಶಿ ಸಿ.ಎನ್. ಬಾಳಕ್ಕನವರ ಉಪಸ್ಥಿತರಿದ್ದರು.
ನಸೀಮ್ ಪ್ರಥಮ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೀರಪ್ಪ ಬಿಜ್ಜರಗಿ ಅವರು ಕಸಾಪದಲ್ಲಿ ಮುಂಜಾನೆ 8 ಗಂಟೆಗೆ 67 ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಮಾಡಿದರು. ತಾಲೂಕು ಕೋಶಾಧ್ಯಕ್ಷ ಬಸಲಿಂಗಯ್ಯ ಮಠಪತಿ ನಾಡಗೀತೆ ಹಾಡಿದರು.
ಬಾಗಲಕೋಟೆ ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಗೌರವ ಕಾರ್ಯದರ್ಶಿ ಸಂಗಮೇಶ ಸಣ್ಣತಂಗಿ
ಸ್ವಾಗತಿಸಿದರು. ಕಸಾಪ ಮಹಿಳಾ ಪ್ರತಿನಿಧಿ ಡಾ|ಉಮಾ ಅಕ್ಕಿ ನಿರೂಪಿಸಿದರು.